* ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ಶುಭಾರಂಭ* ಮುಂಬೈ ಎದುರು 9 ರನ್‌ಗಳ ರೋಚಕ ಜಯ * 3 ವಿಕೆಟ್ ಕಬಳಿಸಿ ಮಿಂಚಿದ ಕರಿಯಪ್ಪ

ಗುವಾಹಲಿ(ನ.04) ಕೆ.ಸಿ. ಕರಿಯಪ್ಪ (KC Cariappa) ಹಾಗೂ ಕೃಷ್ಣಪ್ಪ ಗೌತಮ್‌ (Krishnappa Gowtham) ಮಾರಕ ದಾಳಿಯ ನೆರವಿನಿಂದ ಮುಂಬೈ ತಂಡದ ಎದುರು ಕರ್ನಾಟಕ ಕ್ರಿಕೆಟ್ ತಂಡವು (Karnataka Cricket Team) 9 ರನ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡವು ಭರ್ಜರಿಯಾಗಿಯೇ ಶುಭಾರಂಭ ಮಾಡಿದೆ. ಇದರ ಜತಗೆ ರಾಜ್ಯದ ಜನತೆಗೆ ದೀಪಾವಳಿಯ ಉಡುಗೊರೆ ನೀಡಿದೆ.

ಇಲ್ಲಿನ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ನೀಡಿದ್ದ 167 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಲಿಷ್ಠ ಮುಂಬೈ ತಂಡವು ಮೊದಲ ಓವರ್‌ನಲ್ಲೇ ಪೃಥ್ವಿ ಶಾ (Prithvi Shaw) ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಕರಿಯಪ್ಪ ಬೌಲಿಂಗ್‌ನಲ್ಲಿ ಪೃಥ್ವಿ ಶಾ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ನಾಯಕ ಅಜಿಂಕ್ಯ ರಹಾನೆ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ 40 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಜೈಸ್ವಾಲ್‌ 13 ರನ್‌ ಬಾರಿಸಿದ್ದಾಗ ಕೆ. ಗೌತಮ್ ಬೌಲಿಂಗ್‌ನಲ್ಲಿ ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಸ್ಟಂಪೌಟ್ ಆಗಿ ಪೆವಿಲಿಯನ್ ಸೇರಿದರು.

ಮುಂಬೈಗೆ ಆಸರೆಯಾದ ರಹಾನೆ-ಲಾಡ್ ಜತೆಯಾಟ: ಒಂದು ಹಂತದಲ್ಲಿ 44 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಮುಂಬೈ ತಂಡಕ್ಕೆ ನಾಯಕ ಅಜಿಂಕ್ಯ ರಹಾನೆ (Ajinkya Rahane) ಹಾಗೂ ಸಿದ್ದೇಶ್ ಲಾಡ್ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ ಚುರುಗಾಗಿ 81 ರನ್‌ಗಳ ಜತೆಯಾಟವಾಡುವ ಮೂಲಕ ಸುಲಭವಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಸಿದ್ದೇಶ್ ಲಾಡ್ 25 ಎಸೆತಗಳಲ್ಲಿ 5 ಬೌಂಡರಿ ಸಹಿತ 32 ರನ್‌ ಬಾರಿಸಿದ್ದರು. ಈ ವೇಳೆ ಮತ್ತೊಮ್ಮೆ ಜಾದೂ ಮಾಡಿದ ಕೃಷ್ಣಪ್ಪ ಗೌತಮ್‌, ಸಿದ್ದೇಶ್ ಲಾಡ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಈ ಜತೆಯಾಟ ಬೇರ್ಪಡುತ್ತಿದ್ದಂತೆಯೇ ಪಂದ್ಯದ ಮೇಲೆ ಕರ್ನಾಟಕ ಕ್ರಿಕೆಟ್ ತಂಡದ ಹಿಡಿತ ನಿಧಾನವಾಗಿ ಗಟ್ಟಿಯಾಗತೊಡಗಿತು. ಸಿದ್ದೇಶ್ ವಿಕೆಟ್‌ ಒಪ್ಪಿಸಿ ಮುಂಬೈ ತನ್ನ ಖಾತೆಗೆ 4 ರನ್‌ ಸೇರಿಸುವಷ್ಟರಲ್ಲಿ ನಾಯಕ ರಹಾನೆ ವಿಕೆಟ್ ಕಳೆದುಕೊಂಡು ಮತ್ತಷ್ಟು ಆತಂಕಕ್ಕೆ ಒಳಗಾಯಿತು. 

Syed Mushtaq Ali Trophy ಇಂದಿನಿಂದ ಆರಂಭ : ರಾಜ್ಯಕ್ಕಿಂದು ಮುಂಬೈ ಚಾಲೆಂಜ್‌!

ರಹಾನೆ ದಿಟ್ಟ ಬ್ಯಾಟಿಂಗ್: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಬಹುತೇಕ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಅಜಿಂಕ್ಯ ರಹಾನೆ, ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ತಂಡದ ಪರ ನಾಯಕನ ಆಟವಾಡಿ ಗಮನ ಸೆಳೆದರು. ಕೇವಲ 54 ಎಸೆತಗಳನ್ನು ಎದುರಿಸಿದ ರಹಾನೆ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 75 ರನ್‌ ಬಾರಿಸಿ ಕರಿಯಪ್ಪ ಅವರಿಗೆ ಎರಡನೇ ಬಲಿಯಾದರು.

ಮುಂಬೈ ದಿಢೀರ್ ಕುಸಿತ: ಒಂದು ಹಂತದಲ್ಲಿ 15 ಓವರ್ ಅಂತ್ಯದ ವೇಳೆಗೆ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ಮುಂಬೈ ಇದಾದ ಬಳಿಕ ಕರಿಯಪ್ಪ ಹಾಗೂ ಗೌತಮ್ ಮಾರಕ ದಾಳಿಗೆ ತತ್ತರಿಸಿ ಸೋಲಿನತ್ತ ಮುಖ ಮಾಡಿತು. ಸಿದ್ದೇಶ್ ಲಾಡ್ ಹಾಗೂ ಅಜಿಂಕ್ಯ ರಹಾನೆ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಶಿವಂ ದುಬೆ 3 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ಆದಿತ್ಯ ತಾರೆ ಬ್ಯಾಟಿಂಗ್ 12 ರನ್‌ಗಳಿಗೆ ಸೀಮಿತವಾಯಿತು. ಇನ್ನು ಅಮಾನ್ ಹಕೀಮ್ ಖಾನ್ ಕೂಡಾ ಒಂದು ರನ್ ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು. ಕೊನೆಯಲ್ಲಿ ಅಥರ್ವ ಅಂಕೋಲ್ಕರ್‌ 8 ಎಸೆತಗಳಲ್ಲಿ 13 ರನ್‌ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. 

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೊದಲ ಎಸೆತದಲ್ಲೇ ಮಯಾಂಕ್ ಅಗರ್‌ವಾಲ್‌, ಮೋಹಿತ್ ಅವಸ್ತಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ದೇವದತ್ ಪಡಿಕ್ಕಲ್‌(5) ಕೂಡಾ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಕರ್ನಾಟಕ 15 ರನ್‌ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು. ಈ ವೇಳೆ ಮೂರನೇ ವಿಕೆಟ್‌ಗೆ ಜತೆಯಾದ ನಾಯಕ ಮನೀಶ್ ಪಾಂಡೆ ಹಾಗೂ ಮಾಜಿ ನಾಯಕ ಕರುಣ್ ನಾಯರ್ ಜೋಡಿ 149 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಕರುಣ್ ನಾಯರ್ 53 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 72 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಮನೀಶ್ ಪಾಂಡೆ 64 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 84 ರನ್‌ ಬಾರಿಸಿ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.