ಚೆನ್ನೈ(ಫೆ.05): ಇಂಗ್ಲೆಂಡ್‌ ವಿರುದ್ದ ಮೊದಲ ಟೆಸ್ಟ್‌ ಪಂದ್ಯ ಆರಂಭಕ್ಕೆ ಕೆಲವೇ ಘಂಟೆಗಳು ಬಾಕಿ ಇರುವಾಗಲೇ ಟೀಂ ಇಂಡಿಯಾ ಪಾಲಿಗೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ಆಲ್ರೌಂಡರ್‌ ಅಕ್ಷರ್ ಪಟೇಲ್‌ ಮೊಣಕಾಲು ಗಾಯದ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.

ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಚೆನ್ನೈನ ಎಂ ಎ ಚಿದಂಬರಂ ಮೈದಾನ ಆತಿಥ್ಯವನ್ನು ವಹಿಸಿದೆ. ಈ ಪಂದ್ಯಕ್ಕೆ ಎಡಗೈ ಸ್ಪಿನ್ನರ್‌ ಅಕ್ಷರ್ ಪಟೇಲ್‌ ಅಲಭ್ಯರಾಗಿದ್ದಾರೆ. ಗುರುವಾರ ಅಭ್ಯಾಸ ನಡೆಸುವ ವೇಳೆ ಅಕ್ಷರ್‌ ಪಟೇಲ್‌ ಎಡಗಾಲಿನ ನೋವಿಗೆ ತುತ್ತಾಗಿದ್ದರು ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಶಹಬಾಜ್‌ ನದೀಮ್‌ ಹಾಗೂ ರಾಹುಲ್‌ ಚಹರ್‌ ಭಾರತದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದು, ಮೊದಲ ಪಂದ್ಯಕ್ಕಾಗಿ ಅಕ್ಷರ್‌ ಪಟೇಲ್‌ ಬದಲಿಗೆ ಈ ಇಬ್ಬರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿ ವೇಳೆ ಗಾಯಕ್ಕೆ ತುತ್ತಾಗಿದ್ದರಿಂದ ಅಕ್ಷರ್‌ ಪಟೇಲ್‌ಗೆ ಟೀಂ ಇಂಡಿಯಾದಿಂದ ಬುಲಾವ್‌ ಬಂದಿತ್ತು. ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಕನವರಿಕೆಯಲ್ಲಿದ್ದ ಅಕ್ಷರ್‌ ಪಟೇಲ್‌ಗೆ ಗಾಯದ ಸಮಸ್ಯೆ ತಣ್ಣೀರೆರಚಿದೆ.

ಇಂದಿನಿಂದ ಭಾರತಕ್ಕೆ ಇಂಗ್ಲೆಂಡ್‌ ಟೆಸ್ಟ್

ಸದ್ಯ ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಅಕ್ಷರ್ ಪಟೇಲ್‌ ಆರೋಗ್ಯದ ಮೇಲೆ ಕಣ್ಣಿಟ್ಟಿದ್ದೆ. ಇದೀಗ ಅಕ್ಷರ್ ಪಟೇಲ್‌ ಅನುಪಸ್ಥಿತಿಯಲ್ಲಿ ವಾಷಿಂಗ್ಟನ್ ಸುಂದರ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.