ನವದೆಹಲಿ(ಡಿ.14): ಕೊರೋನಾದಿಂದಾಗಿ ಮುಂದೂಡಲಾಗಿದ್ದ ದೇಶೀಯ ಕ್ರಿಕೆಟ್‌ ಋುತುವಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಚಾಲನೆ ನೀಡಲು ಮುಂದಾಗಿದೆ. ಜ.10 ರಿಂದ 31 ರವರೆಗೆ ದೇಶೀಯ ಲೀಗ್‌ ಆದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ ಆಯೋಜನೆಗೆ ಬಿಸಿಸಿಐ ಸಕಲ ಸಿದ್ಧತೆ ಮಾಡಿಕೊಂಡಿದೆ.

21 ದಿನಗಳ ಕಾಲ ನಡೆಯಲಿರುವ ಟಿ20 ಟೂರ್ನಿಗೆ 6 ರಾಜ್ಯ ಸಂಸ್ಥೆಗಳ ಮೈದಾನದಲ್ಲಿ ಜೀವ ಸುರಕ್ಷಾ(ಬಯೋ ಬಬಲ್) ವಾತಾವರಣದ ಆತಿಥ್ಯವನ್ನು ಸಜ್ಜುಗೊಳಿಸಲಾಗಿದೆ. ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ನಿಗದಿತ ಕ್ರೀಡಾಂಗಣಗಳಲ್ಲಿ ಜ.2 ರಂದು ವರದಿ ಮಾಡಿಕೊಳ್ಳಬೇಕು ಎಂದು ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ, ಎಲ್ಲಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಇ-ಮೇಲ್‌ ಮೂಲಕ ಸೂಚನೆ ನೀಡಿದ್ದಾರೆ.

ಜಯ್‌ ಶಾ ಅವರ ಇ-ಮೇಲ್‌ ಸಂದೇಶದಲ್ಲಿ, ಮುಷ್ತಾಕ್‌ ಅಲಿ ಟೂರ್ನಿ ಕುರಿತು ಮಾತ್ರ ಮಾಹಿತಿ ಇದೆ. ರಣಜಿ ಟ್ರೋಫಿ ಮತ್ತು ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಗಳ ಆಯೋಜನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎನ್ನಲಾಗಿದೆ. ರಾಜ್ಯ ಸಂಸ್ಥೆಗಳು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ವಿಶ್ಲೇಷಿಸಿದ ನಂತರ 2020-21ರ ದೇಶೀಯ ಕ್ರಿಕೆಟ್‌ ಋುತುವನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾ ತಮ್ಮ ಇ-ಮೇಲ್‌ ನಲ್ಲಿ ತಿಳಿಸಿದ್ದಾರೆ.

ಆರ್‌ಸಿಬಿಗೆ ಗುಡ್‌ ಬೈ ಹೇಳಿ ಮುಂಬೈ ಇಂಡಿಯನ್ಸ್ ಕೂಡಿಕೊಂಡ ಸ್ಟಾರ್ ಆಟಗಾರ..!

ಜ.10 ರಂದು ಆರಂಭವಾಗಲಿರುವ ಟೂರ್ನಿ 31ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ ಎಂದು ಶಾ ಹೇಳಿದ್ದಾರೆ. ಮುಷ್ತಾಕ್‌ ಅಲಿ ಗುಂಪು ಹಂತದ ಪಂದ್ಯಗಳು ಮುಗಿಯುವ ಹೊತ್ತಿಗೆ ರಣಜಿ ಹಾಗೂ ವಿಜಯ್‌ ಹಜಾರೆ ವೇಳಾಪಟ್ಟಿ ಸಿದ್ಧವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 2021ರ ಫೆಬ್ರವರಿಯಲ್ಲಿ ಐಪಿಎಲ್‌ 14ನೇ ಆವೃತ್ತಿಯ ಮೆಗಾ ಹರಾಜು ನಡೆಸುವ ಸಾಧ್ಯತೆಯಿದ್ದು, ದೇಶೀಯ ಟಿ20 ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ.