ವಿಂಡೀಸ್ ಸರಣಿಗೆ ಕ್ಯಾಪ್ಟನ್ ರೋಹಿತ್ ಶರ್ಮಾಗೆ ವಿಶ್ರಾಂತಿ?
ಜುಲೈ 12ರಿಂದ ಆರಂಭವಾಗಲಿರುವ ವಿಂಡೀಸ್ ಎದುರಿನ ಸರಣಿ
ಹಿಟ್‌ಮ್ಯಾನ್ ಟೆಸ್ಟ್ ಅಥವಾ ಏಕದಿನ ಸರಣಿಗೆ ಗೈರು?
ಮಾಜಿ ನಾಯಕ ವಿರಾಟ್ ಕೊಹ್ಲಿಗೂ ವಿಶ್ರಾಂತಿ ಸಿಗುವ ಸಾಧ್ಯತೆ
ಮುಂಬೈ(ಜೂ.17): ಇತ್ತೀಚೆಗಷ್ಟೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಸೋತಿದ್ದ ಭಾರತ ಮುಂದಿನ ತಿಂಗಳು ವೆಸ್ಟ್ಇಂಡೀಸ್ ಸರಣಿ ಮೂಲಕ ಮತ್ತೆ ಅಂತಾರಾಷ್ಟ್ರೀಯ ಸರಣಿಯಲ್ಲಿ ತೊಡಗಿಸಿಕೊಳ್ಳಲಿದ್ದು, ತಂಡದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಪ್ರಮುಖರಿಗೆ ವಿಶ್ರಾಂತಿ ಸಿಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಐಪಿಎಲ್ ಸೇರಿದಂತೆ ಕೆಲ ಸಮಯದಿಂದ ರೋಹಿತ್ ಶರ್ಮಾ ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದು, ದೊಡ್ಡ ಇನ್ನಿಂಗ್‌್ಸ ಕಟ್ಟಲು ವಿಫಲರಾಗುತ್ತಿದ್ದಾರೆ. ಅವರು ಐಪಿಎಲ್ನಲ್ಲಿ 16 ಪಂದ್ಯಗಳಲ್ಲಿ 20.75ರ ಸರಾಸರಿಯಲ್ಲಿ 332 ರನ್ ಗಳಿಸಿದ್ದರೆ, ಟೆಸ್ಟ್ ವಿಶ್ವಕಪ್ ಫೈನಲ್ನಲ್ಲಿ ಕ್ರಮವಾಗಿ 15, 43 ರನ್ ಸಿಡಿಸಿದ್ದರು. ಹೀಗಾಗಿ ವಿಂಡೀಸ್ ಪ್ರವಾಸದಲ್ಲಿ 2 ಪಂದ್ಯಗಳ ಟೆಸ್ಟ್ ಅಥವಾ 3 ಪಂದ್ಯಗಳ ಏಕದಿನ ಸರಣಿಗೆ ರೋಹಿತ್ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಗಳು ರೋಹಿತ್ ಬಳಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಟೆಸ್ಟ್ ಸರಣಿಗೆ ರೋಹಿತ್ ಗೈರಾದರೆ ಅಜಿಂಕ್ಯ ರಹಾನೆ ತಂಡ ಮುನ್ನಡೆಸುವ ನಿರೀಕ್ಷೆಯಿದೆ.
ಕೊಹ್ಲಿಯೂ ಅಲಭ್ಯ?: ಇದೇ ವೇಳೆ ತಾರಾ ಆಟಗಾರ ವಿರಾಟ್ ಕೊಹ್ಲಿಗೂ ಸರಣಿಯಿಂದ ವಿಶ್ರಾಂತಿ ನೀಡಲು ಬಿಸಿಸಿಐ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದ್ದು, ಹಿರಿಯ ಬ್ಯಾಟರ್ ಚೇತೇಶ್ವರ್ ಪೂಜಾರಗೂ ವಿಶ್ರಾಂತಿ ಸಿಗಬಹುದು. ಒಂದು ವೇಳೆ ರೋಹಿತ್, ಕೊಹ್ಲಿ ಇಬ್ಬರಿಗೂ ವಿಶ್ರಾಂತಿ ನೀಡಿದರೆ ಆಗ ಪೂಜಾರ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚು. ಇನ್ನು, ಕೆಲಸದ ಒತ್ತಡ ತಪ್ಪಿಸಲು ವೇಗಿಗಳಾದ ಮೊಹಮದ್ ಶಮಿ, ಮೊಹಮದ್ ಸಿರಾಜ್‌ಗೆ ಕೂಡಾ ಬಿಸಿಸಿಐ ವಿಶ್ರಾಂತಿ ನೀಡಬಹುದು ಎಂದು ವರದಿಯಾಗಿದೆ.
WTC FInal: ಟೀಂ ಇಂಡಿಯಾದ ಆಯ್ಕೆಯಲ್ಲಿ ತಪ್ಪಾಯಿತು: ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ
ಜೂ.27ಕ್ಕೆ ತಂಡದ ಆಯ್ಕೆ?
ಜುಲೈ 12ರಿಂದ ಆರಂಭವಾಗಲಿರುವ ವಿಂಡೀಸ್ ಸರಣಿಗೆ ಜೂ.27ರಂದು ಬಿಸಿಸಿಐ ತಂಡ ಪ್ರಕಟಿಸಲಿದೆ ಎಂದು ವರದಿಯಾಗಿದೆ. ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ಯಶಸ್ವಿ ಜೈಸ್ವಾಲ್, ಋುತುರಾಜ್ ಗಾಯಕ್ವಾಡ್, ರಿಂಕು ಸಿಂಗ್, ತಿಲಕ್ ವರ್ಮಾ, ಸಾಯಿ ಸುದರ್ಶನ್ ಸೇರಿದಂತೆ ಹಲವು ಪ್ರತಿಭಾನ್ವಿತ ಆಟಗಾರರಿಗೆ ಬಿಸಿಸಿಐ ಮಣೆ ಹಾಕುವ ನಿರೀಕ್ಷೆಯಿದೆ.
ವಿಂಡೀಸ್ ಪ್ರವಾಸದ ವೇಳಾಪಟ್ಟಿ:
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜುಲೈ 12ರಿಂದ ಡೊಮಿನಿಕಾದಲ್ಲಿ ಆರಂಭವಾಗಲಿದ್ದು, ಜುಲೈ 20ರಿಂದ 2ನೇ ಟೆಸ್ಟ್ ಪಂದ್ಯ ಟ್ರಿನಿಡಾಡ್ನಲ್ಲಿ ನಡೆಯಲಿದೆ. ಬಳಿಕ ಜುಲೈ 27, 29ರಂದು ಮೊದಲೆರಡು ಏಕದಿನಕ್ಕೆ ಬಾರ್ಬಡಾಸ್, ಆಗಸ್ಟ್ 1ರಂದು 3ನೇ ಏಕದಿನಕ್ಕೆ ಟ್ರಿನಿಡಾಡ್ ಆತಿಥ್ಯ ವಹಿಸಲಿದೆ.
ಇನ್ನು ಆಗಸ್ಟ್ 3ರಿಂದ ಟ್ರಿನಿಡಾಡ್ನಲ್ಲೇ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, 2 ಮತ್ತು 3ನೇ ಪಂದ್ಯ ಕ್ರಮವಾಗಿ ಆಗಸ್ಟ್ 6, 8ಕ್ಕೆ ಗಯಾನದಲ್ಲಿ, 4 ಮತ್ತು 5ನೇ ಪಂದ್ಯ ಆಗಸ್ಟ್ 12 ಮತ್ತು 13ರಂದು ಫ್ಲೋರಿಡಾದಲ್ಲಿ ನಡೆಯಲಿದೆ.
ಬಿಸಿಸಿಐ ಕಿರಿಯರ ಆಯ್ಕೆ ಸಮಿತಿಗೆ ರಾಜ್ಯದ ತಿಲಕ್
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಿರಿಯರ ಆಯ್ಕೆ ಸಮಿತಿಗೆ ಕರ್ನಾಟಕದ ಮಾಜಿ ವಿಕೆಟ್ ಕೀಪರ್ ತಿಲಕ್ ನಾಯ್ಡು ಸೇರ್ಪಡೆಗೊಂಡಿದ್ದಾರೆ. ಕರ್ನಾಟಕ ಪರ 93 ಪ್ರಥಮ ದರ್ಜೆ, 53 ಲಿಸ್ಟ್ ‘ಎ’ ಪಂದ್ಯಗಳನ್ನು ಆಡಿರುವ 45 ವರ್ಷದ ತಿಲಕ್, ಸಮಿತಿಯಲ್ಲಿ ಎಸ್.ಶರತ್ ಅವರಿಂದ ತೆರವುಗೊಂಡಿದ್ದ ಸ್ಥಾನವನ್ನು ತುಂಬಲಿದ್ದು, ದಕ್ಷಿಣ ವಲಯವನ್ನು ಪ್ರತಿನಿಧಿಸಲಿದ್ದಾರೆ.
ಕಳೆದ ಜನವರಿವರೆಗೆ ಶರತ್ ಕಿರಿಯರ ಆಯ್ಕೆ ಸಮಿತಿಗೆ ಮುಖ್ಯಸ್ಥರಾಗಿದ್ದರು. ಆದರೆ ಅವರನ್ನು ಬಿಸಿಸಿಐ, ಹಿರಿಯರ ಆಯ್ಕೆ ಸಮಿತಿಗೆ ಸೇರ್ಪಡೆಗೊಳಿಸಿದ ಬಳಿಕ ಆ ಸ್ಥಾನ ಖಾಲಿ ಇತ್ತು. ಇನ್ನು, ಚೇತನ್ ಶರ್ಮಾ ರಾಜೀನಾಮೆಯಿಂದ ತೆರವುಗೊಂಡಿರುವ ಹಿರಿಯರ ಆಯ್ಕೆ ಸಮಿತಿ ಸ್ಥಾನಕ್ಕೆ ಬಿಸಿಸಿಐ ಶೀಘ್ರವೇ ಮತ್ತೊಬ್ಬರನ್ನು ನೇಮಿಸಲಿದೆ ಎನ್ನಲಾಗಿದೆ.