ನವದೆಹಲಿ(ಜ.11): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಪಾಲಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದ್ದು, ವಿರುಷ್ಕಾ ಜೋಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟ್ವಿಟರ್ ಮೂಲಕ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದು, ಇಂದು ಮಧ್ಯಾಹ್ನ ನಮಗೆ ಹೆಣ್ಣು ಮಗುವಾಗಿದೆ ಎಂದು ತಿಳಿಸಲು ಸಂತಸವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆಗೆ ಧನ್ಯವಾದಗಳು. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ನೀವೆಲ್ಲರೂ ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಗ್ಲಿ ಹಾಗೂ ಅನುಷ್ಕಾ ಶರ್ಮಾ 2018ರಲ್ಲಿ ವಿವಾಹವಾಗಿದ್ದರು. ಇನ್ನು ಕಳೆದ ವರ್ಷದ ಆಗಸ್ಟ್ 27ರಂದು ವಿರುಷ್ಕಾ ಜೋಡಿ ತಮ್ಮ ಕುಟುಂಬಕ್ಕೆ ನೂತನ ಅತಿಥಿಯನ್ನು ಸ್ವಾಗತಿಸುವ ವಿಚಾರವನ್ನು ಖಚಿತ ಪಡಿಸಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಮುಕ್ತಾಯವಾದ ಬಳಿಕ ಪಿತೃತ್ವದ ರಜೆಯ ಮೇರೆಗೆ ತವರಿಗೆ ಮರಳಿದ್ದರು.

ಹಾರ್ದಿಕ್ ಪಾಂಡ್ಯ ದಂಪತಿ ಜೊತೆ ವಿರುಷ್ಕಾ ಜೋಡಿ ಪಾರ್ಟಿ!

ಇನ್ನು ವಿರುಷ್ಕಾ ದಂಪತಿ ಪ್ರಪಂಚಕ್ಕೆ ಹೊಸ ಅತಿಥಿಯ ಆಗಮನವನ್ನು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‌, ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಅಲೆಕ್ಸಾಂಡ್ರ ಹಾರ್ಟ್ಲಿ ಸ್ವಾಗತಿಸಿದ್ದಾರೆ