ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದ ವೆಸ್ಟ್‌ ಇಂಡೀಸ್ಜಿಂಬಾಬ್ವೆ ವಿರುದ್ದ 31 ರನ್‌ಗಳ ಜಯ ದಾಖಲಿಸಿದ ನಿಕೋಲಸ್ ಪೂರನ್ ಪಡೆ4 ವಿಕೆಟ್ ಕಬಳಿಸಿ ಮಿಂಚಿದ ವೇಗಿ ಅಲ್ಜೆರಿ ಜೋಸೆಫ್

ಹೋಬರ್ಟ್‌(ಅ.19): ಅಲ್ಜೆರಿ ಜೋಸೆಫ್ ಹಾಗೂ ಜೇಸನ್ ಹೋಲ್ಡರ್ ಮಾರಕ ದಾಳಿಯ ನೆರವಿನಿಂದ ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು ಜಿಂಬಾಬ್ವೆ ವಿರುದ್ದ 31 ರನ್‌ಗಳ ರೋಚಕ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸೂಪರ್ 12 ಹಂತಕ್ಕೇರುವ ಅವಕಾಶವನ್ನು ನಿಕೋಲಸ್ ಪೂರನ್ ಪಡೆ ಜೀವಂತವಾಗಿರಿಸಿಕೊಂಡಿದೆ. ಗೆಲ್ಲಲು 154 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡವು ಕೇವಲ 122 ರನ್‌ಗಳಿಗೆ ಸರ್ವಪತನ ಕಂಡಿದೆ. ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ದ ಮುಗ್ಗರಿಸಿದ್ದ ವೆಸ್ಟ್ ಇಂಡೀಸ್‌ ತಂಡಕ್ಕೆ, ಜಿಂಬಾಬ್ವೆ ಎದುರಿನ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿತ್ತು. ಆದರೆ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರುವ ಮೂಲಕ ವಿಂಡೀಸ್ ತಂಡವು ಗೆಲುವಿನ ನಿಟ್ಟುಸಿರು ಬಿಟ್ಟಿದೆ.

ಇಲ್ಲಿನ ಬೆಲ್ಲಿರೇವ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಜಿಂಬಾಬ್ವೆ ತಂಡವು 2.2 ಓವರ್‌ಗಳಲ್ಲೇ 29 ರನ್‌ಗಳ ಜತೆಯಾಟ ಮೂಡಿ ಬಂದಿತು. ಆದರೆ ಅಲ್ಜೆರಿ ಜೋಸೆಫ್‌ ಮಾರಕ ದಾಳಿ ನಡೆಸುವ ಮೂಲಕ ಜಿಂಬಾಬ್ವೆ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ನಾಯಕ ರೇಗಿಸ್ ಚಕಬ್ವಾ 13 ರನ್ ಬಾರಿಸಿ ಜೋಸೆಫ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಕ್ರೀಸ್‌ಗಿಳಿದ ಟೋನಿ ಮುನಿಯೊಂಗ(2) ಕೂಡಾ ಜೋಸೆಫ್‌ಗೆ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು. ಸೀನ್ ವಿಲಿಯಮ್ಸ್‌ 1 ರನ್ ಬಾರಿಸಿ ಒಬೆಡ್ ಮೆಕಾಯ್‌ಗೆ ವಿಕೆಟ್ ಒಪ್ಪಿಸಿದರು.

Scroll to load tweet…

ಒಂದು ಕಡೆ ನಿರಂತರ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಆರಂಭಿಕ ವೆಸ್ಲೆ ಮೆಡೆವೆರೆ 19 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 27 ರನ್ ಬಾರಿಸಿ ಜೇಸನ್‌ ಹೋಲ್ಡರ್‌ಗೆ ವಿಕೆಟ್‌ ಒಪ್ಪಿಸಿದರೆ, ಕಳೆದ ಪಂದ್ಯದ ಹೀರೋ ಸಿಕಂದರ್ ರಾಜಾ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ರಯಾನ್ ಬರ್ಲ್‌(17) ಹಾಗೂ ಲೂಕ್ ಜೋಂಗ್ವೆ(29) ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ವಿಂಡೀಸ್ ಪಾಳಯದಲ್ಲಿ ಆತಂಕ ಹುಟ್ಟಿಸುವಂತೆ ಮಾಡಿದರಾದರೂ, ಮತ್ತೊಮ್ಮೆ ಕಮಾಲ್ ಮಾಡಿದ ಜೋಸೆಫ್‌, ವಿಂಡೀಸ್ ಗೆಲುವನ್ನು ಖಚಿತಪಡಿಸಿದರು. 

T20 World Cup: ಈ ಬಾರಿ ಸೆಮೀಸ್‌ಗೇರುವ 4 ತಂಡಗಳಾವುವು ಎನ್ನುವುದನ್ನು ಭವಿಷ್ಯ ನುಡಿದ ಸಚಿನ್ ತೆಂಡುಲ್ಕರ್..!

ಜೋಸೆಫ್ ಮಾರಕ ದಾಳಿ: ಜಿಂಬಾಬ್ವೆ ತಂಡವು ಮೊದಲ ಎರಡು ಓವರ್‌ನಲ್ಲೇ ಸ್ಪೋಟಕ ಆರಂಭ ಪಡೆಯಿತು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ದಾಳಿಗಿಳಿದ ಜೋಸೆಫ್‌, ಮಾರಕ ದಾಳಿ ಸಂಘಟಿಸುವ ಮೂಲಕ ವಿಂಡೀಸ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. 4 ಓವರ್ ಬೌಲಿಂಗ್ ಮಾಡಿದ ಅಲ್ಜೆರಿ ಜೋಸೆಫ್ ಕೇವಲ 16 ರನ್‌ ನೀಡಿ ಪ್ರಮುಖ 4 ವಿಕೆಟ್‌ ಕಬಳಿಸುವಲ್ಲಿ ಯಶಸ್ವಿಯಾದರು. ಜೋಸೆಫ್‌ಗೆ ಉತ್ತಮ ಸಾಥ್ ನೀಡಿದ ಜೇಸನ್ ಹೋಲ್ಡರ್ 12 ರನ್ ನೀಡಿ 3 ವಿಕೆಟ್ ಪಡೆದರು. ಇನ್ನು ಅಕೆಲ್ ಹೊಸೈನ್, ಒಬೆಡ್ ಮೆಕಾಯ್ ಹಾಗೂ ಒಡೆನ್ ಸ್ಮಿತ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡವು ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ಕೈಲ್ ಮೇಯರ್ಸ್‌ 12 ರನ್ ಬಾರಿಸಿದರೆ, ಜಾನ್ಸನ್ ಚಾರ್ಲ್ಸ್‌ ಸಮಯೋಚಿತ 45 ರನ್ ಸಿಡಿಸಿದರು. ಇನ್ನು ಎವಿನ್ ಲೆವಿಸ್ ಬ್ಯಾಟಿಂಗ್ 15 ರನ್‌ಗಳಿಗೆ ಸೀಮಿತವಾದರೆ, ನಾಯಕ ಪೂರನ್ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ರೋಮನ್ ಪೋವೆಲ್(28) ಹಾಗೂ ಒಡೆನ್ ಸ್ಮಿತ್ ಅಜೇಯ 23 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.