ಸರ್ಫರಾಜ್ ಸೇರಿ ಮುಂಬೈನ ನಾಲ್ವರು ಕ್ರಿಕೆಟಿಗರಿಗೆ ಕೋವಿಡ್ ಪಾಸಿಟಿವ್..!
* ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಕ್ಷಣಗಣನೆ
* ನವೆಂಬರ್ 04ರಿಂದ ಮುಷ್ತಾಕ್ ಅಲಿ ಟಿ20 ಟೂರ್ನಿ ಆರಂಭ
* ಮುಂಬೈನ ನಾಲ್ವರು ಕ್ರಿಕೆಟಿಗರಿಗೆ ಕೋವಿಡ್ ಪಾಸಿಟಿವ್
ಮುಂಬೈ(ಅ.27): ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟಿ20 (Syed Mushtaq Ali T20 Trophy) ಟೂರ್ನಿಗೆ ಸಜ್ಜಾಗುತ್ತಿದ್ದ ಮುಂಬೈ ಕ್ರಿಕೆಟ್ ತಂಡಕ್ಕೆ ಕೋವಿಡ್ 19 (COVID 19) ಶಾಕ್ ನೀಡಿದ್ದು, ತಂಡದ ಪ್ರಮುಖ ನಾಲ್ವರು ಆಟಗಾರರಿಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ತಂಡ ಕೂಡಿಕೊಳ್ಳಲು ಕೆಲವೇ ಗಂಟೆಗಳ ಮುಂಚೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ನಾಲ್ವರು ಆಟಗಾರರನ್ನು ಟೂರ್ನಿಗೂ ಮುನ್ನ ತಂಡದಿಂದ ಕೈಬಿಡಲಾಗಿದೆ.
ಸರ್ಫರಾಜ್ ಖಾನ್ (Sarfaraz Khan), ಪ್ರಶಾಂತ್ ಸೋಲಂಕಿ, ಶಂಸ್ ಮುಲಾನಿ ಹಾಗೂ ಸಾಯಿರಾಜ್ ಪಾಟೀಲ್‌ಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕೋವಿಡ್ 19 ತಗುಲಿರುವುದು ಖಚಿತವಾಗಿದೆ. ಇದೀಗ ಈ ನಾಲ್ವರು ಆಟಗಾರರನ್ನು ಮನೆಗ ಕಳಿಸಲಾಗಿದ್ದು, 7 ದಿನಗಳ ಕಾಲ ಐಸೋಲೇಷನ್‌ನಲ್ಲಿರಲು ಆಟಗಾರರಿಗೆ ಸೂಚಿಸಲಾಗಿದೆ. ಸದ್ಯದಲ್ಲೇ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅಜಿಂಕ್ಯ ರಹಾನೆ (Ajinkya Rahane) ನೇತೃತ್ವದ ಮುಂಬೈ ತಂಡವು ಎಲೈಟ್ E ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದೇ ಗುಂಪಿನಲ್ಲಿ ಕರ್ನಾಟಕ, ಬೆಂಗಾಲ್, ಬರೋಡ, ಛತ್ತೀಸ್‌ಗಢ ಹಾಗೂ ಸರ್ವಿಸಸ್ ತಂಡಗಳು ಸ್ಥಾನ ಪಡೆದಿವೆ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯು ನವೆಂಬರ್ 04ರಿಂದ ಲಖನೌ, ಬರೋಡ, ವಿಜಯವಾಡ, ಹರ್ಯಾಣ ಹಾಗೂ ಗುವಾಹಟಿಯಲ್ಲಿ ಆರಂಭವಾಗಲಿದೆ. ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರು 5 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಾಗಿದೆ.
ಕಳೆದ ಕೆಲ ದಿನಗಳಿಂದ ಎಲ್ಲಾ ಆಟಗಾರರು ಮುಂಬೈನ ವಾಂಖೆಡೆ ಮೈದಾನದಲ್ಲಿ ಒಟ್ಟಾಗಿಯೇ ಅಭ್ಯಾಸ ನಡೆಸುತ್ತಿದ್ದರು. ಗುವಾಹಟಿಗೆ ತೆರಳುವ ಒಂದು ದಿನ ಮುಂಚಿತವಾಗಿಯೇ ಆಟಗಾರರು ಒಟ್ಟಾಗಿಯೇ ಇದ್ದರು. ಆಟಗಾರರು ಅಭ್ಯಾಸ ನಡೆಸುವ ಸ್ಥಳದಲ್ಲಿನ ಸುರಕ್ಷತೆಯ ಕುರಿತಂತೆಯೇ ಇದೀಗ ಪ್ರಶ್ನೆಗಳು ಏಳಲಾರಂಭಿಸಿವೆ. ಕೆಲ ದಿನಗಳ ಹಿಂದಷ್ಟೇ ಮುಂಬೈ ಆಟಗಾರರನ್ನು ನಗರದ ಕಮಾಂಡೋ ಟ್ರೈನಿಂಗ್ ಸೆಂಟರ್‌ಗೆ ಕರೆದೊಯ್ಯಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಆಟಗಾರರನ್ನು ಅಲ್ಲಿಗೆ ಕರೆದೊಯ್ದಿದ್ದೇಕೆ ಎನ್ನುವ ಪ್ರಶ್ನೆಯೂ ಈಗ ಕಾಡಲಾರಂಭಿಸಿದೆ.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮುಂಬೈ ನಾಯಕನಾಗಿ ಅಜಿಂಕ್ಯ ರಹಾನೆ ಆಯ್ಕೆ
ನಾವು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಸಹಾ ಕೋವಿಡ್‌ನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಒಂದು ದಿನ ಮುಂಚಿತವಾಗಿಯೇ RT-PCR ಟೆಸ್ಟ್ ನಡೆಸಲಾಗಿತ್ತು. ಇದೀಗ ಏರ್‌ಪೋರ್ಟ್‌ನಲ್ಲಿ ಕೋವಿಡ್ ಪತ್ತೆಯಾಗಿದ್ದರಿಂದ ಆ ನಾಲ್ವರು ಆಟಗಾರರನ್ನು ಮನೆಗೆ ಕಳಿಸಲಾಗಿದ್ದು, ಆಯ್ಕೆ ಸಮಿತಿಯು ಆದಷ್ಟು ಶ್ರೀಘ್ರದಲ್ಲಿಯೇ ಬದಲಿ ಆಟಗಾರರನ್ನು ಆಯ್ಕೆ ಮಾಡಲಿದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
13ನೇ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯು ಭಾರತದಲ್ಲಿ ನವೆಂಬರ್ 04ರಿಂದ ನವೆಂಬರ್ 22ರವರೆಗೆ ನಡೆಯಲಿದೆ. ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಾಗೂ ಪೃಥ್ವಿ ಶಾ ಮುಂಬೈ ತಂಡದ ಪರ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ ಎನಿಸಿದೆ. ಬಲಿಷ್ಠ ಮುಂಬೈ ತಂಡವು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆಲ್ಲಲು ಎದುರು ನೋಡುತ್ತಿದೆ. ಕಳೆದ ಆವೃತ್ತಿಯ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ತಂಡವು 5 ಪಂದ್ಯಗಳನ್ನಾಡಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ರುಚಿ ಕಂಡಿತ್ತು. ಮುಂಬೈ ತಂಡವು ಎಲೈಟ್ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ನವೆಂಬರ್ 04ರಂದು ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.