Asianet Suvarna News Asianet Suvarna News

ಸಿರಾಜ್, ಶಮಿ/ಚಹರ್..? ಜಸ್ಪ್ರೀತ್ ಬುಮ್ರಾ ಬದಲಿ ಆಟಗಾರನ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು..?

ಬೆನ್ನು ನೋವಿನ ಸಮಸ್ಯೆಯಿಂದ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಜಸ್ಪ್ರೀತ್ ಬುಮ್ರಾ
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆರಂಭ
ಬುಮ್ರಾ ಬದಲಿ ಆಟಗಾರನ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ ನಾಯಕ ರೋಹಿತ್ ಶರ್ಮಾ

Team India Captain Rohit Sharma drops big update on Jasprit Bumrah replacement for T20 World Cup 2022 kvn
Author
First Published Oct 5, 2022, 11:11 AM IST

ಇಂದೋರ್(ಅ.05): ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ. ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ಬೆನ್ನು ನೋವಿನಿಂದ ಬಳಲುತ್ತಿರುವ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ಜಸ್ಪ್ರೀತ್ ಬುಮ್ರಾ ಬದಲಿಗೆ 15 ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವವರು ಯಾರು ಎನ್ನುವ ಕುತೂಹಲ ಜೋರಾಗಿದೆ. ಇದೀಗ ಈ ಕುರಿತಂತೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಮತ್ತೊಮ್ಮೆ ದುಬಾರಿಯಾಗಿದ್ದರು. ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು 49 ರನ್‌ಗಳ ಸೋಲು ಅನುಭವಿಸಿತ್ತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ರಿಏ ರೂಸ್ಸೋ ಅಜೇಯ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 227 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಟೀಂ ಇಂಡಿಯಾ 178 ರನ್‌ಗಳಿಗೆ ಸರ್ವಪತನ ಕಂಡಿತು. ಇದರ ಹೊರತಾಗಿಯೂ ಟೀಂ ಇಂಡಿಯಾ 2-1 ಅಂತರದಲ್ಲಿ ಟಿ20 ಸರಣಿಯನ್ನು ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಈಗಾಗಲೇ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿದಾಗಲೇ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ವೇಗದ ಬೌಲಿಂಗ್ ಆಲ್ರೌಂಡರ್ ದೀಪಕ್ ಚಹರ್ ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಇಬ್ಬರ ಪೈಕಿ ಒಬ್ಬರು ಟೀಂ ಇಂಡಿಯಾ 15 ಆಟಗಾರರನ್ನೊಳಗೊಂಡ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಕಳೆದೊಂದು ವರ್ಷದಿಂದ ಮೊಹಮ್ಮದ್ ಶಮಿ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನೇ ಆಡಿಲ್ಲ. ಇನ್ನು ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಗೆ ಶಮಿಯನ್ನು ಆಯ್ಕೆ ಮಾಡಲಾಗಿತ್ತಾದರೂ, ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದರಿಂದ ಆಸೀಸ್ ಹಾಗೂ ಹರಿಣಗಳ ಎದುರಿನ ಟಿ20 ಸರಣಿಯಿಂದ ಹೊರಬಿದ್ದಿದ್ದರು. ಇದರ ಬೆನ್ನಲ್ಲೇ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿತ್ತು. 

T20 World Cup ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಕಾಡಲಿದೆ: ರಾಹುಲ್ ದ್ರಾವಿಡ್

ಇದೀಗ ದಕ್ಷಿಣ ಆಫ್ರಿಕಾ ಎದುರಿನ ಮೂರನೆ ಟಿ20 ಪಂದ್ಯ ಮುಕ್ತಾಯದ ಬಳಿಕ ಬುಮ್ರಾ ಬದಲಿ ಆಟಗಾರನ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ, ಒಂದು ತಂಡವಾಗಿ ನಾನು ಈ ಮೊದಲೇ ಹೇಳಿದ್ದೆ, ಫಲಿತಾಂಶದ ಬಗ್ಗೆ ಹೆಚ್ಚು ಆಲೋಚಿಸುವ ಅಗತ್ಯವಿಲ್ಲ. ನಮ್ಮಲ್ಲಿನ ಕೆಲ ಕ್ಷೇತಗಳಲ್ಲಿ ಸಾಕಷ್ಟು ಸುಧಾರಿಸಿಕೊಳ್ಳುವತ್ತ ಹೆಜ್ಜೆಹಾಕಬೇಕೆಂದು. ಒಂದು ತಂಡವಾಗಿ ಮತ್ತಷ್ಟು ಬಲಿಷ್ಠವಾಗುವತ್ತ ಹೆಜ್ಜೆಹಾಕಿದ್ದೇವೆ. ಎದುರಾಳಿ ತಂಡಗಳು ನಮ್ಮ ಎಲ್ಲಾ ವಿಭಾಗದ ಮೇಲೆ ಸವಾಲು ಎಸೆದವು. ನಮ್ಮ ಬೌಲಿಂಗ್ ಬಗ್ಗೆ ನಾವು ಇನ್ನಷ್ಟು ಗಮನ ಹರಿಸಬೇಕಿದೆ. ನಾವು ಎರಡು ಗುಣಮಟ್ಟದ ತಂಡಗಳೆದುರು ಆಡಿದ್ದೇವೆ. ನಾವು ಕಠಿಣ ಸವಾಲನ್ನು ಮೆಟ್ಟಿ ನಿಂತಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ನಾವು ಏನು ಅತ್ಯುತ್ತಮವಾದದನ್ನು ಮಾಡಬಹುದು ಎನ್ನುವುದರ ಬಗ್ಗೆ ಯೋಚಿಸುತ್ತಿರುತ್ತೇವೆ. ನಾವು ಅದರತ್ತ ಗಮನ ಹರಿಸುತ್ತಿದ್ದೇವೆ. ಸಾಕಷ್ಟು ಆಟಗಾರರಿಗೆ ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವವಿಲ್ಲ. ಹೀಗಾಗಿ ನಾವು ಸ್ವಲ್ಪ ಮುಂಚಿತವಾಗಿಯೇ ಆಸ್ಟ್ರೇಲಿಯಾಗೆ ತೆರಳುತ್ತಿದ್ದೇವೆ. ಪರ್ತ್‌ನಲ್ಲಿರುವ ಬೌನ್ಸಿ ಪಿಚ್‌ನಲ್ಲಿ ನಾವು ಅಭ್ಯಾಸ ನಡೆಸಲಿದ್ದೇವೆ. ಅಲ್ಲಿ ನಾವೇನು ಮಾಡಬಹುದು ಎನ್ನುವುದರ ಬಗ್ಗೆ ಆಲೋಚಿಸಲಿದ್ದೇವೆ. ಸದ್ಯ ತಂಡದಲ್ಲಿರುವ ಕೇವಲ 7-8 ಆಟಗಾರರು ಮಾತ್ರ ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವವಿದೆ. ಹೀಗಾಗಿ ನಾವು ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಕೆಲವು ಅಭ್ಯಾಸ ಪಂದ್ಯಗಳನ್ನು ಆಡಲಿದ್ದೇವೆ. ಸರಿಯಾದ ಬೌಲಿಂಗ್ ಸಂಯೋಜನೆಯಿಂದ ಕಣಕ್ಕಿಳಿಯುವ ಉದ್ದೇಶದಿಂದ ಆಸ್ಟ್ರೇಲಿಯಾದಲ್ಲಿನ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ನಾವು ಜಸ್ಪ್ರೀತ್ ಬುಮ್ರಾ ಅವರ ಬದಲಿ ಆಟಗಾರನನ್ನು ಆಯ್ಕೆ ಮಾಡಲಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Follow Us:
Download App:
  • android
  • ios