ಸಿಡ್ನಿ(ಜ.08): ಆಸ್ಟ್ರೇಲಿಯಾದ ನಂಬಿಕಸ್ಥ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಬುಶೇನ್‌ ಕೇವಲ 9 ರನ್‌ಗಳ ಅಂತರದಲ್ಲಿ ಶತಕ ವಂಚಿತರಾಗಿದ್ದಾರೆ, ಎರಡನೇ ದಿನದ ಊಟದ ವಿರಾಮದ ವೇಳೆಗೆ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 249 ರನ್‌ ಬಾರಿಸಿದ್ದು, ಉಭಯ ತಂಡಗಳು ಸಮಬಲದ ಪ್ರದರ್ಶನ ತೋರಿವೆ.

ಹೌದು, ಮೊದಲ ದಿನದಾಟದಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 166 ರನ್‌ ಬಾರಿಸಿದ್ದ ಆಸ್ಟ್ರೇಲಿಯಾ ಮೂರನೇ ವಿಕೆಟ್‌ಗೆ ಸಹಾ ಸ್ಮಿತ್ ಹಾಗೂ ಲಬುಶೇನ್‌ ಜೋಡಿ 100 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಲಬುಶೇನ್‌ನ್‌ 196 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 91 ರನ್‌ ಗಳಿಸಿದ್ದಾಗ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ರಹಾನೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಸಿಡ್ನಿ ಟೆಸ್ಟ್: ಮಳೆ ನಡುವೆ ಮಿಂಚಿದ ಆಸೀಸ್‌ ಬ್ಯಾಟ್ಸ್‌ಮನ್‌ಗಳು

ದಿಢೀರ್ ವಿಕೆಟ್‌ ಒಪ್ಪಿಸಿದ ವೇಡ್‌: ಆಸೀಸ್‌ನ ಮತ್ತೋರ್ವ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಕೇವಲ 16 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 13 ರನ್‌ ಗಳಿಸಿ ಜಡೇಜಾಗೆ ಎರಡನೇ ಬಲಿಯಾದರೆ, ಕ್ಯಾಮರೋನ್ 21 ಎಸೆತಗಳನ್ನು ಎದುರಿಸಿ ಬುಮ್ರಾ ಬೌಲಿಂಗ್‌ನಲ್ಲಿ ಖಾತೆ ತೆರೆಯದೇ ಪೆವಿಲಿಯನ್ ಸೇರಿದ್ದಾರೆ.

ಇನ್ನು ಮೊದಲೆರಡು ಟೆಸ್ಟ್‌ ಪಂದ್ಯಗಳಲ್ಲಿ ರನ್‌ ಗಳಿಸಲು ಪರದಾಡಿದ್ದ ಸ್ಟೀವ್ ಸ್ಮಿತ್ ಸಾಕಷ್ಟು ಎಚ್ಚರಿಕೆ ಆಟಕ್ಕೆ ಮೊರೆ ಹೋಗಿದ್ದು, 159 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 76 ರನ್‌ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.