T20 World Cup ಪಂದ್ಯದ ದಿಕ್ಕು ಬದಲಿಸಿದ ವಿರಾಟ್ ಕೊಹ್ಲಿ ಒಂದೇ ಕೈಯಲ್ಲಿ ಹಿಡಿದ ಕ್ಯಾಚ್..! ವಿಡಿಯೋ ವೈರಲ್
* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಜಯಭೇರಿ
* ಅದ್ಭುತ ಫೀಲ್ಡಿಂಗ್ ಮೂಲಕ ಮಿಂಚಿದ ವಿರಾಟ್ ಕೊಹ್ಲಿ
* ಆಸ್ಟ್ರೇಲಿಯಾ ಎದುರು 6 ರನ್‌ಗಳ ರೋಚಕ ಜಯ ಸಾಧಿಸಿದ ರೋಹಿತ್ ಶರ್ಮಾ ಪಡೆ
ಬ್ರಿಸ್ಬೇನ್(ಅ.17): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಎದುರಿನ ಅಭ್ಯಾಸ ಪಂದ್ಯದಲ್ಲಿ ಕೇವಲ 19 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೂ ಸಹಾ ಅದ್ಭುತ ಕ್ಷೇತ್ರರಕ್ಷಣೆಯ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿ ಗಮನ ಸೆಳೆದಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ ಪಾಲಿನ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ರೋಹಿತ್ ಶರ್ಮಾ ಪಡೆ 6 ರನ್‌ಗಳ ರೋಚಕ ಜಯ ಸಾಧಿಸಿ ಬೀಗಿದೆ.
ಹೌದು, ಇಲ್ಲಿನ ಗಾಬಾ ಮೈದಾನದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಅಸ್ಟ್ರೇಲಿಯಾ ಎದುರು ಟೀಂ ಇಂಡಿಯಾ ಸೋಲಿನತ್ತ ಮುಖ ಮಾಡಿತ್ತು. ಆದರೆ 19ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್ ಅವರನ್ನು ಚುರುಕಿನ ಕ್ಷೇತ್ರರಕ್ಷಣೆಯ ಮೂಲಕ ರನೌಟ್ ಮಾಡಿ ತಂಡಕ್ಕೆ ಮೇಲುಗೈ ದಕ್ಕಿಸಿಕೊಟ್ಟರು. ಕೊಹ್ಲಿ ಮಾಡಿದ ರನೌಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗೂ ಕೊಹ್ಲಿ ಅಭಿಮಾನಿಗಳು ತಮ್ಮ ವಾಟ್ಸಪ್ ಸ್ಟೇಟಸ್‌ಗಳಲ್ಲೂ ಈ ವಿಡಿಯೋವನ್ನು ಶೇರ್ ಮಾಡಿಕೊಂಡು ಸಂಭ್ರಮ ಪಡುತ್ತಿದ್ದಾರೆ.
ಇನ್ನು ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಆಸ್ಟ್ರೇಲಿಯಾ ಗೆಲ್ಲಲು 11 ರನ್‌ಗಳ ಸಾಧಾರಣ ರನ್‌ಗಳ ಅಗತ್ಯವಿತ್ತು. ಸ್ಟ್ರೈಕ್‌ನಲ್ಲಿದ್ದ ಪ್ಯಾಟ್ ಕಮಿನ್ಸ್ ಮೊದಲೆರಡು ಎಸೆತಗಳಲ್ಲಿ ತಲಾ 2 ರನ್ ಗಳಿಸಿದರು. ಹೀಗಾಗಿ ಕೊನೆಯ 4 ಎಸೆತಗಳಲ್ಲಿ ಕೇವಲ 7 ರನ್‌ಗಳ ಅಗತ್ಯವಿತ್ತು. ಶಮಿ ಎಸೆದ ಮೂರನೇ ಚೆಂಡನ್ನು ಕಮಿನ್ಸ್ ನೇರವಾಗಿ ಲಾಂಗ್ ಆನ್‌ನತ್ತ ಸಿಕ್ಸರ್‌ಗಟ್ಟುವ ಯತ್ನ ನಡೆಸಿದರು. ಚೆಂಡು ಇನ್ನೇನು ಸಿಕ್ಸರ್ ಗಡಿ ದಾಟಿತು ಎನ್ನುವಷ್ಟರಲ್ಲಿ ಸರಿಯಾದ ಸಮಯಕ್ಕೆ ಜಂಪ್ ಮಾಡಿ ಒಂದೇ ಕೈಯಲ್ಲಿ ಕ್ಯಾಚ್ ಹಿಡಿಯುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾದರು. ಈ ಮೂಲಕ ಪಂದ್ಯ ಭಾರತದತ್ತ ವಾಲಿತು. ವಿರಾಟ್ ಕೊಹ್ಲಿ ಹಿಡಿದ ಈ ಅದ್ಭುತ ಕ್ಯಾಚ್‌ಗೆ ಭಾರತೀಯ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಮಾತ್ರವಲ್ಲ, ಆಸ್ಟ್ರೇಲಿಯಾದ ಆಟಗಾರರು ಕೂಡಾ ಚಪ್ಪಾಳೆ ತಟ್ಟಿದರು.
ಮೊಹಮ್ಮದ್ ಶಮಿಗೆ ಕೇವಲ ಒಂದೇ ಓವರ್ ನೀಡಿದ್ದೇಕೆ..? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ರೋಹಿತ್ ಶರ್ಮಾ
ಮರು ಎಸೆತದಲ್ಲಿ ಕೊಹ್ಲಿ-ಶಮಿ ಜೋಡಿ ಏಗರ್ ರನೌಟ್ ಮಾಡುವಲ್ಲಿಯೂ ಯಶಸ್ವಿಯಾಯಿತು. ಬಳಿಕ ಶಮಿ ಸತತ ಎರಡು ಎಸೆತದಲ್ಲಿ 2 ವಿಕೆಟ್ ಉರುಳಿಸಿ ಭಾರತಕ್ಕೆ 6 ರನ್‌ಗಳ ರೋಚಕ ಗೆಲುವು ತಂದುಕೊಟ್ಟರು.
ಭಾರತ ನೀಡಿದ್ದ 187 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆತಿಥೇಯ ಆಸ್ಟ್ರೇಲಿಯಾ ತಂಡವು ಕೊನೆಯ ಓವರ್‌ನಲ್ಲಿ ಗೆಲ್ಲಲು 11 ರನ್‌ಗಳ ಅಗತ್ಯವಿತ್ತು. ಆದರೆ ಶಮಿ ಕೇವಲ 4 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.