ಟಿ20 ವಿಶ್ವಕಪ್‌ನಲ್ಲಿ ಮತ್ತೊಂದು ಆಘಾತಕಾರಿ ಫಲಿತಾಂಶ ದಾಖಲಾಗಿದೆ. ಐರ್ಲೆಂಡ್‌ ತಂಡ ಐದು ವಿಕೆಟ್‌ಗಳಿಂದ ಏಕದಿನ ಕ್ರಿಕೆಟ್‌ನ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು ಸೋಲಿಸಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಕೊನೆಯಲ್ಲಿ ಡಕ್‌ವರ್ತ್‌ ಲೂಯಿಸ್‌ ನಿಯಮದ ಅನ್ವಯ ಐರ್ಲೆಂಡ್‌ ಐತಿಹಾಸಿಕ ಜಯ ಕಂಡಿತು.

ಮೆಲ್ಬೋರ್ನ್‌ (ಅ. 26): ಟಿ20 ವಿಶ್ವಕಪ್‌ನ ಸೂಪರ್‌ 12 ಹಂತದಲ್ಲಿ ಆಘಾತಾರಿ ಫಲಿತಾಂಶ ದಾಖಲಾಗಿದೆ. ಬುಧವಾರ ನಡೆದ ಅದ್ಭುತ ಪಂದ್ಯಕ್ಕೆ ಮಳೆ ದೊಡ್ಡ ಮಟ್ಟದಲ್ಲಿ ಅಡ್ಡಿಪಡಿಸಿತಾದರೂ, ಐರ್ಲೆಂಡ್‌ ತಂಡ ಅಧಿಕಾರಯುತವಾಗಿ ಇಂಗ್ಲೆಂಡ್‌ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಹವಮಾನದ ಕಾರಣದಿಂದಾಗಿ ಗೆಲ್ಲುವಂತಿದ್ದ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಡಕ್‌ವರ್ತ್‌ ಲೂಯಿಸ್‌ ನಿಯಮದನ್ವಯ ಐದು ರನ್‌ಗಳ ಸೋಲು ಕಂಡಿದೆ. ಇದರಿಂದಾಗಿ ಇಂಗ್ಲೆಂಡ್‌ ತಂಡದ ಸೆಮಿಫೈನಲ್‌ ಹಾದಿಯೂ ಕಠಿಣವಾಗಿದೆ. ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್‌ ತಂಡ ಡಿಎಲ್‌ಎಸ್‌ ನಿಯಮದ ಪ್ರಕಾರ ಅದ್ಭುತ ಗೆಲುವು ಕಂಡಿತು. ಭಾರಿ ಮಳೆಯಿಂದಾಗಿ ಪಂದ್ಯ ನಿಂತಾಗ ಇಂಗ್ಲೆಂಡ್‌ ತಂಡ ಡಿಎಲ್‌ಎಸ್‌ ನಿಯಮದ ಅಡಿಯಲ್ಲಿ ಐದು ರನ್‌ಗಳಿಂದ ಹಿಂದಿತ್ತು. ಪಂದ್ಯ ಆರಂಭಿಸುವ ನಿಟ್ಟಿನಲ್ಲಿ ಕೆಲ ಹೊತ್ತು ಕಾಯಲಾಯಿತು. ಆದರೆ, ಬಳಿಕ ಮಳೆ ಇನ್ನಷ್ಟು ಜೋರಾದ ಕಾರಣ ಪಂದ್ಯವನ್ನು ಆರಂಭಿಸುವ ಯಾವುದೇ ಅವಕಾಶಗಳಿರಲಿಲ್ಲ. ಬಳಿಕ ಪಂದ್ಯದ ಮುಂದಿನ ಆಟವನ್ನು ರದ್ದು ಮಾಡಿ ಫಲಿತಾಂಶ ಘೋಷಣೆ ಮಾಡಿದಾಗ ಐರ್ಲೆಂಡ್‌ ಐತಿಹಾಸಿಕ ಗೆಲುವು ದಾಖಲಿಸಿತ್ತು.

ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡ ಮೊದಲು ಫೀಲ್ಡಿಂಗ್‌ ಮಾಡಲು ನಿರ್ಧಾರ ಮಾಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಐರ್ಲೆಂಡ್‌, ಇಂಗ್ಲೆಂಡ್‌ನ ಶಿಸ್ತಿನ ಬೌಲಿಂಗ್‌ ಮುಂದೆ 157 ರನ್‌ಗಳ ಸವಾಲಿನ ಮೊತ್ತ ದಾಖಲಿಸುವಲ್ಲಿ ಯಶ ಕಂಡಿತ್ತು. ಪೌಲ್‌ ಸ್ಟಿರ್ಲಿಂಗ್‌ ಮತ್ತೊಮ್ಮೆ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಅದರೊಂದಿಗೆ ನಾಯಕ ಆಂಡಿ ಬಲ್ಬಿರ್ನಿ ಇಂಗ್ಲೆಂಡ್‌ ಬೌಲಿಂಗ್‌ಅನ್ನು ದಿಟ್ಟತನದಿಂದ ಎದುರಿಸುವ ಮೂಲಕ 47 ಎಸೆತಗಳ್ಲಿ 62 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದ್ದರು. ಇದು ಅವರು ಮೊದಲ ಟಿ20 ವಿಶ್ವಕಪ್‌ ಅರ್ಧಶತಕವಾಗಿದ್ದರೆ ಒಟ್ಟಾರೆ ಹಾಲಿ ಟಿ20 ವಿಶ್ವಕಪ್‌ನಲ್ಲಿ ಇದು 8ನೇ ಅರ್ಧಶತಕವಾಗಿತ್ತು. 2ನೇ ವಿಕೆಟ್‌ಗಗೆ 27 ಎಸೆತಗಳಲ್ಲಿ 34 ರನ್‌ ಬಾರಿಸಿದ ಲೋರ್ಕನ್‌ ಟಕರ್‌ ಜೊತೆ 82 ರನ್‌ಗಳ ಅಮೂಲ್ಯ ಜೊತೆಯಾಟವಾಡಿದ್ದರು.

ಭಾರತ ಪಾಕಿಸ್ತಾನ ಪಂದ್ಯ ವೀಕ್ಷಣೆ ವೇಳೆ ಹೃದಯಾಘಾತ, 34ರ ಹರೆಯದ ಯುವಕ ನಿಧನ!

10 ಓವರ್‌ಗಳ ವೇಳೆಗೆ ಐರ್ಲೆಂಡ್‌ ತಂಡ ಒಂದು ವಿಕೆಟ್‌ ನಷ್ಟಕ್ಕೆ 92 ರನ್‌ ಬಾರಿಸಿತ್ತು. ಈ ಹಂತದಲ್ಲಿ ಐರ್ಲೆಂಡ್‌ ದೊಡ್ಡ ಮೊತ್ತ ಬಾರಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಇಂಗ್ಲೆಂಡ್‌ ತಂಡ ಭರ್ಜರಿಯಾಗಿ ತಿರುಗೇಟು ನೀಡುವ ಮೂಲಕ ಐರ್ಲೆಂಡ್‌ ತಂಡವನ್ನು ಕಟ್ಟಿಹಾಕಿತು. ಲಿಯಾಮ್‌ ಲಿವಿಂಗ್‌ಸ್ಟೋನ್‌ ಹಾಗೂ ಮಾರ್ಕ್‌ವುಡ್‌ ತಲಾ ಮೂರು ವಿಕೆಟ್‌ ಉರುಳಿಸಿದ್ದರಿಂದ ಐರ್ಲೆಂಡ್‌ 157 ರನ್‌ಗೆ ಆಲೌಟ್‌ ಆಯಿತು.ಗೆಲುವಿಗಾಗಿ ಇಂಗ್ಲೆಂಡ್‌ ತಂಡ 158 ರನ್‌ ಬಾರಿಸಬೇಕಿತ್ತು. ಇಂಗ್ಲೆಂಡ್‌ ತಂಡದ ಶಕ್ತಿಗೆ ಇದು ಸುಲಭ ಸವಾಲೂ ಆಗಿತ್ತು. ಆದರೆ, 86 ರನ್‌ ಬಾರಿಸುವ ವೇಳೆಗೆ ಇಂಗ್ಲೆಂಡ್‌ ಅಗ್ರಕ್ರಮಾಂಕದ ಐವರು ಬ್ಯಾಟ್ಸ್‌ಮನ್‌ಗಳಿಗೆ ಐರ್ಲೆಂಡ್‌ ಪೆವಿಲಿಯನ್‌ ಹಾದಿ ತೋರಿಸುವ ಮೂಲಕ ಪಾರಮ್ಯ ಸಾಧಿಸಿತ್ತು. ನಾಯಕ ಜೋಸ್‌ ಬಟ್ಲರ್‌ ಶೂನ್ಯಕ್ಕೆ ಔಟಾದರೆ, ಅಲೆಕ್ಸ್‌ ಹ್ಯಾಲ್ಸ್‌ ಕೇವಲ 7 ರನ್‌ ಬಾರಿಸಿದರು. ಡೇವಿಡ್‌ ಮಲಾನ್‌ 35 ರನ್‌ ಬಾರಿಸಿದರೆ, ಅನುಭವಿ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಕೇವಲ 6 ರನ್‌ಗೆ ಔಟಾದರು.

ಪ್ರಾಕ್ಟಿಸ್‌ ನಂತರ ಸರಿಯಾದ ಊಟ ಸಿಗ್ತಿಲ್ಲ: ICC ಆತಿಥ್ಯದ ಬಗ್ಗೆ ಕೋಪಗೊಂಡ ಟೀಂ ಇಂಡಿಯಾ

ಇನ್ನು ಐರ್ಲೆಂಡ್‌ ತಂಡದ ಪರವಾಗಿ ಜೋಶ್‌ ಲಿಟ್ಲ್‌ 2 ವಿಕೆಟ್‌ ಉರುಳಿಸಿದರೆ, ಬ್ಯಾರಿ, ಫಾಯ್ನ್‌ ಹಾಗೂ ಜಾರ್ಜ್‌ ತಲಾ ಒಂದೊಂದು ವಿಕೆಟ್‌ ಉರುಳಿಸಿದರು. ಮೊಯಿನ್‌ ಅಲಿ ಮತ್ತು ಹ್ಯಾರಿ ಬ್ರೂಕ್‌ ಇಂಗ್ಲೆಂಡ್‌ ತಂಡವನ್ನು ಗೆಲುವಿನತ್ತ ದೂಡಲು ಪ್ರಯತ್ನಿಸಿದರಾದರೂ ಮಳೆ ಈ ವೇಳೆ ಕೈಕೊಟ್ಟಿತು. ನಿರಂತರ ಮಳೆಯಿಂದಾಗಿ ಪಂದ್ಯಕ್ಕೆ ಡಕ್‌ವರ್ತ್‌ ಲೂಯಿಸ್‌ ನಿಯಮವನ್ನು ಅಳವಡಿಸಲಾಯಿತು. ನಿಯಗಳ ಪ್ರಕಾರ, 14 ಓವರ್‌ ವೇಳೆಗೆ 110 ರನ್‌ಗಳು ಇರಬೇಕಿದ್ದವು. ಆದರೆ, ಪಂದ್ಯ ನಿಂತ ವೇಳೆ ವೇಳೆ ಇಂಗ್ಲೆಂಡ್‌ 14.3 ಓವರ್‌ಗಳಲ್ಲಿ 5 ವಿಕೆಟ್‌ಗೆ 105 ರನ್‌ ಬಾರಿಸಿತ್ತು. ಇದರಿಂದಾಗಿ ಐರ್ಲೆಂಡ್‌ 5 ರನ್‌ಗಳಿಂದ ಗೆಲುವು ಕಂಡಿತು.