T20 World Cup ಮೂಸಿ ನೋಡಿ ತಮ್ಮ ಜೆರ್ಸಿ ಪತ್ತೆ ಹಚ್ಚಿದ ಅಶ್ವಿನ್..! ವಿಡಿಯೋ ವೈರಲ್
ಜಿಂಬಾಬ್ವೆ ವಿರುದ್ದದ ಪಂದ್ಯದ ವೇಳೆ ರವಿಚಂದ್ರನ್ ಅಶ್ವಿನ್ ಅವರ ವಿಡಿಯೋ ವೈರಲ್
ತಮ್ಮ ಜೆರ್ಸಿ ಪತ್ತೆಹಚ್ಚಲು ಮೂಸಿ ನೋಡಿ ಕಂಡು ಹಿಡಿದ ಅಶ್ವಿನ್
ಕಾಲೆಳೆದ ಮುಕುಂದ್‌ಗೆ ಸಮಂಜಸ ಉತ್ತರ ನೀಡಿದ ಆಫ್ ಸ್ಪಿನ್ನರ್
ಅಡಿಲೇಡ್(ನ.09): ಮೈದಾನದಲ್ಲಿ ಎರಡು ಜೆರ್ಸಿಗಳ ಪರಿಮಳವನ್ನು ಮೂಸಿ ನೋಡುವ ಮೂಲಕ ತಮ್ಮ ಜೆರ್ಸಿ ಆಯ್ಕೆ ಮಾಡಿದ ಭಾರತದ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಅವರ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಟಿ20 ವಿಶ್ವಕಪ್‌ನ ಜಿಂಬಾಬ್ವೆ ವಿರುದ್ಧದ ಪಂದ್ಯದ ಬಳಿಕ ಅಶ್ವಿನ್ ಪರಿಮಳದ ಮೂಲಕ ಬಟ್ಟೆಆಯ್ಕೆ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು.
ಇನ್ನು ಇದರ ವಿವಿಧ ಮೀಮ್ಸ್ ಕೂಡಾ ಹರಿದಾಡುತ್ತಿದ್ದು, ಭಾರತದ ಕ್ರಿಕೆಟಿಗ ಅಭಿನವ್ ಮುಕುಂದ್ ಕೂಡಾ ಟ್ವೀಟರ್‌ನಲ್ಲಿ ಇದನ್ನು ಹಂಚಿಕೊಂಡು, ಜೆರ್ಸಿ ಆಯ್ಕೆ ಮಾಡಿದ ಲಾಜಿಕ್ ಯಾವುದು ಎಂದು ಪ್ರಶ್ನಿಸಿದ್ದರು. ಈ ವಿಡಿಯೋವನ್ನು ನಾನು ಸಾಕಷ್ಟು ಬಾರಿ ವೀಕ್ಷಿಸಿದ್ದೇನೆ. ಮತ್ತೆ ಮತ್ತೆ ನೋಡಿದಾಗಲೆಲ್ಲ ನನ್ನ ನಗು ತಡೆಯಲಾಗುತ್ತಿಲ್ಲ. ನೀವು ಸರಿಯಾದ ಸ್ವೆಟರ್ ಪತ್ತೆ ಹಚ್ಚಿದ್ದರ ಹಿಂದಿನ ರಹಸ್ಯ ತಿಳಿಸುವ ಮೂಲಕ ನಮ್ಮಲ್ಲೂ ಜಾಗೃತಿ ಮೂಡಿಸಿ ಎಂದು ಕಾಲೆಳೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ರವಿಚಂದ್ರನ್ ಅಶ್ವಿನ್, ‘ಅಳತೆ ಗೊತ್ತಾಗಲಿಲ್ಲ. ಹೆಸರೂ ಬರೆದಿರಲಿಲ್ಲ. ಕೊನೆಗೆ ಫರ್ಫ್ಯೂಮ್ ಪರಿಮಳದಲ್ಲಿ ಪತ್ತೆ ಹಚ್ಚಿದೆ, ಎಲಾ ಕ್ಯಾಮರಾಮನ್’ ಎಂದಿದ್ದಾರೆ. ಸದ್ಯ ವಿಡಿಯೋದ ಜೊತೆ ಅಶ್ವಿನ್ ನೀಡಿದ ಉತ್ತರ ಕೂಡಾ ವೈರಲ್ ಆಗಿದೆ.
ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಜಿಂಬಾಬ್ವೆ ವಿರುದ್ದ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್, 4 ಓವರ್ ಬೌಲಿಂಗ್ ಮಾಡಿ ಕೇವಲ 22 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.
T20 World Cup: ಮಳೆಯಿಂದ 2 ಸೆಮೀಸ್ ಪಂದ್ಯಗಳು ರದ್ದಾದ್ರೆ, ಯಾವ ತಂಡಗಳಿಗಿವೆ ಫೈನಲ್‌ಗೇರುವ ಅವಕಾಶ?
ಇನ್ನು ಭಾರತ ಹಾಗೂ ಜಿಂಬಾಬ್ವೆ ವಿರುದ್ದದ ಪಂದ್ಯದ ಬಗ್ಗೆ ಹೇಳುವುದಾದರೇ, ಭಾನುವಾರ ನಡೆದ ಸೂಪರ್ 12 ಹಂತದ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಜಿಂಬಾಬ್ವೆ ಎದುರು 71 ರನ್‌ಗಳ ಗೆಲುವು ದಾಖಲಿಸುವ ಮೂಲಕ ಭರ್ಜರಿಯಾಗಿಯೇ ಸೆಮೀಸ್ ಪ್ರವೇಶಿಸಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಕೆ ಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿತ್ತು. ಇನ್ನು ಈ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡವು 17.2 ಓವರ್‌ಗಳಲ್ಲಿ ಕೇವಲ 115 ರನ್ ಬಾರಿಸಿ ಸರ್ವಪತನ ಕಂಡಿತು.
ಇನ್ನು ಇದೀಗ ಟೀಂ ಇಂಡಿಯಾ, ನವೆಂಬರ್ 10ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ದ ಕಾದಾಡಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಅಡಿಲೇಡ್ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ.