Asianet Suvarna News Asianet Suvarna News

ಮುಷ್ತಾಕ್ ಅಲಿ ಟಿ20 ಟ್ರೋಫಿ: ಕೇವಲ 37 ಎಸೆತಗಳಲ್ಲಿ ಶತಕ ಚಚ್ಚಿದ ಅಜರುದ್ದೀನ್‌..!

ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರುದ್ದೀನ್ ಬಾರಿಸಿದ ಸ್ಫೋಟಕ ಶತಕದ ನೆರವಿನಿಂದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಬಲಿಷ್ಠ ಮುಂಬೈ ಎದುರು ಕೇರಳ ಇದೇ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Syed Mushtaq Ali Trophy Azharuddeen guides Kerala to 8 wicket win over Mumbai kvn
Author
Mumbai, First Published Jan 14, 2021, 1:54 PM IST

ಮುಂಬೈ(ಜ.14): ಇಲ್ಲಿನ ವಾಂಖೆಡೆ ಮೈದಾನದಲ್ಲಿ ಬುಧವಾರ(ಜ.13)ದಂದು ಅಕ್ಷರಶಃ ರನ್‌ ಮಳೆಯೇ ಹರಿದಿದೆ. ಕಾಸರಗೋಡು ಮೂಲಕ ಕೇರಳ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್‌ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಅಜರುದ್ದೀನ್‌ 2015ರಲ್ಲಿ ಕೇರಳ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ ತಮ್ಮ ಸ್ಥಿರ ಪ್ರದರ್ಶನದ ಮೂಲಕ ಅಜರುದ್ದೀನ್ ಗಮನ ಸೆಳೆದಿದ್ದಾರೆ. ಇದೀಗ ಬಲಿಷ್ಠ ಮುಂಬೈ ತಂಡದ ಎದುರು ಕೇವಲ 54 ಎಸೆತಗಳಲ್ಲಿ 137 ರನ್‌ ಚಚ್ಚುವ ಮೂಲಕ ಮಿಂಚಿನ ಪ್ರದರ್ಶನ ತೋರಿದ್ದಾರೆ. ಇದರೊಂದಿಗೆ ಮುಂಬೈ ಎದುರು ಕೇರಳ 8 ವಿಕೆಟ್‌ಗಳ ಜಯ ಸಾಧಿಸಿದೆ.

26 ವರ್ಷದ ಅಜರುದ್ದೀನ್ ಅವರ ವಿಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಂಬೈ ಎದುರು ಕೇರಳ ತಂಡ ಗೆಲುವಿನ ನಗೆ ಬೀರಿದೆ. ಅಜರುದ್ದೀನ್ ಮುಂಬೈ ಎದುರು ಕೇವಲ 54 ಎಸೆತಗಳಲ್ಲಿ 9 ಬೌಂಡರಿ ಹಾಗೂ 11 ಮನಮೋಹಕ ಸಿಕ್ಸರ್‌ಗಳ ನೆರವಿನಿಂದ ಅಜೇಯ 137 ರನ್‌ ಬಾರಿಸಿದರು. 

ಮುಷ್ತಾಕ್ ಅಲಿ ಟ್ರೋಫಿ: ಜಯದ ವಿಶ್ವಾಸದಲ್ಲಿ ಕರ್ನಾಟಕ

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಮುಂಬೈ ತಂಡ ಸಂಘಟಿತ ಬ್ಯಾಟಿಂಗ್‌ ನೆರವಿನಿಂದ 7 ವಿಕೆಟ್ ಕಳೆದುಕೊಂಡು 196 ರನ್‌ ಬಾರಿಸುವ ಮೂಲಕ ಕೇರಳಕ್ಕೆ ಸವಾಲಿನ ಗುರಿ ನೀಡಿತು. ಆದರೆ ಮೊಹಮ್ಮದ್ ಅಜರುದ್ದೀನ್‌ ಹಾಗೂ ರಾಬಿನ್ ಉತ್ತಪ್ಪ(33 ರನ್) ಬ್ಯಾಟಿಂಗ್‌ ಎದುರು ಮುಂಬೈ ಕಲೆಹಾಕಿದ್ದ ಸವಾಲಿನ ಮೊತ್ತ ಮಂಜಿನಂತೆ ಕರಗಿ ಹೋಯಿತು. ಇನ್ನೂ 25 ಎಸೆತಗಳು ಬಾಕಿ ಇರುವಂತೆಯೇ ಕೇರಳ ತಂಡ ಸ್ಮರಣೀಯ ಗೆಲುವು ದಾಖಲಿಸಿತು.

ಮೊಹಮ್ಮದ್ ಅಜರುದ್ದೀನ್‌ ಬ್ಯಾಟಿಂಗ್‌ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಮಂದಿ ಅಭಿನಂದನೆ ಸಲ್ಲಿಸಿದ್ದಾರೆ. 

Follow Us:
Download App:
  • android
  • ios