ನವದೆಹಲಿ(ಫೆ.27): ಮೊಟೇರಾದಂತಹ ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಆಡುವಾಗ ಬ್ಯಾಟ್ಸ್‌ಮನ್‌ಗಳು ಸ್ಪೈಕ್‌ (ಸಣ್ಣ ಗಾತ್ರದ ಮೊಳೆ) ಶೂಗಳನ್ನು ಧರಿಸಿ ಆಡಿದರೆ ಫುಟ್‌ವರ್ಕ್‌ಗೆ ಸಮಸ್ಯೆಯಾಗಲಿದೆ, ಹೀಗಾಗಿ ರಬ್ಬರ್‌ ತಳವಿರುವ ಶೂಗಳನ್ನು ಧರಿಸಿ ಆಡಬೇಕು ಭಾರತದ ಮಾಜಿ ನಾಯಕ ಮೊಹಮದ್‌ ಅಜರುದ್ದೀನ್‌ ಸಲಹೆ ನೀಡಿದ್ದಾರೆ. 

‘ಸುನಿಲ್‌ ಗವಾಸ್ಕರ್‌, ಮೋಹಿಂದರ್‌ ಅಮರ್‌ನಾಥ್‌, ದಿಲೀಪ್‌ ವೆಂಗ್‌ಸರ್ಕಾರ್‌, ಆಲನ್‌ ಬಾರ್ಡರ್‌, ಕ್ಲೈವ್‌ ಲಾಯ್ಡ್‌ರಂತಹ ದಿಗ್ಗಜ ಬ್ಯಾಟ್ಸ್‌ಮನ್‌ಗಳು ರಬ್ಬರ್‌ ತಳದ ಶೂಗಳನ್ನೇ ಧರಿಸಿ ಆಡುತ್ತಿದ್ದರು. ಸ್ಪೈಕ್ಸ್‌ ಇಲ್ಲದೆ ಆಡಿದರೆ ವಿಕೆಟ್‌ ಮಧ್ಯೆ ಓಡುವಾಗ ಜಾರಬಹುದು ಎನ್ನುವುದು ಹಲವರ ವಾದ. ಆದರೆ ವಿಂಬಲ್ಡನ್‌ ಟೆನಿಸ್‌ ಗ್ರ್ಯಾನ್‌ಸ್ಲಾಂನಲ್ಲಿ ಎಲ್ಲರೂ ರಬ್ಬರ್‌ ತಳ ಹೊಂದಿರುವ ಶೂಗಳನ್ನೇ ಧರಿಸಿ ಆಡುತ್ತಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಅಜರ್‌ ಟ್ವೀಟ್‌ ಮಾಡಿದ್ದಾರೆ.

ಬ್ರಿಟನ್‌ನ ಮಾಧ್ಯಮಗಳಿಂದ ರೂಟ್‌ ಪಡೆಗೆ ಹಿಗ್ಗಾಮುಗ್ಗಾ ಟೀಕೆ..!

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯವನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಕೇವಲ ಎರಡೇ ದಿನದಲ್ಲಿ ಇಂಗ್ಲೆಂಡ್‌ ವಿರುದ್ದ 10 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-1 ಅಂತರದ ಮುನ್ನಡೆ ಸಾಧಿಸಿದೆ. ಇನ್ನು ಕೊನೆಯ ಟೆಸ್ಟ್ ಪಂದ್ಯ ಮಾರ್ಚ್‌ 04ರಿಂದ ಇದೇ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ.