ಮುಷ್ತಾಕ್‌ ಅಲಿ ಟಿ20 ಟ್ರೋಫಿ: ಬೆಂಗ್ಳೂರಲ್ಲಿಂದು ಮುಂಬೈ vs ಮಧ್ಯ ಪ್ರದೇಶ ಫೈನಲ್‌ ಫೈಟ್

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್‌ನಲ್ಲಿ ಮುಂಬೈ ಮತ್ತು ಮಧ್ಯಪ್ರದೇಶ ತಂಡಗಳು ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಲಿವೆ. ಮುಂಬೈ ತಂಡವು ಎರಡನೇ ಟ್ರೋಫಿ ಗೆಲ್ಲುವತ್ತ ಚಿತ್ತ ಹರಿಸಿದರೆ, ಮಧ್ಯಪ್ರದೇಶ ತಂಡವು ಚೊಚ್ಚಲ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

Syed Mushtaq Ali Trophy Final 2024  Mumbai take on Madhya Pradesh Challenge at Bengaluru kvn

ಬೆಂಗಳೂರು: ಈ ಬಾರಿ ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಫೈನಲ್‌ನಲ್ಲಿ ಭಾನುವಾರ ಮುಂಬೈ ಹಾಗೂ ಮಧ್ಯಪ್ರದೇಶ ತಂಡಗಳು ಸೆಣಸಾಡಲಿವೆ. 2022-23ರ ಚಾಂಪಿಯನ್‌ ಮುಂಬೈ 2ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, 2010-11ರ ಬಳಿಕ ಮೊದಲ ಬಾರಿ ಫೈನಲ್‌ಗೇರಿರುವ ಮಧ್ಯಪ್ರದೇಶ ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಗುಂಪು ಹಂತದಲ್ಲಿ 7ರ ಪೈಕಿ 6 ಪಂದ್ಯಗಳಲ್ಲಿ ಗೆದ್ದು ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದ ರಜತ್‌ ಪಾಟೀದಾರ್‌ ನಾಯಕತ್ವದ ಮಧ್ಯಪ್ರದೇಶ, ಬಳಿಕ ಕ್ವಾರ್ಟರ್‌ ಫೈನಲ್‌ನಲ್ಲಿ ಸೌರಾಷ್ಟ್ರ, ಸೆಮಿಫೈನಲ್‌ನಲ್ಲಿ ಡೆಲ್ಲಿ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೇರಿದೆ. ರಜತ್‌ ಜೊತೆ ವೆಂಕಟೇಶ್‌ ಅಯ್ಯರ್‌, ಆವೇಶ್‌ ಖಾನ್‌ ಸೇರಿ ಪ್ರಮುಖ ಆಟಗಾರರು ತಂಡದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಮೈಲುಗಲ್ಲು: ಆಸೀಸ್ ಎದುರು ಅಪರೂಪದ ದಾಖಲೆ ನಿರ್ಮಾಣ!

ಮತ್ತೊಂದೆಡೆ ಮುಂಬೈ ‘ಇ’ ಗುಂಪಿನಲ್ಲಿ 6 ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿತ್ತು. ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ವಿದರ್ಭ, ಸೆಮೀಸ್‌ನಲ್ಲಿ ಬರೋಡಾವನ್ನು ಸೋಲಿಸಿದೆ. ಶ್ರೇಯಸ್‌ ಅಯ್ಯರ್‌ ನಾಯಕತ್ವದ ತಂಡದಲ್ಲಿ ಅಜಿಂಕ್ಯ ರಹಾನೆ, ಸೂರ್ಯಕುಮಾರ್‌, ಪೃಥ್ವಿ ಶಾ, ಶಾರ್ದೂಲ್ ಠಾಕೂರ್‌, ಶಿವಂ ದುಬೆ ಸೇರಿ ತಾರಾ ಆಟಗಾರರ ದಂಡೇ ಇದೆ.

ಪಂದ್ಯ ಆರಂಭ: ಸಂಜೆ 4.30ಕ್ಕೆ
ನೇರಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ

ಗಾಯ: ವಿಂಡೀಸ್‌ ವಿರುದ್ಧ ಸರಣಿಗೂ ಶ್ರೇಯಾಂಕ ಇಲ್ಲ

ಮುಂಬೈ: ಗಾಯದಿಂದ ಬಳಲುತ್ತಿರುವ ಕರ್ನಾಟಕದ ಯುವ ಆಟಗಾರ್ತಿ ಶ್ರೇಯಾಂಕ ಪಾಟೀಲ್‌ ಡಿ.15ರಿಂದ ಆರಂಭಗೊಳ್ಳಲಿರುವ ವೆಸ್ಟ್‌ಇಂಡೀಸ್‌ ವಿರುದ್ಧ ತಲಾ 3 ಪಂದ್ಯಗಳ ಟಿ20, ಏಕದಿನ ಸರಣಿಯಿಂದಲೂ ಹೊರಬಿದ್ದಿದ್ದಾರೆ. ಶುಕ್ರವಾರ ತಂಡ ಪ್ರಕಟಿಸಲಾಯಿತು. 

ಶ್ರೇಯಾಂಕ, ಯಸ್ತಿಕಾ ಭಾಟಿಯಾ, ಪ್ರಿಯಾ ಪೂನಿಯಾ ಗಾಯಗೊಂಡಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. 2 ತಂಡವನ್ನೂ ಹರ್ಮನ್‌ಪ್ರೀತ್‌ ಕೌರ್‌ ಮುನ್ನಡೆಲಿದ್ದಾರೆ. 3 ಟಿ20 ಪಂದ್ಯಗಳು ನವ ಮುಂಬೈನಲ್ಲಿ ಕ್ರಮವಾಗಿ ಡಿ.15, 17 ಮತ್ತು 19ಕ್ಕೆ, 3 ಏಕದಿನ ಪಂದ್ಯಗಳು ವಡೋದರಾದಲ್ಲಿ ಕ್ರಮವಾಗಿ ಡಿ.22, 24 ಹಾಗೂ 27ಕ್ಕೆ ನಡೆಯಲಿವೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಹಿಂದಕ್ಕೆ ಸರಿದರೆ ಪಾಕ್‌ ಕ್ರಿಕೆಟ್‌ಗೆ ಭಾರೀ ನಷ್ಟ

ಟಿ20 ತಂಡ: ಹರ್ಮನ್‌(ನಾಯಕಿ), ಸ್ಮೃತಿ, ನಂದಿನಿ ಕಶ್ಯಪ್, ಜೆಮಿಮಾ, ರಿಚಾ, ಉಮಾ ಚೆಟ್ರಿ, ದೀಪ್ತಿ, ಸಜನಾ, ರಾಘವಿ ಬಿಸ್ತ್‌, ರೇಣುಕಾ, ಪ್ರಿಯಾ ಮಿಶ್ರಾ, ಟಿಟಾಸ್‌ ಸಧು, ಸೈಮಾ, ಮಿನ್ನು ಮಾನಿ, ರಾಧಾ ಯಾದವ್.

ಏಕದಿನ ತಂಡ: ಹರ್ಮನ್‌(ನಾಯಕಿ), ಸ್ಮೃತಿ, ಪ್ರತಿಕಾ ರಾವಲ್‌, ಜೆಮಿಮಾ, ಹರ್ಲೀನ್‌, ರಿಚಾ, ಉಮಾ, ತೇಜಲ್‌, ದೀಪ್ತಿ, ಮಿನ್ನು, ಪ್ರಿಯಾ, ತನುಕಾ, ಟಿಟಾಸ್‌, ಸೈಮ್‌, ರೇಣುಕಾ.

Latest Videos
Follow Us:
Download App:
  • android
  • ios