T20 World Cup: ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ INOX
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿಆರಂಭ
ಅಕ್ಟೋಬರ್ 23ರಂದು ಭಾರತ, ಪಾಕಿಸ್ತಾನ ಎದುರು ಮೊದಲ ಪಂದ್ಯವಾಡಲಿದೆ
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆಡಲಿರುವ ಎಲ್ಲಾ ಪಂದ್ಯಗಳು ಐನಾಕ್ಸ್‌ನಲ್ಲಿ ನೇರ ಪ್ರಸಾರ
ಬೆಂಗಳೂರು(ಅ.13): ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಚುಟುಕು ಕ್ರಿಕೆಟ್ ಮಹಾಸಂಗ್ರಾಮ ಆರಂಭವಾಗಲಿದ್ದು, ಹೊಡಿಬಡಿಯಾಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೀಗ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಐನಾಕ್ಸ್ ಮಲ್ಟಿಪ್ಲೆಕ್ಸ್ ಸಿಹಿ ಸುದ್ದಿ ನೀಡಿದೆ.
ದೇಶದ ಹಲವು ನಗರಗಳಲ್ಲಿ ಚಿತ್ರಮಂದಿರಗಳನ್ನು ಹೊಂದಿರುವ ಐಸಾಕ್ಸ್(INOX) ಸಂಸ್ಥೆಯು, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಡಲಿರುವ ಎಲ್ಲಾ ಪಂದ್ಯಗಳ ನೇರಪ್ರವಾರವನ್ನು ಐನಾಕ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶಿಸುವ ಕುರಿತಂತೆ ಐಸಿಸಿ ಜತೆ ಮಾತುಕತೆ ನಡೆಸಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಹ ಪ್ರಾಯೋಜಕರಾಗಿರುವ ಐನಾಕ್ಸ್, ಭಾರತದ ಪಂದ್ಯಗಳನ್ನು ಸಿನಿಮಾ ಸ್ಕ್ರೀನ್‌ಗಳಲ್ಲಿ ಪ್ರದರ್ಶಿಸಲು ಐಸಿಸಿಯಿಂದ ಅನುಮತಿಯನ್ನು ಪಡೆದಿದೆ.
ಮುಂಬೈ ಮೂಲದ ದೈತ್ಯ ಸಿನಿಮಾ ಮಲ್ಟಿಪ್ಲೆಕ್ಸ್ ಎನಿಸಿಕೊಂಡಿರುವ ಐನಾಕ್ಸ್, ದೇಶಾದ್ಯಂತ ಒಟ್ಟು 74 ನಗರಗಳಲ್ಲಿ ತನ್ನ ಜಾಲವನ್ನು ಹೊಂದಿದೆ. ದೇಶದಲ್ಲಿ ಒಟ್ಟು 165 ಮಲ್ಟಿಪ್ಲೆಕ್ಸ್‌ಗಳು ಮತ್ತು 705 ಸ್ಕ್ರೀನ್‌ಗಳನ್ನು ಹೊಂದಿರುವ ಐನಾಕ್ಸ್(INOX), 1.57 ಲಕ್ಷ ಆಸನದ ಸಾಮರ್ಥ್ಯವನ್ನು ಹೊಂದಿದೆ. ಐನಾಕ್ಸ್‌ನಲ್ಲಿ ಭಾರತದ ಎಲ್ಲಾ ಗ್ರೂಪ್ ಪಂದ್ಯಗಳು ಹಾಗೂ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ದೇಶದ 25ಕ್ಕೂ ಅಧಿಕ ನಗರಗಳಲ್ಲಿ ಪ್ರದರ್ಶಿಸಲು ತೀರ್ಮಾನಿಸಲಾಗಿದೆ.
ಈ ಕುರಿತಂತೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಐನಾಕ್ಸ್, 'ಟಿ20 ವಿಶ್ವಕಪ್ ಟೂರ್ನಿಯ ನೇರ ಪ್ರಸಾರದ ಪಂದ್ಯಗಳನ್ನು ದೇಶದ 25ಕ್ಕೂ ಅಧಿಕ ನಗರಗಳಲ್ಲಿ ಐನಾಕ್ಸ್ ಮಲ್ಟಿಪ್ಲೆಕ್ಸ್ ಮೂಲಕ ಸ್ಕ್ರೀನ್ ಮಾಡಲಾಗುವುದು' ಎಂದು ತಿಳಿಸಿದೆ.
ICC T20 World Cup 2022: ಟೂರ್ನಿ ವೇಳಾಪಟ್ಟಿ ಪ್ರಕಟ, ಇಂಡೋ-ಪಾಕ್ ಕಾದಾಟಕ್ಕೆ ಡೇಟ್ ಫಿಕ್ಸ್..!
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡ ಎನಿಸಿಕೊಂಡಿದೆ. ಆದರೆ ಭಾರತಕ್ಕೆ ಆತಿಥೇಯ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡಗಳನ್ನು ಮಣಿಸಿದರೆ ಮಾತ್ರ ಚುಟುಕು ಕ್ರಿಕೆಟ್ ವಿಶ್ವಕಪ್‌ಗೆ ಮುತ್ತಿಕ್ಕಲು ಸಾಧ್ಯವಾಗಲಿದೆ. 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ನೇತೃತ್ವದ ಟೀಂ ಇಂಡಿಯಾ, ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇನ್ನು ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಐತಿಹಾಸಿಕ ಮೆಲ್ಬೊರ್ನ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ.
ಇದಾದ ಬಳಿಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 27ರಂದು ಗ್ರೂಪ್ 'ಎ' ರನ್ನರ್ ಅಪ್ ತಂಡವನ್ನು ಎದುರಿಸಲಿದೆ. ಆನಂತರ ಟೀಂ ಇಂಡಿಯಾ, ಅಕ್ಟೋಬರ್ 30 ಹಾಗೂ ನವೆಂಬರ್ 02ರಂದು ಕ್ರಮವಾಗಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶವನ್ನು ಎದುರಿಸಲಿದೆ. ಇನ್ನು ಸೂಪರ್ 12 ಹಂತದ ಭಾರತದ ಪಾಲಿನ ಕೊನೆಯ ಪಂದ್ಯದಲ್ಲಿ ಗ್ರೂಪ್ 'ಬಿ' ವಿನ್ನರ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ನವೆಂಬರ್ 6ರಂದು ನಡೆಯಲಿದೆ.