ಇಲ್ಲಿನ ಚೆಪಾಕ್‌ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರಂಭದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಶರ್ಮಾ ಕೇವಲ 5 ಎಸೆತಗಳಲ್ಲಿ 12 ರನ್ ಸಿಡಿಸಿ ಟ್ರೆಂಟ್ ಬೌಲ್ಟ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಚೆನ್ನೈ(ಮೇ.24): ಟ್ರೆಂಟ್ ಬೌಲ್ಟ್, ಆವೇಶ್ ಖಾನ್ ಹಾಗೂ ಸಂದೀಪ್ ಶರ್ಮಾ ಅವರ ಸಂಘಟಿತ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ, ಹೆನ್ರಿಚ್ ಕ್ಲಾಸೆನ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸವಾಲಿನ ಮೊತ್ತ ಕಲೆಹಾಕಿದೆ. ನಿಗದಿತ 20 ಓವರ್‌ನಲ್ಲಿ ಆರೆಂಜ್ ಆರ್ಮಿ 9 ವಿಕೆಟ್ ಕಳೆದುಕೊಂಡು 175 ರನ್ ಬಾರಿಸಿದೆ. ರಾಜಸ್ಥಾನ ರಾಯಲ್ಸ್ ತಂಡವು ಫೈನಲ್‌ಗೇರಬೇಕಿದ್ದರೇ 175ರ ರನ್ ಗಡಿ ದಾಟಬೇಕಿದೆ.

ಇಲ್ಲಿನ ಚೆಪಾಕ್‌ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರಂಭದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಶರ್ಮಾ ಕೇವಲ 5 ಎಸೆತಗಳಲ್ಲಿ 12 ರನ್ ಸಿಡಿಸಿ ಟ್ರೆಂಟ್ ಬೌಲ್ಟ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ಇದಾದ ಬಳಿಕ ಎರಡನೇ ವಿಕೆಟ್‌ಗೆ ಟ್ರ್ಯಾವಿಸ್ ಹೆಡ್ ಹಾಗೂ ರಾಹುಲ್ ತ್ರಿಪಾಠಿ ಕೇವಲ 21 ಎಸೆತಗಳಲ್ಲಿ 42 ರನ್‌ಗಳ ಜತೆಯಾಟವಾಡಿದರು. ಕೇವಲ 15 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 37 ರನ್ ಸಿಡಿಸಿದ ತ್ರಿಪಾಠಿಯನ್ನು ಬಲಿ ಪಡೆಯುವಲ್ಲಿ ಬೌಲ್ಟ್ ಯಶಸ್ವಿಯಾದರು. ಇನ್ನು ಇದೇ ಓವರ್‌ನಲ್ಲಿ ಏಯ್ಡನ್ ಮಾರ್ಕ್‌ರಮ್ ಸಹ ಕೇವಲ ಒಂದು ರನ್ ಗಳಿಸಿ ಚಹಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಮತ್ತೊಂದು ತುದಿಯಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಟ್ರ್ಯಾವಿಸ್ ಹೆಡ್ 34 ರನ್ ಗಳಿಸಿ ಸಂದೀಪ್ ಶರ್ಮಾಗೆ ವಿಕೆಟ್ ಒಪ್ಪಿಸಿದರು.

IPL 2024 Qualifier 2: ಸನ್‌ರೈಸರ್ಸ್‌ ಎದುರು ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ

Scroll to load tweet…

ಕ್ಲಾಸೆನ್ ಕ್ಲಾಸಿಕ್ ಫಿಫ್ಟಿ: ಇನ್ನು ಒಂದು ಹಂತದಲ್ಲಿ 120 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಆಸರೆಯಾದರು. ಆಕರ್ಷಕ ಬ್ಯಾಟಿಂಗ್ ನಡೆಸಿದ ಕ್ಲಾಸೆನ್ ಕೇವಲ 34 ಎಸೆತಗಳನ್ನು ಎದುರಿಸಿ 50 ರನ್ ಬಾರಿಸಿ ಸಂದೀಪ್ ಶರ್ಮಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದು ಕ್ಲಾಸೆನ್ ಈ ಆವೃತ್ತಿಯ ಐಪಿಎಲ್‌ನಲ್ಲಿ 4ನೇ ಅರ್ಧಶತಕ ಎನಿಸಿತು. 

ಇನ್ನು ಕ್ಲಾಸೆನ್‌ಗೆ ಉತ್ತಮ ಸಾಥ್ ನೀಡಿದ ಇಂಪ್ಯಾಕ್ಟ್ ಆಟಗಾರ ಶಾಹಬಾಜ್ ಅಹಮದ್ 18 ಎಸೆತಗಳಲ್ಲಿ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ರಾಜಸ್ಥಾನ ರಾಯಲ್ಸ್ ಪರ ಆವೇಶ್ ಖಾನ್ ಕೇವಲ 27 ರನ್ ನೀಡಿ 3 ವಿಕೆಟ್ ಪಡೆದರೆ, ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಪವರ್‌ಪ್ಲೇನಲ್ಲೇ 3 ವಿಕೆಟ್ ಕಬಳಿಸಿ ಆರೆಂಜ್‌ ಆರ್ಮಿಗೆ ಬಲವಾದ ಪೆಟ್ಟು ನೀಡಿದರು. ಇನ್ನು ಸಂದೀಪ್ ಶರ್ಮಾ ಎರಡು ವಿಕೆಟ್ ತಮ್ಮ ಜೋಳಿಗೆಗೆ ಹಾಕಿಕೊಂಡರು.