* ಅಟಗಾರರ ದಿಢೀರ್ ನಿವೃತ್ತಿಯಿಂದ ಕಂಗೆಟ್ಟಿರುವ ಲಂಕಾ ಕ್ರಿಕೆಟ್ ಮಂಡಳಿ* ಆಟಗಾರರ ನಿವೃತ್ತಿಗೆ ಹೊಸ ನಿಯಮಾವಳಿಗಳನ್ನು ರೂಪಿಸಿದ ಶ್ರೀಲಂಕಾ ಕ್ರಿಕೆಟ್* ಕಳೆದೆರಡು ವಾರದೊಳಗೆ ಧನುಷ್ಕಾ ಗುಣತಿಲಕ, ಭನುಕ ರಾಜಪಕ್ಸ ನಿವೃತ್ತಿ ಘೋಷಿಸಿದ್ದರು.
ಕೊಲಂಬೊ(ಜ.10): ಕ್ರಿಕೆಟಿಗರ ದಿಢೀರ್ ನಿವೃತ್ತಿಯಿಂದ ಕಂಗೆಟ್ಟಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ (Sri Lanka Cricket) (ಎಸ್‌ಎಲ್‌ಸಿ), ನಿವೃತ್ತಿಯಾಗುವ ಆಟಗಾರರಿಗೆ ಹೊಸ ನಿಯಮ ರೂಪಿಸಿದೆ. ಇನ್ನು ಮುಂದೆ ಯಾವುದೇ ಆಟಗಾರರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ (International Retirement) ಘೋಷಿಸುವುದಾದರೆ 3 ತಿಂಗಳು ಮುಂಚಿತವಾಗಿ ಮಾಹಿತಿ ನೀಡುವಂತೆ ಸೂಚನೆ ನೀಡಿದೆ. 2 ವಾರದಲ್ಲಿ ಪ್ರಮುಖ ಆಟಗಾರರಾದ ಧನುಷ್ಕಾ ಗುಣತಿಲಕ(Danushka Gunathilaka), ಭನುಕ ರಾಜಪಕ್ಸ (Bhanuka Rajapaksa) ನಿವೃತ್ತಿ ಹೇಳಿದ್ದರಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ನಿರ್ಧಾರ ಕೈಗೊಂಡಿದೆ.
ಅಲ್ಲದೇ, ನಿವೃತ್ತಿಯ ಆರು ತಿಂಗಳ ಬಳಿಕವಷ್ಟೇ ವಿದೇಶಗಳಲ್ಲಿ ಫ್ರಾಂಚೈಸಿ ಲೀಗ್‌ಗಳನ್ನು ಆಡಲು ಅನುಮತಿ ನೀಡುವುದಾಗಿ ಮಾಹಿತಿ ನೀಡಿದೆ. ಇದರ ಜೊತೆಗೆ ಶೇ.80ರಷ್ಟು ದೇಸಿ ಪಂದ್ಯಗಳಲ್ಲಿ ಆಡಿದ್ದರೆ ಮಾತ್ರ ಲಂಕಾ ಪ್ರೀಮಿಯರ್ ಲೀಗ್ (Lanka Premier League) ಟಿ20 ಟೂರ್ನಿಗೆ ಆಡಲು ಅರ್ಹತೆ ಸಿಗಲಿದೆ ಎಂಬ ಷರತ್ತು ವಿಧಿಸಿದೆ.
ಶ್ರೀಲಂಕಾದ ಆರಂಭಿಕ ಬ್ಯಾಟರ್ ದನುಷ್ಕ ಗುಣತಿಲಕ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 30 ವರ್ಷದ ಅವರು ಏಕದಿನ ಹಾಗೂ ಟಿ20 ಮಾದರಿಯತ್ತ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಕಳೆದ ವರ್ಷ ಬಯೋಬಬಲ್ (Bio-Bubble) ನಿಯಮ ಉಲ್ಲಂಘಿಸಿದ್ದಕ್ಕೆ ಗುಣತಿಲಕ ಸೇರಿ ಮೂವರು ಆಟಗಾರರನ್ನು ಲಂಕಾ ಕ್ರಿಕೆಟ್ ಮಂಡಳಿ ಒಂದು ವರ್ಷ ನಿಷೇಧಕ್ಕೊಳಪಡಿಸಿತ್ತು. 2018ರ ಬಳಿಕ ಟೆಸ್ಟ್ ಕ್ರಿಕೆಟ್ ಆಡದ ಗುಣತಿಲಕ, ಒಟ್ಟು 8 ಪಂದ್ಯಗಳಲ್ಲಿ 299 ರನ್ ಕಲೆಹಾಕಿದ್ದಾರೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಆಡುವುದಿಲ್ಲ: ಸಚಿನ್ ತೆಂಡುಲ್ಕರ್
ನವದೆಹಲಿ: ಜನವರಿ 20ರಿಂದ ಆರಂಭಗೊಳ್ಳಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ (Legends League Cricket) (ಎಲ್‌ಎಲ್‌ಸಿ) ಟೂರ್ನಿಯಲ್ಲಿ ತಾವು ಆಡುವುದಿಲ್ಲ ಎಂದು ದಿಗ್ಗಜ ಬ್ಯಾಟರ್ ಸಚಿನ್ ತೆಂಡುಲ್ಕರ್ (Sachin Tendulkar) ಸ್ಪಷ್ಟಪಡಿಸಿದ್ದಾರೆ. ನಿವೃತ್ತಿ ಹೊಂದಿರುವ ಕ್ರಿಕೆಟಿಗರು ಸೇರಿ ಆಡುವ ಲೀಗ್‌ಗೆ ಇತ್ತೀಚೆಗಷ್ಟೇ ಭಾರತ ತಂಡ ಪ್ರಕಟಗೊಂಡಿತ್ತು.
Ind vs SA, Cape Town Test: ಕೇಪ್‌ಟೌನ್ ಚಾಲೆಂಜ್‌ಗೆ ಟೀಂ ಇಂಡಿಯಾ ಕಠಿಣ ಅಭ್ಯಾಸ..!
ಟೂರ್ನಿಯ ಪ್ರೊಮೋದಲ್ಲಿ ಸಚಿನ್ ಸಹ ಆಡಲಿದ್ದಾರೆ ಎಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಹೇಳಿದ್ದರು. ಇದೀಗ ಸಚಿನ್ ತಾವು ಆಡುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ಕಾರಣ, ತಪ್ಪು ಮಾಹಿತಿ ನೀಡಿದ್ದಕ್ಕೆ ಬಚ್ಚನ್ ಕ್ಷಮೆ ಕೋರಿದ್ದಾರೆ. ಭಾರತ ತಂಡದಲ್ಲಿ ಸೆಹ್ವಾಗ್, ಯುವಿ, ಹರ್ಭಜನ್ ಸೇರಿ ಹಲವು ತಾರಾ ಕ್ರಿಕೆಟಿಗರು ಆಡಲಿದ್ದಾರೆ. ಟೂರ್ನಿಯಲ್ಲಿ ಇಂಡಿಯಾ ಮಹಾರಾಜಾಸ್, ಏಷ್ಯನ್ ಲಯನ್ಸ್, ವರ್ಲ್ಡ್ ಜೈಂಟ್ಸ್ ಎನ್ನುವ 3 ತಂಡಗಳು ಸ್ಪರ್ಧಿಸಲಿದ್ದು, ಒಮಾನ್‌ನ ಮಸ್ಕಟ್‌ನಲ್ಲಿ ಪಂದ್ಯಗಳು ನಡೆಯಲಿವೆ.
ಐಸಿಸಿ ತಿಂಗಳ ಕ್ರಿಕೆಟಿಗ ರೇಸಲ್ಲಿ ಮಯಾಂಕ್ ಅಗರ್‌ವಾಲ್
ದುಬೈ: ಐಸಿಸಿ ತಿಂಗಳ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್‌ವಾಲ್ (Mayank Agarwal) ಇದ್ದಾರೆ. ಐಸಿಸಿ ಡಿಸೆಂಬರ್ ತಿಂಗಳ ನಾಮನಿರ್ದೇಶನಗಳನ್ನು ಪ್ರಕಟಿಸಿದ್ದು, ಆಸ್ಪ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ನ್ಯೂಜಿಲೆಂಡ್‌ನ ಸ್ಪಿನ್ನರ್ ಅಜಾಜ್ ಪಟೇಲ್ (Ajaz Patel) ಸಹ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಯಾಂಕ್ 2 ಪಂದ್ಯಗಳಲ್ಲಿ 276 ರನ್ ಕಲೆಹಾಕಿದ್ದರು. ಅಜಾಜ್ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಸಾಧನೆ ಮಾಡಿದರೆ, ಸ್ಟಾರ್ಕ್ 3 ಟೆಸ್ಟ್‌ನಲ್ಲಿ 14 ವಿಕೆಟ್ ಕಬಳಿಸಿದ್ದರು.
