ನವದೆಹಲಿ(ಜ.04): ಟೀಂ ಇಂಡಿಯಾ ಹಿರಿಯ ಆಲ್ರೌಂಡರ್ ಇರ್ಫಾನ್ ಪಠಾಣ್ ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ 17 ವರ್ಷಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ತೆರೆ ಬಿದ್ದಿದೆ. 2012ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಠಾಣ್ ಕಡೆಯ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. 

2003ರಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ 19 ವರ್ಷದ ಬರೋಡದ ಎಡಗೈ ವೇಗಿ, ಆ ಬಳಿಕ ಭಾರತದ ಉಪಯುಕ್ತ ಆಲ್ರೌಂಡರ್ ಆಗಿ ಹೊರಹೊಮ್ಮಿದ್ದರು. 2006ರಲ್ಲಿ ಕರಾಚಿ ಟೆಸ್ಟ್ ಪಂದ್ಯದ ಮೊದಲ ಓವರ್‌ನಲ್ಲೇ ಸಲ್ಮಾನ್ ಭಟ್, ಯೂನಿಸ್ ಖಾನ್ ಹಾಗೂ ಮೊಹಮ್ಮದ್ ಯೂಸೂಫ್ ಅವರನ್ನು ಬಲಿ ಪಡೆಯುವ ಮೂಲಕ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಇಲ್ಲಿಯವರೆಗೂ ಟೆಸ್ಟ್ ಪಂದ್ಯದ ಮೊದಲ ಓವರ್’ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ಭಾರತದ ಸ್ವಿಂಗ್ ಕಿಂಗ್ ಇರ್ಫಾನ್ ಪಠಾಣ್ ಹೆಸರಿನಲ್ಲಿದೆ. 

2020ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಲಿರುವ ಟಾಪ್ 5 ಕ್ರಿಕೆಟಿಗರಿವರು

ಇನ್ನು 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ರೋಚಕವಾಗಿ ಮಣಿಸಿ ಭಾರತ ಚಾಂಪಿಯನ್ ಆಗಿ ಮೆರೆದಾಡಿತ್ತು. ಆ ಪಂದ್ಯದ ಪಂದ್ಯಶ್ರೇಷ್ಠ ಗೌರವಕ್ಕೆ ಪಠಾಣ್ ಭಾಜನರಾಗಿದ್ದರು. ಪದೇ ಪದೇ ಗಾಯಕ್ಕೆ ತುತ್ತಾಗುತ್ತಿದ್ದ ಪಠಾಣ್ ಕೊನೆಗೂ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ.

ಇರ್ಫಾನ್ ಪಠಾಣ್ 29 ಟೆಸ್ಟ್ ಪಂದ್ಯಗಳನ್ನಾಡಿ 100 ವಿಕೆಟ್ ಕಬಳಿಸಿದ್ದಾರೆ. ಬ್ಯಾಟಿಂಗ್’ನಲ್ಲಿ ಒಂದು ಶತಕ ಹಾಗೂ 6 ಅರ್ಧಶತಕ ಸಹಿತ 1105 ರನ್ ಬಾರಿಸಿದ್ದಾರೆ. ಇನ್ನು 120 ಏಕದಿನ ಪಂದ್ಯಗಳನ್ನಾಡಿರುವ ಪಠಾಣ್ 173 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್’ನಲ್ಲಿ 5 ಅರ್ಧಶತಕ ಸಹಿತ 1544 ರನ್ ಚಚ್ಚಿದ್ದಾರೆ. 24 ಟಿ20 ಪಂದ್ಯಗಳನ್ನಾಡಿರುವ ಪಠಾಣ್ 28 ವಿಕೆಟ್ ಕಬಳಿಸಿದ್ದಾರೆ. ಇನ್ನು ಬ್ಯಾಟಿಂಗ್’ನಲ್ಲಿ 172 ರನ್ ಬಾರಿಸಿದ್ದಾರೆ. 

ಸಿನಿ​ಮಾ​ದಲ್ಲಿ ಮಿಂಚಲು ರೆಡಿಯಾದ ಟೀಂ ಇಂಡಿಯಾ ಟಿ20 ವಿಶ್ವಕಪ್ ಹೀರೋ..!

ಐಪಿಎಲ್ ಟೂರ್ನಿಯಲ್ಲಿ ಇರ್ಫಾನ್ ಪಠಾಣ್ ಕಿಂಗ್ಸ್ ಇಲೆವನ್ ಪಂಜಾಬ್, ಡೆಲ್ಲಿ ಡೇರ್ ಡೆವಿಲ್ಸ್, ರೈಸಿಂಗ್ ಪುಣೆ ಸೂಪರ್’ಜೈಂಟ್ಸ್, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ದೇಸಿ ಕ್ರಿಕೆಟ್’ನಲ್ಲಿ ಬರೋಡ ತಂಡವನ್ನು ಪ್ರತಿನಿಧಿಸುತ್ತಿದ್ದ ಪಠಾಣ್, 2018ರಲ್ಲಿ ಜಮ್ಮು ಕಾಶ್ಮಿರ ತಂಡವನ್ನು ಕೂಡಿಕೊಂಡಿದ್ದರು.