* 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ರೋಹಿತ್ ಶರ್ಮಾ* ರೋಹಿತ್ ಶರ್ಮಾ ಐಪಿಎಲ್‌ನಿಂದ ಬ್ರೇಕ್‌ ಪಡೆಯಲಿ ಎಂದು ಸುನಿಲ್ ಗವಾಸ್ಕರ್* ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಕಡೆ ಗಮನವಿರಲಿ ಎಂದ ಸನ್ನಿ

ಅಹಮದಾಬಾದ್‌(ಏ.26): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಎದುರು ರೋಹಿತ್ ಶರ್ಮಾ ನೇತೃತ್ವದ ಐದು ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವು ಹೀನಾಯ ಸೋಲು ಅನುಭವಿಸಿದೆ. ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್‌ ನೀಡಿದ್ದ 208 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 152 ರನ್‌ ಗಳಿಸಲಷ್ಟೇ ಶಕ್ತವಾಯಿತು. ಗುಜರಾತ್ ಟೈಟಾನ್ಸ್ ಪರ ಆಫ್ಘಾನಿಸ್ತಾನದ ಸ್ಪಿನ್ನರ್‌ಗಳಾದ ನೂರ್ ಅಹಮ್ಮದ್(37/3) ಹಾಗೂ ರಶೀದ್ ಖಾನ್‌(27/2) ಮಾರಕ ದಾಳಿ ನಡೆಸುವ ಮೂಲಕ ಮುಂಬೈ ಬ್ಯಾಟರ್‌ಗಳು ತಬ್ಬಿಬ್ಬಾಗುವಂತೆ ಮಾಡಿದರು. ಮುಂಬೈ ಇಂಡಿಯನ್ಸ್ ತಂಡವು ಸೋಲು ಅನುಭವಿಸಿದ ಬೆನ್ನಲ್ಲೇ ಮಾತನಾಡಿರುವ ಕ್ರಿಕೆಟ್ ದಿಗ್ಗಜ ಸುನಿಲ್‌ ಗವಾಸ್ಕರ್, ರೋಹಿತ್ ಶರ್ಮಾ ಕೆಲವು ಐಪಿಎಲ್‌ ಪಂದ್ಯಗಳಿಂದ ವಿಶ್ರಾಂತಿ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಎದುರಾಳಿ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ 8 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಟೀಂ ಇಂಡಿಯಾ ನಾಯಕರಾಗಿರುವ ರೋಹಿತ್ ಶರ್ಮಾ, ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಕಡೆ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಐಪಿಎಲ್‌ನಿಂದ ಕೆಲ ಪಂದ್ಯಗಳ ಪಟ್ಟಿಗೆ ಬಿಡುವು ಪಡೆಯಲಿ ಎಂದು ಸಲಹೆ ನೀಡಿದ್ದಾರೆ. 

"ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ಬದಲಾವಣೆಯನ್ನು ನಾನು ನೋಡಲು ಬಯಸುತ್ತೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಕೆಲವು ಪಂದ್ಯಗಳ ಮಟ್ಟಿಗಾದರೂ ರೋಹಿತ್ ಶರ್ಮಾ, ಐಪಿಎಲ್‌ನಿಂದ ಬ್ರೇಕ್ ತೆಗೆದುಕೊಳ್ಳಲಿ ಎಂದು ಬಯಸುತ್ತೇನೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಫಿಟ್ ಆಗಿರುವ ಉದ್ದೇಶದಿಂದ ರೋಹಿತ್‌ ಐಪಿಎಲ್‌ನಿಂದ ಬಿಡುವು ಪಡೆಯಲಿ ಎಂದು ಬಯಸುತ್ತೇನೆ. ಅವರು ಐಪಿಎಲ್‌ನ ಕೊನೆಯ ಕೆಲ ಪಂದ್ಯಗಳಿಗೆ ಮತ್ತೆ ಬೇಕಿದ್ದರೇ ವಾಪಾಸ್ಸಾಗಲಿ. ಆದರೆ ಸದ್ಯದ ಕೆಲ ಪಂದ್ಯಗಳಿಂದ ಬಿಡುವು ಪಡೆಯುವುದು ಒಳ್ಳೆಯದು" ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಸಾಕಷ್ಟು ಸಮಯದಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಹೀಗಾಗಿ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಬಗ್ಗೆಯೂ ಗಮನಹರಿಸಬೇಕಿದೆ. ಹೀಗಾಗಿ ಮಧ್ಯದಲ್ಲಿ ವಿಶ್ರಾಂತಿ ಪಡೆದು, ಐಪಿಎಲ್‌ನ ಕೊನೆಯ ಮೂರ್ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಆಡಲು ಲಯಕ್ಕೆ ಬರಲು ನೆರವಾಗಲಿದೆ ಎಂದು ಸನ್ನಿ ಹೇಳಿದ್ದಾರೆ.

IPL 2023 ಕೆಕೆಆರ್‌ ವಿರುದ್ಧ ಸೇಡಿಗೆ ಆರ್‌ಸಿಬಿ ತುಡಿತ!

ಇನ್ನು ಕಳೆದ ವರ್ಷದ ಐಪಿಎಲ್‌ ವೇಳೆ ವಿರಾಟ್ ಕೊಹ್ಲಿ ರನ್ ಬರ ಅನುಭವಿಸಿದ್ದರು. ಇದಾದ ಬಳಿಕ ಕ್ರಿಕೆಟ್‌ಗೆ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದರು. ಇದೀಗ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ರನ್ ಮಳೆ ಸುರಿಸುತ್ತಿದ್ದಾರೆ. 

ಟೆಸ್ಟ್‌ ವಿಶ್ವ​ಕಪ್‌ ಫೈನ​ಲ್‌​ಗೆ ಭಾರತ ತಂಡದಲ್ಲಿ ರಹಾ​ನೆ

ನವ​ದೆ​ಹ​ಲಿ: ಜೂ.7ರಿಂದ ಲಂಡ​ನ್‌ನ ಓವಲ್‌ ಕ್ರೀಡಾಂಗ​ಣ​ದಲ್ಲಿ ನಡೆಯಲಿರುವ ಆಸ್ಪ್ರೇ​ಲಿಯಾ ವಿರು​ದ್ಧದ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿ​ಯ​ನ್‌​ಶಿಪ್‌ ಫೈನಲ್‌ ಪಂದ್ಯಕ್ಕೆ ಮಂಗ​ಳ​ವಾರ ಭಾರತ ತಂಡ ಪ್ರಕ​ಟ​ಗೊಂಡಿದ್ದು, ಕಳಪೆ ಆಟ​ದಿಂದಾಗಿ ಕೆಲ ಸಮ​ಯ​ದಿಂದ ತಂಡ​ದಿಂದ ಹೊರ​ಬಿ​ದ್ದಿದ್ದ ಹಿರಿಯ ಆಟ​ಗಾರ ಅಜಿಂಕ್ಯ ರಹಾನೆ ತಂಡಕ್ಕೆ ಮರ​ಳಿ​ದ್ದಾರೆ.

ಅಜಿಂಕ್ಯ ರಹಾನೆ 2022ರ ಜನ​ವ​ರಿ​ಯಲ್ಲಿ ಕೊನೆ ಬಾರಿ ಟೆಸ್ಟ್‌ ಆಡಿದ್ದು, ನಿರೀ​ಕ್ಷಿತ ಪ್ರದ​ರ್ಶನ ನೀಡದ್ದಕ್ಕೆ ತಂಡ​ದಿಂದ ಕೈಬಿ​ಡ​ಲಾ​ಗಿತ್ತು. ಇದೇ ವೇಳೆ ಸತತ ವೈಫ​ಲ್ಯ​ಗ​ಳಿಂದಾಗಿ ಟೀಕೆ​ಗೆ ಗುರಿ​ಯಾ​ಗಿದ್ದ ಕನ್ನ​ಡಿಗ ಕೆ.ಎ​ಲ್‌.​ರಾ​ಹುಲ್‌ ಕೂಡಾ ಸ್ಥಾನ ಗಿಟ್ಟಿ​ಸಿ​ಕೊಂಡಿ​ದ್ದಾ​ರೆ. ಆದ​ರೆ ಇತ್ತೀ​ಚೆಗೆ ಭಾರ​ತ​ದಲ್ಲೇ ನಡೆ​ದಿದ್ದ ಆಸ್ಪ್ರೇ​ಲಿಯಾ ವಿರು​ದ್ಧದ ಸರ​ಣಿ​ಯ​ಲ್ಲಿದ್ದ ಸೂರ‍್ಯ​ಕು​ಮಾರ್‌, ಕುಲ್ದೀಪ್‌ ಯಾದವ್‌, ಇಶಾನ್‌ ಕಿಶನ್‌ 15 ಮಂದಿಯ ತಂಡ​ದಲ್ಲಿ ಸ್ಥಾನ ಪಡೆ​ದಿಲ್ಲ. ವಿಕೆಟ್‌ ಕೀಪರ್‌ ಆಗಿ ಭರತ್‌ ಮುಂದು​ವ​ರಿ​ಯ​ಲಿದ್ದು, ವೇಗಿ ಉನಾ​ದ್ಕತ್‌ ಕೂಡಾ ತಂಡಕ್ಕೆ ಮರ​ಳಿ​ದ್ದಾ​ರೆ.

ಭಾರತ ತಂಡ: ರೋಹಿತ್‌ ಶರ್ಮಾ(​ನಾ​ಯ​ಕ), ಶುಭ್‌ಮನ್‌ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ ಎಲ್ ರಾ​ಹುಲ್‌, ಕೆ ಎಸ್ ಭರತ್‌, ರವಿಚಂದ್ರನ್ ​ಅ​ಶ್ವಿನ್‌, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್, ಶಾರ್ದೂಲ್‌ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್, ಜಯದೇವ್ ಉನಾ​ದ್ಕ​ತ್‌.