Asianet Suvarna News Asianet Suvarna News
breaking news image

ರಾಜಸ್ಥಾನ ರಾಯಲ್ಸ್ ಹೊರದಬ್ಬಿ ಸನ್‌ರೈಸರ್ಸ್‌ ಹೈದರಾಬಾದ್‌ ಫೈನಲ್‌ಗೆ

ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್, ರಾಜಸ್ಥಾನದ ಮೊನಚು ದಾಳಿಗೆ ತತ್ತರಿಸಿ ಕಲೆಹಾಕಿದ್ದು 9 ವಿಕೆಟ್‌ಗೆ 175 ರನ್. ಈ ಐಪಿಎಲ್‌ನಲ್ಲಿ 200+ ಮೊತ್ತವೇ ಸುರಕ್ಷಿತ ಅಲ್ಲದಿರುವಾಗ ಸನ್‌ರೈಸರ್ಸ್‌ನ ಸ್ಕೋರ್ ರಾಜಸ್ಥಾನಕ್ಕೆ ಸುಲಭ ತುತ್ತಾಗಬಹುದು ಎಂದೇ ಭಾವಿಸಲಾಗಿತ್ತು. ಆದರೆ ಚೆನ್ನೈನ ಸ್ಪಿನ್ ಪಿಚ್ ನಲ್ಲಿ ಸನ್‌ರೈಸರ್ಸ್‌ ತನ್ನ ಸ್ಪಿನ್ ಅಸ್ತ್ರವನ್ನು ಸಮರ್ಥವಾಗಿ ಬಳಸಿಕೊಂಡಿತು.

Sunrisers Hyderabad beat Rajasthan Royals and enters IPL 2024 Final kvn
Author
First Published May 25, 2024, 6:53 AM IST

ಚೆನ್ನೈ: ಮಾಜಿ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್ ವಿರುದ್ಧ 36 ರನ್ ಜಯಭೇರಿ ಬಾರಿಸಿದ ಸನ್‌ರೈಸರ್ಸ್ ಹೈದರಾಬಾದ್ 17ನೇ ಆವೃತ್ತಿ ಐಪಿಎಲ್‌ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಟೂರ್ನಿಯುದ್ದಕ್ಕೂ ಆಕ್ರಮಣಕಾರಿ ಬ್ಯಾಟಿಂಗ್‌ನೊಂದಿಗೆ ಎದುರಾಳಿಗಳ ನಿದ್ದೆಗೆಡಿಸಿದ್ದ ಸನ್‌ರೈಸರ್ಸ್, ಶುಕ್ರವಾರ ಕರಾರುವಕ್ ಬೌಲಿಂಗ್ ಮೂಲಕ ರಾಜಸ್ಥಾನವನ್ನು ಟೂರ್ನಿಯಿಂದ ಹೊರಗಟ್ಟಿತು. ಇದರೊಂದಿಗೆ ಸನ್‌ರೈಸರ್ಸ್ 3ನೇ ಬಾರಿ ಫೈನಲ್‌ಗೇರಿದರೆ, ರಾಜಸ್ಥಾನದ 3ನೇ ಬಾರಿ ಫೈನಲ್‌ಗೇರುವ ಕನಸು ಭಗ್ನಗೊಂಡಿತು.

ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್, ರಾಜಸ್ಥಾನದ ಮೊನಚು ದಾಳಿಗೆ ತತ್ತರಿಸಿ ಕಲೆಹಾಕಿದ್ದು 9 ವಿಕೆಟ್‌ಗೆ 175 ರನ್. ಈ ಐಪಿಎಲ್‌ನಲ್ಲಿ 200+ ಮೊತ್ತವೇ ಸುರಕ್ಷಿತ ಅಲ್ಲದಿರುವಾಗ ಸನ್‌ರೈಸರ್ಸ್‌ನ ಸ್ಕೋರ್ ರಾಜಸ್ಥಾನಕ್ಕೆ ಸುಲಭ ತುತ್ತಾಗಬಹುದು ಎಂದೇ ಭಾವಿಸಲಾಗಿತ್ತು. ಆದರೆ ಚೆನ್ನೈನ ಸ್ಪಿನ್ ಪಿಚ್ ನಲ್ಲಿ ಸನ್‌ರೈಸರ್ಸ್‌ ತನ್ನ ಸ್ಪಿನ್ ಅಸ್ತ್ರವನ್ನು ಸಮರ್ಥವಾಗಿ ಬಳಸಿಕೊಂಡಿತು. ಮಧ್ಯಮ ಓವರ್‌ಗಳಲ್ಲಿ ರನ್‌ ಗಳಿಸಲು ಪೇಚಾಡಿದ ರಾಜಸ್ಥಾನ 7 ವಿಕೆಟ್‌ಗೆ 139 ರನ್ ಗಳಿಸಿ ಸೋಲೊಪ್ಪಿಕೊಂಡಿತು.

IPL 2024 ಕ್ಲಾಸೆನ್ ಕ್ಲಾಸಿಕ್ ಫಿಫ್ಟಿ; ರಾಜಸ್ಥಾನಕ್ಕೆ ಸವಾಲಿನ ಗುರಿ ನೀಡಿದ ಆರೆಂಜ್ ಆರ್ಮಿ

ಬಟ್ಲರ್ ಅನುಪಸ್ಥಿತಿ ರಾಜಸ್ಥಾನಕ್ಕೆ ಮತ್ತೊಮ್ಮೆ ಬಲವಾಗಿ ಕಾಡಿತು. ಕೊಹ್ಲರ್ ಕ್ಯಾಡ್‌ಮೊರ್ 10 ರನ್ ಗಳಿಸಲು 16 ಎಸೆತಗಳನ್ನು ತೆಗೆದುಕೊಂಡರು. ಆದರೆ ಜೈಸ್ವಾಲ್ (21 ಎಸೆತಗಳಲ್ಲಿ 42) ಅಬ್ಬರ ತಂಡವನ್ನು ಕಾಪಾಡಿತು. ಆದರೆ ಪವರ್-ಪ್ಲೇ ಬಳಿಕ ಸ್ಪಿನ್ನರ್ ಗಳನ್ನು ಆಡಿಸಿದ ಸನ್, ಪಂದ್ಯದ ದಿಕ್ಕನ್ನೇ ಬದಲಿಸಿ ಬಿಟ್ಟಿತು. 7 ಓವರಲ್ಲಿ 1 ವಿಕೆಟ್‌ಗೆ 56 ರನ್ ಗಳಿಸಿದ್ದ ರಾಜಸ್ಥಾನ, ಮುಂದಿನ 7 ಓವರಲ್ಲಿ 5 ವಿಕೆಟ್ ಕಳೆದು ಕೊಂಡು ಕೇವಲ 37 ರನ್ ಸೇರಿಸಿತು. ಶಾಬಾಜ್ - ಅಭಿಷೇಕ್ ಸ್ಪಿನ್ ಮೋಡಿ ಮುಂದೆ ರಾಜಸ್ಥಾನ ತಿಣು ಕಾಡಿತು. ಕೊನೆಯಲ್ಲಿ ಧ್ರುವ್ ಜುರೆಲ್ 35 ಎಸೆತಗಳಲ್ಲಿ 56 ರನ್ ಸಿಡಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಶಾಬಾಜ್ 4 ಓವರಲ್ಲಿ 23 ರನ್‌ಗೆ 3, ಅಭಿಷೇಕ್ 4 ಓವರಲ್ಲಿ 24 ರನ್‌ಗೆ 3 ವಿಕೆಟ್ ಕಿತ್ತು ಗೆಲುವಿನ ರೂವಾರಿಗಳು ಎನಿಸಿಕೊಂಡರು.

ಕ್ಲಾಸೆನ್ ಆಸರೆ: ಟ್ರೆಂಟ್ ಬೌಲ್ಟ್ ಆರಂಭಿಕ ಸ್ಪೆಲ್ ನಲ್ಲಿ ಸಂಘಟಿಸಿದ ದಾಳಿ ಸನ್‌ರೈಸರ್ಸ್‌ಗೆ ಮಾರಕವಾಗಿ ಪರಿಣಮಿಸಿತು. ಪವರ್-ಪ್ಲೇನಲ್ಲೇ ಅಭಿಷೇಕ್ (12), ತ್ರಿಪಾಠಿ(15 ಎಸೆತಗಳಲ್ಲಿ 37), ಮಾರ್ಕ್‌ಮ್ (01)ರನ್ನು ಔಟ್ ಮಾಡಿದ ಬೌಲ್ಡ್ ರಾಜಸ್ಥಾನಕ್ಕೆ ಮೇಲುಗೈ ಒದಗಿಸಿದರು. ಆದರೆ ಕ್ಲಾಸೆನ್ (34ಎಸೆತಗಳಲ್ಲಿ50) ತಂಡಕ್ಕೆ ಆಸರೆಯಾದರು. 19ನೇ ಓವರ್‌ವರೆಗೂ ಕ್ರೀಸ್‌ನಲ್ಲಿ ನೆಲೆಯೂರಿದ ಅವರು ತಂಡಕ್ಕೆ ಉತ್ತಮ ಮೊತ್ತ ಗಳಿಸಲು ನೆರವಾದರು. ಬೌಲ್ಡ್, ಆವೇಶ ತಲಾ 3 ವಿಕೆಟ್ ಕಿತ್ತರು. ಭಾರಿ ನಿರೀಕ್ಷೆ ಮೂಡಿಸಿದ ಅಶ್ವಿನ್ (4 ಓವರಲ್ಲಿ 43), ಚಹಲ್ (4 ಓವರಲ್ಲಿ 34) ಒಂದೂ ವಿಕೆಟ್ ಕಬಳಿಸದೆ ನಿರಾಸೆ ಅನುಭವಿಸಿದರು.

ಆರ್‌ಸಿಬಿ ಕಂಡು ಉರಿದುಕೊಳ್ಳುವವರ ನಡುವೆ ಸ್ಮರಿಸಿಕೊಳ್ಳುವಂತ ಸಂದೇಶ ಸಾರಿದ ನಿಕೋಲಸ್ ಪೂರನ್..!

ಕೆಕೆಆರ್ . ಸನ್‌ರೈಸರ್ ನಾಳೆ ಫೈನಲ್ ಫೈಟ್

ಟೂರ್ನಿಯ ಫೈನಲ್ ಪಂದ್ಯ ಭಾನುವಾರ ಚೆನ್ನೈನಲ್ಲಿ ನಡೆಯಲಿದ್ದು, ಕೆಕೆಆರ್ ಹಾಗೂ ಸನ್‌ರೈಸರ್ಸ್‌ ಪ್ರಶಸ್ತಿಗಾಗಿ ಸೆಣಸಾಡಲಿವೆ. 4ನೇ ಬಾರಿ ಫೈನಲ್ ಪ್ರವೇಶಿಸಿರುವ ಕೆಕೆಆ‌ರ್ 3ನೇ ಟ್ರೋಫಿ ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿದೆ. ತಂಡ 2012, 2014ರಲ್ಲಿ ಚಾಂಪಿಯನ್ ಆಗಿದ್ದರೆ, 2021ರಲ್ಲಿ ರನ್ನರ್-ಅಪ್ ಆಗಿತ್ತು. ಇನ್ನ ಸನ್‌ರೈಸರ್ಸ್ 2ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

3ನೇ ಬಾರಿ ಫೈನಲ್‌ಗೆ ಸನ್‌ರೈಸರ್ಸ್ ಲಗ್ಗೆ

2013ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿರುವ ಸನ್‌ರೈಸರ್ಸ್ ಹೈದರಾಬಾದ್ 3ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ತಂಡ 2016ರ ಫೈನಲ್‌ನಲ್ಲಿ ಆರ್‌ಸಿಬಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದರೆ, 2018ರಲ್ಲಿ ರನ್ನ‌ರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

24.75 ಕೋಟಿ  vs 20.50 ಕೋಟಿ

ಐಪಿಎಲ್ ಹರಾಜಿನ ಅತಿ ದುಬಾರಿ ಆಟಗಾರರು ಎನಿಸಿಕೊಂಡಿರುವ ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ಈ ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಸ್ಟಾರ್ಕ್ ಕೆಕೆಆರ್‌ಗೆ 24.75 ಕೋಟಿಗೆ ಹರಾಜಾಗಿದ್ದರೆ, ಕಮಿನ್ಸ್‌ರನ್ನು ಸನ್‌ರೈಸರ್ಸ್ 20.50 ಕೋಟಿ ನೀಡಿ ಖರೀದಿಸಿತ್ತು. ಕೊಟ್ಟ ದುಡ್ಡಿಗೆ ಬೆಲೆ ಕಲ್ಪಿಸಿ ತಮ್ಮ ತಂಡಗಳನ್ನು ಫೈನಲ್‌ಗೇರಿಸಿರುವ ಆಸೀಸ್‌ನ ಇಬ್ಬರು ಆಟಗಾರರು, ಭಾನುವಾರ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡಲು ಪರಸ್ಪರ ಸೆಣಸಲಿದ್ದಾರೆ.

ಫೈನಲ್‌ಗೇರಿದವರಲ್ಲಿ ಒಬ್ಬರೂ ಭಾರತ ವಿಶ್ವಕಪ್ ತಂಡದಲ್ಲಿಲ್ಲ! 

ಐಪಿಎಲ್ ಫೈನಲ್‌ಗೇರಿರುವ ಕೆಕೆಆರ್ ಹಾಗೂ ಸನ್ ರೈಸರ್ಸ್ ತಂಡಗಳಲ್ಲಿ ಭಾರತ ತಂಡವನ್ನು ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಪ್ರತಿನಿಧಿಸುವ ಒಬ್ಬ ಆಟಗಾರನೂ ಇಲ್ಲ. ಹೀಗಾಗಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಶನಿವಾರ ಒಟ್ಟಿಗೇ ಅಮೆರಿಕಕ್ಕೆ ತೆರಳುವ ನಿರೀಕ್ಷೆಯಿದೆ.

ಸ್ಕೋರ್: 
ಸನ್‌ರೈಸರ್ಸ್ 20 ಓವರಲ್ಲಿ 175/9 (ಕ್ಲಾಸೆನ್ 50, ಹೆಡ್ 34, ಆವೇಶ್ 3-27, ಬೌಲ್ಡ್ 3-45)
ರಾಜಸ್ಥಾನ 20 ಓವರಲ್ಲಿ 139/7 (ಧ್ರುವ್ 56, ಜೈಸ್ವಾಲ್ 42, ಶಾಬಾಜ್ 3-23, ಅಭಿಷೇಕ್ 2-24) 
ಪಂದ್ಯಶ್ರೇಷ್ಠ: ಶಾಬಾಜ್ ಅಹ್ಮದ್.
 

Latest Videos
Follow Us:
Download App:
  • android
  • ios