ಇಂಗ್ಲೆಂಡ್‌ ವಿರುದ್ದದ ಟಿ20 ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ಗಾಯದ ಸಮಸ್ಯೆ ಬಿಟ್ಟೂ ಬಿಡದಂತೆ ಕಾಡಲಾರಂಭಿಸಿದೆ. ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ವರುಣ್ ಚಕ್ರವರ್ತಿ ಮತ್ತೊಮ್ಮೆ ಫಿಟ್ನೆಸ್‌ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಾರೆ, ಇನ್ನು ನಟರಾಜನ್‌ ಕೂಡಾ ಟೂರ್ನಿಯಲ್ಲಿ ಆಡೋದು ಅನುಮಾನ ಎನ್ನಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹಮದಾಬಾದ್‌(ಮಾ.11): ಲೆಗ್‌ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಮತ್ತೊಮ್ಮೆ ಫಿಟ್ನೆಸ್‌ ಪರೀಕ್ಷೆಯಲ್ಲಿ ಫೇಲಾಗಿದ್ದು, ಭಾರತ ಟಿ20 ತಂಡದಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ. 

2 ಕಿ.ಮೀ. ಓಟದ ಪರೀಕ್ಷೆಯಲ್ಲಿ ವರುಣ್‌ ಮೊದಲ ಯತ್ನದಲ್ಲಿ ಅನುತ್ತೀರ್ಣರಾಗಿದ್ದರು. ಅವರಿಗೆ ಮತ್ತೊಂದು ಅವಕಾಶ ನೀಡಲಾಗಿತ್ತು. 2ನೇ ಅವಕಾಶದಲ್ಲೂ ಪಾಸಾಗಲು ಸಾಧ್ಯವಾಗಲಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಲ್ಲದೇ ಯೋ-ಯೋ ಫಿಟ್ನೆಸ್‌ ಪರೀಕ್ಷೆಯಲ್ಲೂ ವರುಣ್‌ ನಿಗದಿತ ಸ್ಕೋರ್‌ ಗಳಿಸುವಲ್ಲಿ ವಿಫಲರಾದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನು ಆಲ್ರೌಂಡರ್‌ ರಾಹುಲ್‌ ತೆವಾಟಿಯಾ ಸಹ ಫಿಟ್ನೆಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಟಿ20 ಸರಣಿಗಾಗಿ ಭಾರತಕ್ಕೆ ತಂಡದ ಆಯ್ಕೆಯೇ ಸವಾಲು..!

ಇದೇ ವೇಳೆ ವೇಗಿ ಟಿ.ನಟರಾಜನ್‌ ಮಂಡಿ ಗಾಯಕ್ಕೆ ತುತ್ತಾಗಿದ್ದು, ಬೆಂಗಳೂರಿನ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಅವರು ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಆಡುವುದು ಅನುಮಾನವೆನಿಸಿದೆ. 

Scroll to load tweet…

13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ವರುಣ್‌ ಚಕ್ರವರ್ತಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಆದರೆ ಫಿಟ್ನೆಸ್ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು, ಇದೀಗ ಮತ್ತದೇ ಕಾರಣಕ್ಕಾಗಿ ತಂಡದಿಂದ ಬಹುತೇಕ ಹೊರಬಿದ್ದಿದ್ದು, ಕ್ರಿಕ್‌ಬಜ್‌ ವರದಿಯಂತೆ ವರುಣ್‌ ಚಕ್ರವರ್ತಿ ಬದಲಿಗೆ ಮುಂಬೈ ಇಂಡಿಯನ್ಸ್‌ ಸ್ಟಾರ್ ಸ್ಪಿನ್ನರ್ ರಾಹುಲ್‌ ಚಹಾರ್‌ಗೆ ಬಿಸಿಸಿಐ ಬುಲಾವ್ ನೀಡಲಿದೆ ಎಂದು ವರದಿಯಾಗಿದೆ.