ಮೆಲ್ಬರ್ನ್‌ ಮೈದಾನದಲ್ಲಿಂದು ಭಾರತಕ್ಕೆ ಜಿಂಬಾಬ್ವೆ ಸವಾಲುಜಿಂಬಾಬ್ವೆ ಮಣಿಸಿ ಸೆಮೀಸ್‌ಗೇರುವ ವಿಶ್ವಾಸದಲ್ಲಿ ಟೀಂ ಇಂಡಿಯಾಫಾರ್ಮ್‌ಗೆ ಮರಳಲು ನಾಯಕ ರೋಹಿತ್ ಶರ್ಮಾ ಕಾತರ

ಮೆಲ್ಬರ್ನ್‌(ನ.06): ಈ ಬಾರಿಯ ಟಿ20 ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಭಾರತ, ಟೂರ್ನಿಯಲ್ಲಿ ಇನ್ನೂ ಸೆಮಿಫೈನಲ್‌ ಪ್ರವೇಶ ಖಚಿತಪಡಿಸಿಕೊಂಡಿಲ್ಲ. ಭಾನುವಾರ ಗುಂಪು ಹಂತದ ಕೊನೆ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಸೆಣಸಲಿದ್ದು, ಗೆದ್ದು ನಾಕೌಟ್‌ಗೇರಲು ಕಾತರಿಸುತ್ತಿದೆ.

ಮೇಲ್ನೋಟಕ್ಕೆ ಭಾರತವೇ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡರೂ, ಪಾಕಿಸ್ತಾನಕ್ಕೆ ಆಘಾತಕಾರಿ ಸೋಲುಣಿಸಿದ್ದ ಜಿಂಬಾಬ್ವೆ ಎಷ್ಟುಅಪಾಯಕಾರಿ ಎಂಬುದು ರೋಹಿತ್‌ ಬಳಗಕ್ಕೆ ಅರಿವಿದೆ. ಕೆ.ಎಲ್‌.ರಾಹುಲ್‌ ಲಯಕ್ಕೆ ಮರಳಿದ್ದು ಸಂತಸದ ಸುದ್ದಿ. ಆದರೆ ನಾಯಕ ರೋಹಿತ್‌ ಇನ್ನಷ್ಟೇ ದೊಡ್ಡ ಇನ್ನಿಂಗ್ಸ್‌ ಆಡಬೇಕಿದೆ. ಅಭೂತಪೂರ್ವ ಲಯದಲ್ಲಿರುವ ವಿರಾಟ್‌ ಕೊಹ್ಲಿ-ಸೂರ‍್ಯಕುಮಾರ್‌ ಜೋಡಿ ಮತ್ತೊಂದು ಆಕರ್ಷಕ ಆಟಕ್ಕೆ ಸಜ್ಜಾಗಿದ್ದಾರೆ. ಇದರ ಜೊತೆಗೆ ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌ ಕೂಡಾ ಸಾಮರ್ಥ್ಯ ಸಾಬೀತುಪಡಿಸುವ ಅಗತ್ಯವಿದೆ. ವಿಫಲರಾಗುತ್ತಿರುವ ಕಾರ್ತಿಕ್‌ ಬದಲು ರಿಷಭ್‌ ಪಂತ್‌ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆರ್‌.ಅಶ್ವಿನ್‌ ಬದಲು ಯಜುವೇಂದ್ರ ಚಹಲ್‌ ಕಣಕ್ಕಿಳಿದರೂ ಅಚ್ಚರಿಯಿಲ್ಲ. ಇನ್ನು, ವೇಗದ ಬೌಲಿಂಗ್‌ನಲ್ಲಿ ಭುವನೇಶ್ವರ್‌, ಆಶ್‌ರ್‍ದೀಪ್‌, ಶಮಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಜಿಂಬಾಬ್ವೆ ವಿರುದ್ಧವೂ ಮಿಂಚಲು ಎದುರು ನೋಡುತ್ತಿದ್ದಾರೆ.

T20 World Cup ಭಾರತ ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ, ಸೆಮಿಫೈನಲ್ ಲೆಕ್ಕಾಚಾರ!

ಮತ್ತೊಂದೆಡೆ ಜಿಂಬಾಬ್ವೆ ಹಲವು ತಾರಾ ಆಟಗಾರರನ್ನು ಹೊಂದಿದ್ದು, ಸಿಕಂದರ್‌ ರಾಜಾ, ಶೀನ್‌ ವಿಲಿಯಮ್ಸ್‌ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಭಾರತದ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕುವ ಜವಾಬ್ದಾರಿ ಬೌಲರ್‌ಗಳ ಮೇಲಿದೆ. ಆಲ್ರೌಂಡ್‌ ಪ್ರದರ್ಶನ ತೋರಿದರಷ್ಟೇ ಭಾರತಕ್ಕೆ ಸೋಲುಣಿಸುವ ಅವಕಾಶವಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಕೆ ಎಲ್ ರಾಹುಲ್‌, ರೋಹಿತ್‌ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್‌, ಹಾರ್ದಿಕ್‌ ಪಾಂಡ್ಯ, ದಿನೇಶ್ ಕಾರ್ತಿಕ್‌, ರವಿಚಂದ್ರನ್ ಅಶ್ವಿನ್‌, ಮೊಹಮ್ಮದ್ ಶಮಿ, ಭುವನೇಶ್ವರ್‌ ಕುಮಾರ್, ಅಶ್‌ರ್‍ದೀಪ್‌ ಸಿಂಗ್.

ಜಿಂಬಾಬ್ವೆ: ವೆಸ್ಲೆ ಮಧೆವೆರೆ, ಕ್ರೆಗ್‌ ಎರ್ವಿನ್‌(ನಾಯಕ), ಮಿಲ್ಟನ್‌ ಶುಂಭಾ, ಶೀನ್ ವಿಲಿಯಮ್ಸ್‌, ಸಿಕಂದರ್ ರಾಜಾ, ರೇಗಿಸ್ ಚಕಬ್ವಾ, ರೆಯನ್ ಬರ್ಲ್‌, ಎವಾನ್ಸ್‌, ಎನ್‌ಗರಾವ, ಮುಜರಬಾನಿ, ಚಟಾರ

ಪಂದ್ಯ: ಮಧ್ಯಾಹ್ನ 1.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಪಿಚ್‌ ರಿಪೋರ್ಚ್‌

ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ ಟೂರ್ನಿಯಲ್ಲಿ 4 ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿತ್ತು, 3 ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಿತ್ತು. ಭಾನುವಾರದ ಪಂದ್ಯಕ್ಕೆ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆಯಾದರೂ ಕೆಲ ಓವರ್‌ಗಳು ಕಡಿತಗೊಂಡು ಪಂದ್ಯ ನಡೆಯಲಿದೆ ಎನ್ನಲಾಗುತ್ತಿದೆ. ಟಾಸ್‌ ನಿರ್ಣಾಯಕ ಪಾತ್ರ ವಹಿಸಬಹುದು.