ಬೆಂಗಳೂರು(ಡಿ.27): ಜನವರಿ 10 ರಿಂದ ಆರಂಭವಾಗಲಿರುವ ದೇಶೀಯ ಕ್ರಿಕೆಟ್‌ ಟೂರ್ನಿ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟ್ರೋಫಿಗೆ ಕರ್ನಾಟಕ ತಂಡವನ್ನು ಭಾನುವಾರ ಪ್ರಕಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಯ ಖಜಾಂಚಿ, ವಕ್ತಾರ ವಿನಯ್‌ ಮೃತ್ಯುಂಜಯ ಹೇಳಿದ್ದಾರೆ.

ಜ.10 ರಿಂದ 19 ರವರೆಗೆ ನಡೆಯುವ ಕರ್ನಾಟಕದ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣ, ಆಲೂರು-1, 2 ಮತ್ತು 3 ಮೈದಾನದಲ್ಲಿ ನಡೆಯಲಿವೆ. ಹಾಲಿ ಚಾಂಪಿಯನ್ ಕರ್ನಾಟಕ ತಂಡ ಮತ್ತೊಮ್ಮೆ ಟ್ರೋಫಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಕರ್ನಾಟಕ ನಾಯಕ ಮನೀಶ್ ಪಾಂಡೆ ಟೆನಿಸ್ ಎಲ್ಬೋಗೆ ತುತ್ತಾಗಿದ್ದು, ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. ಸದ್ಯ ಮನೀಶ್ ಪಾಂಡೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಮನೀಶ್ ಪಾಂಡೆ ಅನುಪಸ್ಥಿತಿ ಕರ್ನಾಟಕ ತಂಡದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ.

ಮುಷ್ತಾಕ್ ಅಲಿ ಟಿ20 ವೇಳಾಪಟ್ಟಿ ಪ್ರಕಟ: ಕರ್ನಾಟಕಕ್ಕೆ ಜಮ್ಮು ಎದುರಾಳಿ

ಈಗಾಗಲೇ ಕರ್ನಾಟಕದ ಇಬ್ಬರು ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್‌ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಬಹುತೇಕ ಟೂರ್ನಿಯ ಲೀಗ್‌ ಹಂತದ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಇನ್ನು ಮನೀಶ್ ಪಾಂಡೆ ಅನುಪಸ್ಥಿತಿಯಲ್ಲಿ ಮತ್ತೆ ಕರುಣ್ ನಾಯರ್ ಇಲ್ಲವೇ ಯುವ ಪ್ರತಿಭೆ ದೇವದತ್ ಪಡಿಕ್ಕಲ್ ಕರ್ನಾಟಕ ತಂಡವನ್ನು ಮುನ್ನಡೆಸುವ ಸಾಧ್ಯೆತೆಯಿದೆ.