ಟಿ20 ಮುಂಬೈ 2025ರ ಫೈನಲ್‌ನಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಮುಂಬೈ ಫಾಲ್ಕನ್ಸ್ ತಂಡವು 5 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿತು. ಕೇವಲ 10 ದಿನಗಳ ಅಂತರದಲ್ಲಿ ಅಯ್ಯರ್‌ಗೆ ಎರಡನೇ ಫೈನಲ್‌ ಹೀನಾಯ ಸೋಲು ಎದುರಾಗಿದೆ.

ಮುಂಬೈ: ಟಿ20 ಮುಂಬೈ 2025ರ ಫೈನಲ್‌ನಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಮುಂಬೈ ಫಾಲ್ಕನ್ಸ್‌ ಹಾಗೂ ಮುಂಬೈ ಸೌಥ್ ಸೆಂಟ್ರಲ್ ಮರಾಠ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಪ್ರಶಸ್ತಿಗಾಗಿ ನಡೆದ ಕಾದಾಟದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಮುಂಬೈ ಫಾಲ್ಕನ್ಸ್‌ ತಂಡವು 5 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ಕೇವಲ 10 ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಫೈನಲ್‌ ಹಾರ್ಟ್ ಬ್ರೇಕ್ ಆದಂತಾಗಿದೆ

ಇದಕ್ಕೂ ಮೊದಲು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಫೈನಲ್ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಸುತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 6 ರನ್ ಅಂತರದ ರೋಚಕ ಸೋಲು ಅನುಭವಿಸಿತ್ತು. ಈಗ ಶ್ರೇಯಸ್ ಅಯ್ಯರ್‌ಗೆ ಮತ್ತೊಮ್ಮೆ ಫೈನಲ್‌ನಲ್ಲಿ ನಿರಾಸೆ ಎದುರಾಗಿದೆ.

ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಬರೋಬ್ಬರಿ 11 ವರ್ಷಗಳ ಬಳಿಕ ಐಪಿಎಲ್ ಫೈನಲ್‌ಗೇರಿತ್ತು. ಈ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿತ್ತು. ಆದರೆ ಐಪಿಎಲ್‌ ಫೈನಲ್‌ನಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಅಭೂತಪೂರ್ವ ಪ್ರದರ್ಶನ ತೋರಿದ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರೋಚಕ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಯಿತು.

Scroll to load tweet…

ಟಿ20 ಮುಂಬೈ 2025ರ ಫೈನಲ್‌ನಲ್ಲಿ ಅಯ್ಯರ್‌ ಪಡೆಗೆ ಸೋಲು:

ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಫಾಲ್ಕನ್ಸ್ ಕ್ರಿಕೆಟ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕಿತು. ಮುಂಬೈ ಫಾಲ್ಕನ್ಸ್ ಪರ ಮಯುರೇಶ್ ಟಂಡೆಲ್ ಕೇವಲ 32 ಎಸೆತಗಳಲ್ಲಿ 50 ರನ್ ಸಿಡಿಸುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಇನ್ನು ಫೈನಲ್‌ನಲ್ಲಿ ಶ್ರೇಯಸ್ ಅಯ್ಯರ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. 17 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ ಕೇವಲ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮುಂಬೈ ಸೌಥ್ ಸೆಂಟ್ರಲ್ ಮರಾಠ ರಾಯಲ್ಸ್ ತಂಡ ಪರ ಶಿಸ್ತುಬದ್ದ ದಾಳಿ ನಡೆಸಿದ ವೈಭವ್ ಮಾಲಿ 4 ಓವರ್‌ನಲ್ಲಿ 32 ರನ್ ನೀಡಿ ಎರಡು ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು.

ರೋಚಕ ಜಯ ಸಾಧಿಸಿದ ಮುಂಬೈ ಸೌಥ್ ಸೆಂಟ್ರಲ್ ಮರಾಠ ರಾಯಲ್ಸ್:

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮುಂಬೈ ಸೌಥ್ ಸೆಂಟ್ರಲ್ ಮರಾಠ ರಾಯಲ್ಸ್ ತಂಡವು 19.2 ಓವರ್‌ನಲ್ಲಿ 5 ವಿಕೆಟ್‌ ಕಳೆದುಕೊಂಡು ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಮುಂಬೈ ಸೌಥ್ ಸೆಂಟ್ರಲ್ ಮರಾಠ ರಾಯಲ್ಸ್ ತಂಡದ ಪರ ಆಕರ್ಷಕ ಬ್ಯಾಟಿಂಗ್ ನಡೆಸಿದ ಚಿನ್ಮಯ್ ರಾಜೇಶ್ 49 ಎಸೆತಗಳನ್ನು ಎದುರಿಸಿ 53 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ಆವೇಶ್ ಖಾನ್ 24 ಎಸೆತಗಳಲ್ಲಿ 38, ಸಾಹೀಲ್ 12 ಎಸೆತಗಳಲ್ಲಿ 22 ರನ್ ಸಿಡಿಸಿ ಮಿಂಚಿದರು. ಮುಂಬೈ ಫಾಲ್ಕನ್ಸ್ ಪರ ಕಾರ್ತಿಕ್ ಮಿಶ್ರಾ ಹಾಗು ಯಶ್ ತಲಾ ಎರಡು ವಿಕೆಟ್ ಕಬಳಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ವಿಫಲವಾದರು.