Asianet Suvarna News Asianet Suvarna News

T20 World Cup 2024: ಇಂದು ಭಾರತ vs ಬಾಂಗ್ಲಾ ಸೂಪರ್‌-8 ಕದನ

ಆರಂಭಿಕ ಪಂದ್ಯದಲ್ಲಿ ಆಫ್ಘನ್ನರನ್ನು ಮಣಿಸಿರುವ ಭಾರತಕ್ಕೆ 2ನೇ ಗುಂಪಿನ ಕೊನೆ ಪಂದ್ಯದಲ್ಲಿ ಆಸ್ಟ್ರೇಲಿಯಾ ಸವಾಲು ಎದುರಾಗಲಿದೆ. ಹೀಗಾಗಿ ಆಸೀಸ್‌ ಸವಾಲಿಗೂ ಮುನ್ನವೇ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಭಾರತ ಎದುರು ನೋಡುತ್ತಿದೆ.

T20 World Cup 2024 Team India ready to take on Bangladesh Challenge kvn
Author
First Published Jun 22, 2024, 10:34 AM IST | Last Updated Jun 22, 2024, 10:57 AM IST

ನಾರ್ತ್‌ ಸೌಂಡ್‌(ಆ್ಯಂಟಿಗಾ): ಅಫ್ಘಾನಿಸ್ತಾನ ವಿರುದ್ಧ ಅಮೋಘ ಗೆಲುವಿನ ಉತ್ಸಾಹದಲ್ಲಿರುವ ಮಾಜಿ ಚಾಂಪಿಯನ್‌ ಟೀಂ ಇಂಡಿಯಾ, ಸೂಪರ್‌-8ರ ಘಟ್ಟದಲ್ಲಿ ಸತತ 2ನೇ ಗೆಲುವಿನ ಕಾತರದಲ್ಲಿದೆ. ತಂಡ ಶನಿವಾರ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದ್ದು, ಈ ಪಂದ್ಯದಲ್ಲೂ ಗೆದ್ದರೆ ಸೆಮಿಫೈನಲ್‌ ಹಾದಿ ಸುಗಮಗೊಳ್ಳಲಿದೆ.

ಆರಂಭಿಕ ಪಂದ್ಯದಲ್ಲಿ ಆಫ್ಘನ್ನರನ್ನು ಮಣಿಸಿರುವ ಭಾರತಕ್ಕೆ 2ನೇ ಗುಂಪಿನ ಕೊನೆ ಪಂದ್ಯದಲ್ಲಿ ಆಸ್ಟ್ರೇಲಿಯಾ ಸವಾಲು ಎದುರಾಗಲಿದೆ. ಹೀಗಾಗಿ ಆಸೀಸ್‌ ಸವಾಲಿಗೂ ಮುನ್ನವೇ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಭಾರತ ಎದುರು ನೋಡುತ್ತಿದೆ.

ಆಗಸ್ಟ್ 15ರಿಂದ ಬೆಂಗಳೂರಿನಲ್ಲಿ ಮಹಾರಾಜ ಟ್ರೋಫಿ ಟಿ20 ಹಬ್ಬ

ಭಾರತ ಟೂರ್ನಿಯ ಆರಂಭಕ್ಕೂ ಮುನ್ನ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಇಬ್ಬರೂ ತಮ್ಮ ಮೇಲೆ ಭರವಸೆ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ರೋಹಿತ್‌ ಐರ್ಲೆಂಡ್‌ ವಿರುದ್ಧ ಏಕೈಕ ಅರ್ಧಶತಕ ಬಾರಿಸಿದ್ದರೆ, ಉಳಿದ 3 ಪಂದ್ಯದಲ್ಲೂ ದೊಡ್ಡ ಇನ್ನಿಂಗ್ಸ್‌ ಕಟ್ಟಿಲ್ಲ. ಕೊಹ್ಲಿ 4 ಪಂದ್ಯದಲ್ಲಿ 29 ರನ್‌ ಗಳಿಸಿದ್ದಾರೆ. ಹೀಗಾಗಿ ಬಾಂಗ್ಲಾ ವಿರುದ್ಧವಾದರೂ ಇಬ್ಬರು ದಿಗ್ಗಜರ ಬ್ಯಾಟ್‌ನಿಂದ ರನ್‌ ಹರಿಯಬಹುದೇ ಎಂಬ ಕುತೂಹಲವಿದೆ.

ಬದಲಾವಣೆ ನಿರೀಕ್ಷೆ: ಕೊಹ್ಲಿಯನ್ನು ಆರಂಭಿಕನಾಗಿ ಆಡಿರುವ ನಿರ್ಧಾರ ಈ ಬಾರಿ ಕೈ ಹಿಡಿದಿಲ್ಲ. ಹೀಗಾಗಿ ಯಶಸ್ವಿ ಜೈಸ್ವಾಲ್‌ಗೆ ಅವಕಾಶ ನೀಡಿ, ಕೊಹ್ಲಿಯನ್ನು 3ನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆಯೂ ಇದೆ. ಶಿವಂ ದುಬೆ ಸತತ ವೈಫಲ್ಯ ಅನುಭವಿಸಿಸುತ್ತಿದ್ದು, ಹೀಗಾಗಿ ಈ ಪಂದ್ಯದಲ್ಲಿ ಅವರನ್ನು ಹೊರಗಿಡುವ ಸಾಧ್ಯತೆ ಹೆಚ್ಚಿದೆ. ಸಂಜು ಸ್ಯಾಮ್ಸನ್‌ ಕೂಡಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಸೂರ್ಯಕುಮಾರ್‌, ರಿಷಭ್‌ ಪಂತ್‌, ಹಾರ್ದಿಕ್ ಪಾಂಡ್ಯ ಮೇಲೆ ತಂಡ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ.

T20 World Cup 2024: ಬುಮ್ರಾ ಮಾರಕ ದಾಳಿಗೆ ಆಫ್ಘನ್ ಧೂಳೀಪಟ, ಟೀಂ ಇಂಡಿಯಾಗೆ ಸುಲಭ ಜಯ

ಕಳೆದ ಪಂದ್ಯದಲ್ಲಿ ಸಿರಾಜ್‌ರನ್ನು ಹೊರಗಿಟ್ಟು ಕುಲ್ದೀಪ್‌ಗೆ ಅವಕಾಶ ಮಾಡಿಕೊಡಲಾಗಿತ್ತು. ಬಾಂಗ್ಲಾ ವಿರುದ್ಧ ಪಂದ್ಯದಲ್ಲೂ ಕುಲ್ದೀಪ್‌ರನ್ನೇ ಮುಂದುವರಿಸುವ ಸಾಧ್ಯತೆಯಿದೆ. ಬೂಮ್ರಾ ಅಭೂತಪೂರ್ವ ಲಯದಲ್ಲಿದ್ದು, ಅವರನ್ನು ಎದುರಿಸುವುದೇ ಬಾಂಗ್ಲಾ ಬ್ಯಾಟರ್‌ಗಳಿಗೆ ಪ್ರಮುಖ ಸವಾಲಾಗಿ ಪರಿಣಮಿಸಿದೆ.

ಪುಟಿದೇಳುವ ಗುರಿ: ಆಸ್ಟ್ರೇಲಿಯಾ ವಿರುದ್ಧ ಸೂಪರ್‌-8 ಹಂತದ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ಬಾಂಗ್ಲಾ ಮೊದಲ ಗೆಲುವಿನ ಕಾತರದಲ್ಲಿದೆ. ತಂಡ ಭಾರತ ವಿರುದ್ಧವೂ ಸೋತರೆ ಸೆಮಿಫೈನಲ್‌ ರೇಸ್‌ನಿಂದ ಬಹುತೇಕ ಹೊರಗುಳಿಯಲಿದೆ. ಅಭ್ಯಾಸ ಪಂದ್ಯದಲ್ಲೂ ಭಾರತ ವಿರುದ್ಧ ಪರಾಭವಗೊಂಡಿದ್ದ ತಂಡ ಈಗ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ.

ಅನುಭವಿಗಳಾದ ಶಕೀಬ್‌ ಅಲ್‌ ಹಸನ್‌, ಮಹ್ಮೂದುಲ್ಲಾ, ತಸ್ಕೀನ್‌ ಅಹ್ಮದ್‌, ನಾಯಕ ನಜ್ಮುಲ್‌ ಹೊಸೈನ್‌ ತಂಡದ ಆಧಾರಸ್ತಂಭಗಳಾಗಿದ್ದು, ಮುಸ್ತಾಫಿಜುರ್‌, ರಿಶಾದ್‌ ಹಸನ್‌ ಹಾಗೂ ತೌಹೀದ್‌ ಪ್ರದರ್ಶನವೂ ತಂಡಕ್ಕೆ ನಿರ್ಣಾಯಕ ಎನಿಸಿಕೊಂಡಿದೆ.

ಒಟ್ಟು ಮುಖಾಮುಖಿ: 13

ಭಾರತ: 12

ಬಾಂಗ್ಲಾದೇಶ: 01

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌(ನಾಯಕ), ವಿರಾಟ್‌, ರಿಷಭ್‌ ಪಂತ್‌, ಸೂರ್ಯಕುಮಾರ್‌, ದುಬೆ/ಸ್ಯಾಮ್ಸನ್‌, ಹಾರ್ದಿಕ್‌, ಜಡೇಜಾ, ಅಕ್ಷರ್‌, ಬೂಮ್ರಾ, ಕುಲ್ದೀಪ್‌, ಅರ್ಶ್‌ದೀಪ್‌.

ಬಾಂಗ್ಲಾದೇಶ: ತಂಜೀದ್‌, ಲಿಟನ್‌, ನಜ್ಮುಲ್‌(ನಾಯಕ), ಶಕೀಬ್‌, ತೌಹೀದ್‌, ಮಹ್ಮೂದುಲ್ಲಾ, ಮಹೆದಿ, ರಿಶಾದ್‌, ತಸ್ಕೀನ್‌, ತಂಜೀಮ್‌, ಮುಸ್ತಾಫಿಜುರ್‌.

ಪಂದ್ಯ: ರಾತ್ರಿ 8 ಗಂಟೆಗೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.

ಪಿಚ್‌ ರಿಪೋರ್ಟ್‌: ಆ್ಯಂಟಿಗಾ ಪಿಚ್‌ ಕಡಿಮೆ ಮೊತ್ತದ ಪಂದ್ಯಗಳಿಗೆ ಹೆಸರುವಾಸಿ. ಇಲ್ಲಿ ಈ ಬಾರಿ ವಿಶ್ವಕಪ್‌ನ 6 ಪಂದ್ಯಗಳ 12 ಇನ್ನಿಂಗ್ಸ್‌ಗಳ ಪೈಕಿ ಕೇವಲ 2 ಬಾರಿ 160+ ರನ್‌ ದಾಖಲಾಗಿವೆ. ಸ್ಪಿನ್ನರ್‌ಗಳೂ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.

ಪಂದ್ಯಕ್ಕೆ ಮಳೆ ಭೀತಿ

ಭಾರತ-ಬಾಂಗ್ಲಾ ನಡುವಿನ ಪಂದ್ಯಕ್ಕೆ ಮಳೆ ಭೀತಿ ಇದೆ. ಶುಕ್ರವಾರದ ಆಸ್ಟ್ರೇಲಿಯಾ-ಬಾಂಗ್ಲಾ ಪಂದ್ಯ ಕೂಡಾ ಮಳೆಯಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಶನಿವಾರವೂ ಶೇ.40ರಷ್ಟು ಮಳೆ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇದೆ.
 

Latest Videos
Follow Us:
Download App:
  • android
  • ios