ಮುಂಬೈ(ಏ.23): ಡೇವಿಡ್ ವಾರ್ನರ್‌ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಅತಿದೊಡ್ಡ ಶಾಕ್ ಎದುರಾಗಿದ್ದು, ಮೊಣಕಾಲು ಗಾಯದ ಸಮಸ್ಯೆಯಿಂದಾಗಿ ತಂಡದ ಯಾರ್ಕರ್‌ ಸ್ಪೆಷಲಿಸ್ಟ್ ಟಿ ನಟರಾಜನ್‌ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಮಿಂಚಿನ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದ ನಟರಾಜನ್‌, ಆಸ್ಟ್ರೇಲಿಯಾ ಪ್ರವಾಸದಲ್ಲಿ 3 ಮಾದರಿಯ ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದ್ದರು. ಅಸ್ಟ್ರೇಲಿಯಾ ಪ್ರವಾಸದ ವೇಳೆಯೇ ಎಡಗೈ ವೇಗಿಗೆ ಮೊಣಕಾಲು ನೋವು ಕಾಣಿಸಿಕೊಂಡಿತ್ತು. ಇದೀಗ ಮತ್ತದೇ ಸಮಸ್ಯೆ ಉಲ್ಬಣವಾಗಿದೆ. ಗಾಯದ ಸಮಸ್ಯೆಯಿಂದಾಗಿ ತವರಿನಲ್ಲಿ ಇಂಗ್ಲೆಂಡ್‌ ವಿರುದ್ದ ಸರಣಿಯಲ್ಲಿ ಒಂದು ಏಕದಿನ ಹಾಗೂ ಒಂದು ಟಿ20 ಪಂದ್ಯವನ್ನಷ್ಟೇ ಆಡಿದ್ದರು.

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಟಿ. ನಟರಾಜನ್‌ ಕೆಕೆಆರ್ ಹಾಗೂ ಆರ್‌ಸಿಬಿ ವಿರುದ್ದ ಮಾತ್ರ ಕಣಕ್ಕಿಳಿದಿದ್ದರು. ಉಳಿದೆರಡು ಪಂದ್ಯಗಳಲ್ಲಿ ನಟರಾಜನ್ ಬದಲಿಗೆ ಖಲೀಲ್‌ ಅಹಮ್ಮದ್‌ ಸನ್‌ರೈಸರ್ಸ್‌ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಟಿ. ನಟರಾಜನ್‌ಗೆ ಪರ್ಯಾಯ ಆಟಗಾರನ ಹುಡುಕಾಟದಲ್ಲಿದೆ ಹೈದರಾಬಾದ್‌ ಮೂಲದ ಫ್ರಾಂಚೈಸಿ.

ಐಪಿಎಲ್ 2021: ಕೊನೆಗೂ ಗೆಲುವಿನ ಖಾತೆ ತೆರೆದ ಸನ್‌ರೈಸರ್ಸ್

ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಪಂಜಾಬ್‌ ಕಿಂಗ್ಸ್ ವಿರುದ್ದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ.