T20 World Cup: ಬಟ್ಲರ್-ಹೇಲ್ಸ್ ಸ್ಪೋಟಕ ಬ್ಯಾಟಿಂಗ್, ಕಿವೀಸ್‌ಗೆ ಸವಾಲಿನ ಗುರಿ ನೀಡಿದ ಇಂಗ್ಲೆಂಡ್
ನ್ಯೂಜಿಲೆಂಡ್ ಎದುರು ಆಕರ್ಷಕ ಅರ್ಧಶತಕ ಚಚ್ಚಿದ ಜೋಸ್ ಬಟ್ಲರ್, ಅಲೆಕ್ಸ್ ಹೇಲ್ಸ್
100ನೇ ಟಿ20 ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡ ಜೋಸ್ ಬಟ್ಲರ್
ಇಂಗ್ಲೆಂಡ್ ಎದುರು ಪಂದ್ಯ ಗೆಲ್ಲಲು ಇಂಗ್ಲೆಂಡ್‌ಗೆ 180 ರನ್ ಗುರಿ
ಬ್ರಿಸ್ಬೇನ್(ನ.01): ನಾಯಕ ಜೋಸ್ ಬಟ್ಲರ್ ಹಾಗೂ ಅಲೆಕ್ಸ್ ಹೇಲ್ಸ್ ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 179 ರನ್ ಬಾರಿಸಿದ್ದು, ನ್ಯೂಜಿಲೆಂಡ್ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಇಂಗ್ಲೆಂಡ್ ತಂಡದ ಪಾಲಿಗೆ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ ಎನಿಸಿಕೊಂಡಿದ್ದು, ಕಿವೀಸ್ ಪಡೆಯನ್ನು ಮಣಿಸುತ್ತಾ ಎನ್ನುವ ಕುತೂಹಲ ಜೋರಾಗಿದೆ.
ಇಲ್ಲಿನ ದ ಗಾಬಾ ಮೈದಾನದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಸೆಮೀಸ್ ಪ್ರವೇಶಿಸುವ ದೃಷ್ಠಿಯಿಂದ ಇಂಗ್ಲೆಂಡ್ ಪಾಲಿಗೆ ಮಹತ್ವದ ಪಂದ್ಯವಾಗಿರುವುದರಿಂದ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಅಲೆಕ್ಸ್ ಹೇಲ್ಸ್ ಹಾಗೂ ನಾಯಕ ಜೋಸ್ ಬಟ್ಲರ್ ಜೋಡಿ 10.2 ಓವರ್‌ಗಳಲ್ಲಿ 81 ರನ್‌ಗಳ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ಇಂಗ್ಲೆಂಡ್ ಬೌಲರ್‌ಗಳ ಮೇಲೆ ಪವರ್ ಪ್ಲೇನಲ್ಲೇ ಸವಾರಿ ಮಾಡಿದ ಅಲೆಕ್ಸ್ ಹೇಲ್ಸ್ ಕೇವಲ 40 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಆಕರ್ಷಕ 52 ರನ್ ಬಾರಿಸಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಮಿಚೆಲ್ ಸ್ಯಾಂಟ್ನರ್ ಯಶಸ್ವಿಯಾದರು. ಇನ್ನು ಇದರ ಬೆನ್ನಲ್ಲೇ ಬ್ಯಾಟಿಂಗ್ ಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೋಯಿನ್ ಅಲಿ ಹೆಚ್ಚು ಕಮಾಲ್ ಮಾಡಲು ಕಿವೀಸ್ ಬೌಲರ್‌ಗಳು ಅವಕಾಶ ಮಾಡಿಕೊಡಲಿಲ್ಲ. ಮೋಯಿನ್ ಅಲಿ ಕೇವಲ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ನೂರನೇ ಪಂದ್ಯ ಸ್ಮರಣೀಯವಾಗಿಸಿಕೊಂಡ ಬಟ್ಲರ್: ಹೌದು, ಇಂಗ್ಲೆಂಡ್ ಪರ ನೂರನೇ ಟಿ20 ಪಂದ್ಯವನ್ನಾಡಿದ ಜೋಸ್ ಬಟ್ಲರ್ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ತಮ್ಮ ನೂರನೇ ಟಿ20 ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಅಲೆಕ್ಸ್ ಹೇಲ್ಸ್‌ಗೆ ಉತ್ತಮ ಸಾಥ್ ನೀಡಿದ ಬಟ್ಲರ್, ಆ ಬಳಿಕ ತಮಗೆ ಸಿಕ್ಕ ಎರಡು ಜೀವದಾನವನ್ನು ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಜೋಸ್ ಬಟ್ಲರ್ 47 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಆಕರ್ಷಕ 73 ರನ್ ಬಾರಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು.
ಇಂಗ್ಲೆಂಡ್ ಪರ ಗರಿಷ್ಠ ರನ್ ಸರದಾರ ಬಟ್ಲರ್: ಇಂಗ್ಲೆಂಡ್ ತಂಡದ ಪರ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನ್ನುವ ದಾಖಲೆಯನ್ನು ಜೋಸ್ ಬಟ್ಲರ್ ಇದೇ ಪಂದ್ಯದಲ್ಲಿ ನಿರ್ಮಿಸಿದರು. ಈ ಮೊದಲು ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮಾರ್ಗನ್ 2458 ರನ್ ಬಾರಿಸಿದ್ದರು. ಆದರೆ ಇದೀಗ ಜೋಸ್ ಬಟ್ಲರ್, ಮಾರ್ಗನ್ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು.
T20 World Cup:ಕಿವೀಸ್ ಎದುರು ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ
ಕೈಕೊಟ್ಟ ಮಧ್ಯಮ ಕ್ರಮಾಂಕ: ಒಂದು ಹಂತದಲ್ಲಿ ಇಂಗ್ಲೆಂಡ್ ತಂಡವು ಅನಾಯಾಸವಾಗಿ 200ರ ಗಡಿದಾಟಬಹುದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಮೋಯಿನ್ ಅಲಿ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್(20) ವಿಕೆಟ್ ಪತನದ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಇಂಗ್ಲೆಂಡ್ ತಂಡವು ಕೊನೆಯ 23 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಇಂಗ್ಲೆಂಡ್ ತಂಡದ ಪರ ಜೋಸ್ ಬಟ್ಲರ್, ಅಲೆಕ್ಸ್ ಹೇಲ್ಸ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಸಹ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್ಸ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು.
ಇನ್ನು ನ್ಯೂಜಿಲೆಂಡ್ ತಂಡದ ಪರ ಲಾಕಿ ಫರ್ಗ್ಯೂಸನ್ ಕೊಂಚ ದುಬಾರಿ ಎನಿಸಿಕೊಂಡರೂ 2 ವಿಕೆಟ್ ಪಡೆದರೆ, ಟಿಮ್ ಸೌಥಿ, ಇಶ್ ಸೋಧಿ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ ಒಂದೊಂದು ವಿಕೆಟ್ ಪಡೆದರು.