ನವದೆಹಲಿ(ಡಿ.18): 2021ರ ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಹಾಲಿ ಚಾಂಪಿಯನ್‌ ಕರ್ನಾಟಕ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜ.10ರಿಂದ ಆರಂಭಗೊಳ್ಳಲಿರುವ ಲೀಗ್‌ ಹಂತದ ಪಂದ್ಯಗಳು ಬೆಂಗಳೂರು ಸೇರಿ ಒಟ್ಟು 6 ನಗರಗಳಲ್ಲಿ ನಡೆಯಲಿವೆ.

ಜ.2ರ ವೇಳೆಗೆ ತಂಡಗಳು ತಮಗೆ ನಿಗದಿಪಡಿಸಿರುವ ನಗರಗಳನ್ನು ತಲುಪಿ ಸರ್ಕಾರದ ನಿಯಮದ ಅನುಸಾರ ಕೋವಿಡ್‌ ಪರೀಕ್ಷೆಗಳಿಗೆ ಒಳಗಾಗುವಂತೆ ಬಿಸಿಸಿಐ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಇ-ಮೇಲ್‌ ಮೂಲಕ ತಿಳಿಸಿದೆ.

ಬೆಂಗಳೂರು, ಕೋಲ್ಕತಾ, ವಡೋದರಾ, ಇಂದೋರ್‌, ಮುಂಬೈನಲ್ಲಿ ಎಲೈಟ್‌ ಗುಂಪುಗಳ ಪಂದ್ಯಗಳು ನಡೆದರೆ, ಚೆನ್ನೈನಲ್ಲಿ ಪ್ಲೇಟ್‌ ಗುಂಪಿನಲ್ಲಿರುವ ತಂಡಗಳು ಸೆಣಸಲಿವೆ. ನಾಕೌಟ್‌ ಹಂತದ ಎಲ್ಲ ಪಂದ್ಯಗಳು ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿವೆ. ಜ.26, 27ಕ್ಕೆ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿದ್ದು, ಜ.29ಕ್ಕೆ ಸೆಮಿಫೈನಲ್ಸ್‌ ಹಾಗೂ ಜ.31ರಂದು ಫೈನಲ್‌ ನಡೆಯಲಿದೆ.

ನಾನು ನವ ಭಾರತದ ಪ್ರತಿನಿಧಿ: ವಿರಾಟ್‌ ಕೊಹ್ಲಿ

ರಾಜ್ಯಕ್ಕೆ ಸುಲಭ ಸವಾಲು: ‘ಎ’ ಗುಂಪಿನಲ್ಲಿರುವ ಕರ್ನಾಟಕಕ್ಕೆ ಲೀಗ್‌ ಹಂತದಲ್ಲಿ ಸುಲಭ ಸವಾಲು ಎದುರಾಗಲಿದೆ. ಜ.10ಕ್ಕೆ ಜಮ್ಮು-ಕಾಶ್ಮೀರ, ಜ.12ಕ್ಕೆ ಪಂಜಾಬ್‌, ಜ.14ಕ್ಕೆ ತ್ರಿಪುರಾ, ಜ.16ಕ್ಕೆ ರೈಲ್ವೆಸ್‌, ಜ.18ಕ್ಕೆ ಉತ್ತರ ಪ್ರದೇಶದ ವಿರುದ್ಧ ಸೆಣಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಆಲೂರಿನ ಕೆಎಸ್‌ಸಿಎ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.