Asianet Suvarna News Asianet Suvarna News

ICC T20 World Cup ಟೂರ್ನಿಯಿಂದ ಆಫ್ಘಾನಿಸ್ತಾನ ಔಟ್..?

* ತೂಗುಯ್ಯಾಲೆಯಲ್ಲಿದೆ ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಮಾನ್ಯತೆ

* ತಾಲಿಬಾನ್ ಧ್ವಜದಡಿ ಆಫ್ಘಾನಿಸ್ತಾನ ಕ್ರಿಕೆಟ್ ತಂಡ ಟಿ20 ವಿಶ್ವಕಪ್‌ನಲ್ಲಾಡುವುದು ಅನುಮಾನ

* ವಿಶೇಷ ವ್ಯವಸ್ಥೆಯ ಮೂಲಕ ಆಫ್ಘಾನಿಸ್ತಾನಕ್ಕೆ ಅವಕಾಶ ನೀಡುತ್ತಾ ಐಸಿಸಿ?

T20 World Cup ICC ban if Afghanistan Cricket team plays under Taliban flag Says Report kvn
Author
Dubai - United Arab Emirates, First Published Sep 23, 2021, 8:25 AM IST

ದುಬೈ(ಸೆ.23): ಆಫ್ಘಾನಿಸ್ತಾನ ತಾಲಿಬಾನ್‌(Taliban) ಆಡಳಿತಕ್ಕೆ ಒಳಪಟ್ಟಬಳಿಕ ಆಫ್ಘನ್‌ ಕ್ರಿಕೆಟ್‌ ತಂಡದ ಭವಿಷ್ಯ ತೂಗುಯ್ಯಾಲೆಯಲ್ಲಿದ್ದು, ಮುಂಬರುವ ಟಿ20 ವಿಶ್ವಕಪ್‌(T20 World Cup)ನಲ್ಲಿ ಆಡುವ ಅವಕಾಶವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ತಾಲಿಬಾನ್‌ ಆಕ್ರಮಣ ಮಾಡಿಕೊಂಡ ಬಳಿಕ ಆಫ್ಘಾನಿಸ್ತಾನದ ಹೆಸರನ್ನು ‘ಇಸ್ಲಾಮಿಕ್‌ ಎಮಿರೇಟ್ಸ್‌ ಆಫ್‌ ತಾಲಿಬಾನ್‌’ ಎಂದು ಬದಲಾಯಿಸಿದೆ. ಜೊತೆಗೆ ಧ್ವಜವೂ ಬದಲಾಗಿದೆ.

ಟಿ20 ವಿಶ್ವಕಪ್‌ನಲ್ಲಿ ಆಫ್ಘನ್‌ ಕ್ರಿಕೆಟ್‌ ತಂಡ ತಾಲಿಬಾನ್‌ ಧ್ವಜದಡಿ ಕಣಕ್ಕಿಳಿಯುವುದನ್ನು ಇತರ ರಾಷ್ಟ್ರಗಳು ಪ್ರಶ್ನಿಸಿದರೆ, ಐಸಿಸಿ ಆಫ್ಘನ್‌ ತಂಡವನ್ನು ಹೊರಹಾಕಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ. ಅಕ್ಟೋಬರ್ 23ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಆಫ್ಘನ್‌ ನೇರ ಅರ್ಹತೆ ಪಡೆದಿದೆ. ಭಾರತ, ಪಾಕಿಸ್ತಾನದ ಜೊತೆ ಗುಂಪು 2ರಲ್ಲಿ ಸ್ಥಾನ ಪಡೆದಿದೆ.

ಇತ್ತೀಚೆಗಷ್ಟೇ ಆಫ್ಘನ್‌ ಕ್ರಿಕೆಟ್‌ ಮಂಡಳಿಯ(Afghanistan Cricket) ಕಾರ್ಯಕಾರಿ ನಿರ್ದೇಶಕ ಹಮೀದ್‌ ಶಿನ್ವಾರಿ ಅವರನ್ನು ವಜಾಗೊಳಿಸಿ ಅವರ ಸ್ಥಾನಕ್ಕೆ ನಸೀಬುಲ್ಲಾ ಹಕ್ಕಾನಿಯನ್ನು ನೇಮಿಸಲಾಗಿದೆ. ಸನೀಬುಲ್ಲಾ ಅವರ ನೇಮಕದ ಹಿಂದೆ ತಾಲಿಬಾನ್‌ ಸರ್ಕಾರದ ನೂತನ ಆಂತರಿಕ ವ್ಯವಹಾರಗಳ ಸಚಿವ ಸಿರಾಜುದ್ದೀನ್‌ ಹಕ್ಕಾನಿ ಇದ್ದಾರೆ ಎಂದು ತಿಳಿದುಬಂದಿದೆ.

ಆಫ್ಘನ್‌ ಕ್ರಿಕೆಟ್ ತಂಡದ ಟೆಸ್ಟ್‌ ಮಾನ್ಯತೆ ಶೀಘ್ರ ರದ್ದು?

ವಿಶ್ವಕಪ್‌ನಿಂದ ಹೊರಬೀಳುವುದು ಮಾತ್ರವಲ್ಲ, ಐಸಿಸಿ ಮಾನ್ಯತೆಯನ್ನೂ ಕಳೆದುಕೊಳ್ಳುವ ಭೀತಿಗೆ ಆಫ್ಘನ್‌ ಕ್ರಿಕೆಟ್‌ ಸಿಲುಕಿದೆ. ಐಸಿಸಿ ನಿಮಮದ ಪ್ರಕಾರ ಪೂರ್ಣಾವಧಿ ಸದಸ್ಯತ್ವ ಹೊಂದಿರುವ ರಾಷ್ಟ್ರವು, ರಾಷ್ಟ್ರೀಯ ಮಹಿಳಾ ತಂಡವನ್ನು ಹೊಂದಿರಬೇಕು. ಆದರೆ ತಾಲಿಬಾನ್‌ ಮಹಿಳೆಯರ ಕ್ರೀಡೆಯನ್ನೇ ನಿಷೇಧಿಸಿದ್ದರಿಂದ ಆಫ್ಘನ್‌ ಕ್ರಿಕೆಟ್‌ ತಂಡದ ಮೇಲೆ ಇದು ಪರಿಣಾಮ ಬೀರಲಿದೆ.

ಹೊರಬೀಳುವ ಆತಂಕ ಏಕೆ?

ಐಸಿಸಿ(ICC) ತನ್ನ ಸದಸ್ಯ ರಾಷ್ಟ್ರಗಳಿಗಷ್ಟೇ ವಿಶ್ವಕಪ್‌ನಲ್ಲಿ ಆಡಲು ಪ್ರವೇಶ ನೀಡಲಿದೆ. ಪಾಕಿಸ್ತಾನ ಹೊರತುಪಡಿಸಿದರೆ ವಿಶ್ವದ ಬೇರಾರ‍ಯವ ರಾಷ್ಟ್ರವೂ ಇಸ್ಲಾಮಿಕ್‌ ಎಮಿರೇಟ್ಸ್‌ ಆಫ್‌ ತಾಲಿಬಾನ್‌ ಎನ್ನುವುದನ್ನು ಒಂದು ರಾಷ್ಟ್ರ ಎಂದು ಪರಿಗಣಿಸಿ ಅದಕ್ಕೆ ನೀಡಬೇಕಿರುವ ಮಾನ್ಯತೆ ನೀಡಿಲ್ಲ. ಹೀಗಾಗಿ ಅದರ ಧ್ವಜಕ್ಕೂ ಮಾನ್ಯತೆ ಇರುವುದಿಲ್ಲ. ಈ ಕಾರಣಕ್ಕೆ ಐಸಿಸಿ, ಆಫ್ಘನ್‌ ತಂಡವನ್ನು ಹೊರಹಾಕಬಹುದು.

ಒಲಿಂಪಿಕ್ಸ್‌ನಂತೆ ವಿಶೇಷ ವ್ಯವಸ್ಥೆ?

ವಿವಿಧ ಕಾರಣಗಳಿಗೆ ರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆಗಳು ನಿಷೇಧಕ್ಕೊಳಗಾದರೂ, ಆ ದೇಶದ ಕ್ರೀಡಾಪಟುಗಳಿಗೆ ತೊಂದರೆಯಾಗದಂತೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ(ಐಒಸಿ) ತನ್ನ ಧ್ವಜದಡಿ ಸ್ಪರ್ಧಿಸಲು ಅವಕಾಶ ನೀಡುತ್ತದೆ. ಅದೇ ರೀತಿ ಐಸಿಸಿಯು ಆಫ್ಘನ್‌ ತಂಡಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸುತ್ತದೆಯೇ ಎನ್ನುವ ಕುತೂಹಲ ಶುರುವಾಗಿದೆ.

ಕ್ರಿಕೆಟ್ ಅಭಿವೃದ್ದಿಗೆ ಆಫ್ಘಾನಿಸ್ತಾನಕ್ಕೆ ಪ್ರತಿ ವರ್ಷ ಐಸಿಸಿ 5 ಮಿಲಿಯನ್‌ ಡಾಲರ್ ದೇಣಿಗೆ ರೂಪದಲ್ಲಿ ನೀಡುತ್ತಿದೆ. ಒಂದು ವೇಳೆ ಐಸಿಸಿ ಪೂರ್ಣಾವಧಿ ಸದಸ್ಯತ್ವವನ್ನು ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಕಳೆದುಕೊಂಡರೆ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಾಗಿದೆ.  

Follow Us:
Download App:
  • android
  • ios