ಸಯ್ಯದ್ ಮುಷ್ತಾಕ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ತ್ರಿಪುರಾ ಎದುರು 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಆಲೂರು(ಜ.14): ದೇವದತ್ ಪಡಿಕ್ಕಲ್ ಅಜೇಯ 99 ರನ್ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ತ್ರಿಪುರಾ ಎದುರು 10 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಗೆದ್ದ ತ್ರಿಪುರಾ ತಂಡದ ನಾಯಕ, ಕರ್ನಾಟಕ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆದರೆ ತ್ರಿಪುರಾ ನಾಯಕನ ತೀರ್ಮಾನವನ್ನು ತಲೆಕೆಳಗೆ ಮಾಡುವಲ್ಲಿ ಕರ್ನಾಟಕದ ಆರಂಭಿಕ ಜೋಡಿಯಾದ ರೋಹನ್ ಕದಂ ಹಾಗೂ ದೇವದತ್ ಪಡಿಕ್ಕಲ್ ಜೋಡಿ ಯಶಸ್ವಿಯಾಯಿತು. ಮೊದಲ ವಿಕೆಟ್‌ಗೆ ಈ ಜೋಡಿ 8.2 ಓವರ್‌ಗಳಲ್ಲಿ 62 ರನ್‌ಗಳ ಜತೆಯಾಟವಾಡಿತು. ರೋಹನ್ 23 ಎಸೆತಗಳಲ್ಲಿ 31 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಕರುಣ್ ನಾಯರ್ ಮತ್ತೊಮ್ಮೆ ಒಂದಂಕಿ(05) ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.
ಪಡಿಕ್ಕಲ್ ಕೆಚ್ಚೆದೆಯ ಬ್ಯಾಟಿಂಗ್: ಯುವ ಪ್ರತಿಭಾನ್ವಿತ ಆಟಗಾರ ಪಡಿಕ್ಕಲ್ ತ್ರಿಪುರಾ ಬೌಲರ್‌ಗಳ ಎದುರು ದಿಟ್ಟ ಪ್ರದರ್ಶನ ತೋರಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ದೃತಿಗೆಡದ ಪಡಿಕ್ಕಲ್ 67 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 99 ರನ್ ಚಚ್ಚಿದರು. ಈ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆ ಹಾಕಲು ನೆರವಾದರು.
ಮುಷ್ತಾಕ್ ಅಲಿ ಟಿ20 ಟ್ರೋಫಿ: ಕೇವಲ 37 ಎಸೆತಗಳಲ್ಲಿ ಶತಕ ಚಚ್ಚಿದ ಅಜರುದ್ದೀನ್..!
ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ತ್ರಿಪುರಾ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಒಂದು ಹಂತದಲ್ಲಿ 68 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ತ್ರಿಪುರಾ ತಂಡಕ್ಕೆ ನಾಯಕ ಮಣಿಶಂಕರ್ ಮುರಾಸಿಂಗ್ ಹಾಗೂ ರಜತ್ ಆಸರೆಯಾದರು. ಕೊನೆಯಲ್ಲಿ ಈ ಜೋಡಿ ಸ್ಫೋಟಕ ಜತೆಯಾಟ ನಿಭಾಯಿಸಿತು. ರಜತ್ ಅಜೇಯ 44 ರನ್ ಬಾರಿಸಿದರೆ, ಮಣಿಶಂಕರ್ ಕೇವಲ 33 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 61 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
