ಸನ್‌ರೈಸರ್ಸ್ ಹೈದರಾಬಾದ್ ತಂಡವು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಪಂಜಾಬ್ ಕಿಂಗ್ಸ್ ಎದುರು ಸನ್‌ರೈಸರ್ಸ್ 9 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೊಡಿ.
ಚೆನ್ನೈ(ಏ.21): ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ಕೊನೆಗೂ ಸಂಘಟಿತ ಪ್ರದರ್ಶನ ತೋರುವ ಮೂಲಕ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲು ಗೆಲುವು ದಾಖಲಿಸಿದೆ. ಪಂಜಾಬ್ ಕಿಂಗ್ಸ್ ಎದುರು ವಾರ್ನರ್ ಪಡೆ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಈ ಸೋಲಿನ ಮೂಲಕ ಪಂಜಾಬ್ ಕಿಂಗ್ಸ್ ಹ್ಯಾಟ್ರಿಕ್ ಸೋಲು ಕಂಡಂತೆ ಆಗಿದೆ.
ಹೌದು, ಪಂಜಾಬ್ ಕಿಂಗ್ಸ್ ನೀಡಿದ್ದ 120 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ಉತ್ತಮ ಆರಂಭವನ್ನೇ ಪಡೆಯಿತು. ನಾಯಕ ಡೇವಿಡ್ ವಾರ್ನರ್-ಜಾನಿ ಬೇರ್‌ಸ್ಟೋವ್ ಮೊದಲ ವಿಕೆಟ್‌ಗೆ 10.1 ಓವರ್‌ಗಳಲ್ಲಿ 73 ರನ್‌ಗಳ ಜತೆಯಾಟವಾಡುವ ಮೂಲಕ ಆರೆಂಜ್ ಆರ್ಮಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ವಾರ್ನರ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಫ್ಯಾಬಿಯನ್ ಅಲನ್‌ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜಾನಿ ಬೇರ್‌ಸ್ಟೋವ್ ಹಾಗೂ ಕೇನ್ ವಿಲಿಯಮ್ಸನ್ ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿದರು. ಜಾನಿ ಬೇರ್‌ಸ್ಟೋವ್ 56 ಎಸೆತಗಳನ್ನು ಎದುರಿಸಿ ಅಜೇಯ 63 ರನ್ ಬಾರಿಸಿದರೆ, ಕೇನ್ ವಿಲಿಯಮ್ಸನ್ 16 ರನ್ ಬಾರಿಸಿ ಅಜೇಯರಾಗುಳಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ರಾಹುಲ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೆ, ಪೂರನ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಹಾದಿ ಹಿಡಿದರು. ಮಯಾಂಕ್ ಅಗರ್‌ವಾಲ್ ಹಾಗೂ ಶಾರುಕ್ ಖಾನ್ ತಲಾ 22 ರನ್ ಬಾರಿಸಿದ್ದೇ ಪಂಜಾಬ್ ಪರ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿತು.
ಸನ್‌ರೈಸರ್ಸ್ ಹೈದರಾಬಾದ್ ಪರ ಖಲೀಲ್ ಅಹಮ್ಮದ್ 3 ವಿಕೆಟ್ ಪಡೆದರೆ, ಅಭಿಷೇಕ್ ಶರ್ಮಾ 2 ಹಾಗೂ ರಶೀದ್ ಖಾನ್, ಸಿದ್ಧಾರ್ಥ್ ಕೌಲ್ ಹಾಗೂ ಭುವನೇಶ್ವರ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು.
