* ಟಿ20 ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ಬಂದಿಳಿದ ಟೀಂ ಇಂಡಿಯಾ* ಪರ್ತ್‌ನಲ್ಲಿ ಅಭ್ಯಾಸ ಆರಂಭಿಸಿದ ರೋಹಿತ್ ಶರ್ಮಾ ಪಡೆ* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆರಂಭ

ಪರ್ತ್‌(ಅ.07): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಟಿ20 ವಿಶ್ವಕಪ್ ಗೆಲ್ಲುವ ಕನಸು ಹೊತ್ತು ಆಸ್ಟ್ರೇಲಿಯಾಗೆ ಬಂದಿಳಿದಿದೆ. ಪಶ್ಚಿಮ ಆಸ್ಟ್ರೇಲಿಯಾದ ರಾಜಧಾನಿಯಾಗಿರುವ ಪರ್ತ್‌ನಲ್ಲಿ ಬಂದಿಳಿದ ಟೀಂ ಇಂಡಿಯಾ, ಇಲ್ಲಿನ WACA ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿದೆ.

ಗುರುವಾರವಷ್ಟೇ ಭಾರತ ಕ್ರಿಕೆಟ್ ತಂಡವು ಸಹಾಯಕ ಸಿಬ್ಬಂದಿಗಳ ಜತೆಗೂಡಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಸ್ಟ್ರೇಲಿಯಾಗೆ ವಿಮಾನವೇರಿತ್ತು. ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯನ್ನು ಮುಗಿಸಿದ ಮರು ದಿನವೇ ಟೀಂ ಇಂಡಿಯಾ, ಆಸ್ಟ್ರೇಲಿಯಾದತ್ತ ಮುಖ ಮಾಡಿತ್ತು. ಇದೀಗ ಭಾರತೀಯ ಆಟಗಾರರು ಶುಕ್ರವಾರ ಮುಂಜಾನೆ ಆಸ್ಟ್ರೇಲಿಯಾದಲ್ಲಿ ಅಭ್ಯಾಸ ನಿರತರಾಗಿರುವ ಫೋಟೋವನ್ನು ಬಿಸಿಸಿಐ ತ ಹಂಚಿಕೊಂಡಿದೆ. 

Scroll to load tweet…

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆರಂಭವಾಗಲಿದೆಯಾದರೂ, ಟೀಂ ಇಂಡಿಯಾ, ಚುಟುಕು ಕ್ರಿಕೆಟ್ ವಿಶ್ವಕಪ್ ಆರಂಭಕ್ಕೆ 10 ದಿನ ಬಾಕಿ ಇರುವಾಗಲೇ ಕಾಂಗರೂ ನಾಡಿಗೆ ಬಂದಿಳಿದಿದೆ. ಭಾರತ ತಂಡವು, ಆಸೀಸ್‌ ನೆಲದಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಪಶ್ಚಿಮ ಆಸ್ಟ್ರೇಲಿಯಾ ತಂಡದ ವಿರುದ್ದ ಅಕ್ಟೋಬರ್ 10 ಹಾಗೂ ಅಕ್ಟೋಬರ್ 13ರಂದು ಪರ್ತ್‌ನಲ್ಲಿ ಅಭ್ಯಾಸ ಪಂದ್ಯವನ್ನಾಡಲಿದೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಕ್ಟೋಬರ್ 23ರಂದು ಬದ್ದ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬೊರ್ನ್‌ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ. ಸೂಪರ್ 12 ಹಂತದ ಪಂದ್ಯಗಳು ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

T20 World Cup: ಚುಟುಕು ಕ್ರಿಕೆಟ್‌ ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ಹಾರಿದ ಟೀಂ ಇಂಡಿಯಾ

ಸದ್ಯ ಟೀಂ ಇಂಡಿಯಾ, 14 ಅಧಿಕೃತ ಆಟಗಾರರನ್ನೊಳಗೊಂಡ ತಂಡದೊಂದಿಗೆ ಆಸ್ಟ್ರೇಲಿಯಾಗೆ ಬಂದಿಳಿದಿದೆ. ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ, ಬೆನ್ನು ನೋವಿನ ಸಮಸ್ಯೆಯಿಂದಾಗಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದು, ಅವರ ಬದಲಿ ಆಟಗಾರನನ್ನು ಬಿಸಿಸಿಐ ಇನ್ನೂ ಹೆಸರಿಸಿಲ್ಲ. ಈ ಕುರಿತಂತೆ ಪ್ರತಿಕ್ರಿಯಿಸಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ತಲುಪಿದ ಬಳಿಕ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದ್ದರು.

ಭಾರತ ಕ್ರಿಕೆಟ್‌ ತಂಡವು ಆಸ್ಟ್ರೇಲಿಯಾಗೆ ತೆರಳುವ ಮುನ್ನ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ದ ಟಿ20 ಸರಣಿ ಜಯಿಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಅದರಲ್ಲೂ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಹಾಗೂ ದಿನೇಶ್ ಕಾರ್ತಿಕ್‌ ಭರ್ಜರಿ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಆದರೆ ಬೌಲಿಂಗ್‌ನಲ್ಲಿ ತಂಡವು ದುಬಾರಿಯಾಗುತ್ತಿದ್ದು, ಈ ಬಗ್ಗೆ ಗಮನ ಹರಿಸಲಿದ್ದೇವೆ ಎಂದು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹೇಳಿದ್ದರು.