T20 World Cup 2024 ಹಾರ್ದಿಕ್ ಪಾಂಡ್ಯ ಭರ್ಜರಿ ಫಿಫ್ಟಿ; ಬಾಂಗ್ಲಾದೇಶಕ್ಕೆ ಕಠಿಣ ಗುರಿ ನೀಡಿದ ಭಾರತ
ಇಲ್ಲಿನ ಸರ್ ವಿವಿನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೇವಲ 3.4 ಓವರ್‌ನಲ್ಲಿ 39 ರನ್‌ಗಳ ಜತೆಯಾಟವಾಡಿದರು
ನಾರ್ತ್ ಸೌಂಡ್(ಆ್ಯಂಟಿಗಾ): ಹಾರ್ದಿಕ್ ಪಾಂಡ್ಯ ಬಾರಿಸಿದ ಸ್ಪೋಟಕ ಅರ್ಧಶತಕ ಹಾಗೂ ವಿರಾಟ್ ಕೊಹ್ಲಿ, ಶಿವಂ ದುಬೆ ಮತ್ತು ರಿಷಭ್ ಪಂತ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಬಾರಿಸಿದ್ದು, ಬಾಂಗ್ಲಾದೇಶಕ್ಕೆ ಕಠಿಣ ಗುರಿ ನೀಡಿದೆ
ಇಲ್ಲಿನ ಸರ್ ವಿವಿನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೇವಲ 3.4 ಓವರ್‌ನಲ್ಲಿ 39 ರನ್‌ಗಳ ಜತೆಯಾಟವಾಡಿದರು. ನಾಯಕ ರೋಹಿತ್ ಶರ್ಮಾ ಕೇವಲ 11 ಎಸೆತಗಳಲ್ಲಿ 23 ರನ್ ಸಿಡಿಸಿ ಶಕೀಬ್ ಅಲ್ ಹಸನ್‌ಗೆ ವಿಕೆಟ್ ಒಪ್ಪಿಸಿದರು. ಇದು ಶಕೀಬ್ ಅಲ್ ಹಸನ್, ಟಿ20 ವಿಶ್ವಕಪ್‌ನಲ್ಲಿ 50ನೇ ವಿಕೆಟ್ ಎನಿಸಿತು. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ 50 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ಹಿರಿಮೆಗೆ ಶಕೀಬ್ ಪಾತ್ರರಾದರು.
ಇನ್ನು ಇದುವರೆಗೂ ರನ್‌ಗಳಿಸಲು ಪರದಾಡಿದ್ದ ವಿರಾಟ್ ಕೊಹ್ಲಿ ಮೈ ಚಳಿಬಿಟ್ಟು ಬ್ಯಾಟ್ ಬೀಸಿದರು. ವಿರಾಟ್ ಕೊಹ್ಲಿ ಕೇವಲ 28 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 37 ರನ್ ಬಾರಿಸಿ ಯುವ ವೇಗಿ ತಂಜಿಮ್ ಹಸನ್ ಶಕೀಬ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಅದೇ ಓವರ್‌ನಲ್ಲಿ ತಾವೆದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಚಚ್ಚಿದ ಸೂರ್ಯಕುಮಾರ್ ಯಾದವ್ ಮರು ಎಸೆತದಲ್ಲಿ ವಿಕೆಟ್ ಕೀಪರ್ ಲಿಟನ್ ದಾಸ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್ 24 ಎಸೆತಗಳನ್ನು ಎದುರಿಸಿ 36 ರನ್ ಸಿಡಿಸಿದರೆ, ಶಿವಂ ದುಬೆ 24 ಎಸೆತಗಳನ್ನು ಎದುರಿಸಿ 3 ಸಿಕ್ಸರ್ ಸಹಿತ 34 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ ಕೇವಲ 27 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 50 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.