ಲಂಡನ್(ಫೆ.27)‌: ಒಂದೂ ಮುಕ್ಕಾಲು ದಿನದ ಟೆಸ್ಟ್‌ಗೆ ಸಾಕ್ಷಿಯಾದ ಅಹಮದಾಬಾದ್‌ ಪಿಚ್‌ ಬಗ್ಗೆ ಪರ-ವಿರೋಧ ಚರ್ಚೆ ಜೋರಾಗಿ ನಡೆಯುತ್ತಿದೆ. ಇದೇ ವೇಳೆ ಜೋ ರೂಟ್‌ ನೇತೃತ್ವದ ಇಂಗ್ಲೆಂಡ್‌ ತಂಡವನ್ನು ಬ್ರಿಟನ್‌ನ ಪ್ರಮುಖ ಮಾಧ್ಯಮಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿವೆ. 

‘ದಿ ಗಾರ್ಡಿಯನ್‌’ ಪತ್ರಿಕೆ ಚೆನ್ನೈ ಸೋಲಿನ ಹ್ಯಾಂಗ್‌ ಓವರ್‌ನಿಂದ ಇಂಗ್ಲೆಂಡ್‌ ತಂಡ ಹೊರಬಂದಿಲ್ಲ ಎಂದು ಟೀಕಿಸಿದರೆ, ‘ದಿ ಸನ್‌’ ಪತ್ರಿಕೆ ತಂಡದ ಸರದಿ ವ್ಯವಸ್ಥೆಯನ್ನು ಕಟುವಾಗಿ ಟೀಕೆ ಮಾಡಿದೆ. ಅಲ್ಲದೆ ತಂಡವನ್ನು ಅಸಮರ್ಥ ಎಂದು ಕರೆದಿದೆ. ತಂಡ ಒಬ್ಬ ಸ್ಪಿನ್ನರ್‌ ಹಾಗೂ ನಾಲ್ವರು 11ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಣಕ್ಕಿಳಿಸಿತ್ತು ಎಂದು ವ್ಯಂಗ್ಯವಾಡಿದೆ. ಪ್ರತಿಷ್ಠಿತ ‘ವಿಸ್ಡನ್‌’ ಪತ್ರಿಕೆ ಟೆಸ್ಟ್‌ ಇತಿಹಾಸದಲ್ಲೇ ಇಂಗ್ಲೆಂಡ್‌ ತಂಡದಿಂದ ಇಂತಹ ಹೀನಾಯ ಪ್ರದರ್ಶನವನ್ನು ನೋಡಿರಲಿಲ್ಲ ಎಂದಿದೆ.

ಇದೇ ವೇಳೆ ಕೆಲ ಪ್ರಮುಖ ಮಾಧ್ಯಮಗಳು ಮೊಟೇರಾ ಪಿಚ್‌ ಅನ್ನು ಟೀಕಿಸಿವೆ. ‘ದಿ ಮಿರರ್‌’ನಲ್ಲಿ ಕ್ರೀಡಾ ಸ್ಫೂರ್ತಿಯ ಮಿತಿಯನ್ನು ಭಾರತ ಮೀರಿದೆ. ಇದು ಟೆಸ್ಟ್‌ ಕ್ರಿಕೆಟ್‌ ಅಲ್ಲ ಎಂದರೆ, ‘ದಿ ಟೆಲಿಗ್ರಾಫ್‌’ನಲ್ಲಿ ಪಿಚ್‌ ಟೆಸ್ಟ್‌ ಕ್ರಿಕೆಟ್‌ಗೆ ಯೋಗ್ಯವಲ್ಲ. ಮೋದಿ ಕ್ರೀಡಾಂಗಣವನ್ನು ಐಸಿಸಿ ನಿಷೇಧಿಸಬೇಕು ಎಂದು ವರದಿ ಪ್ರಕಟಿಸಲಾಗಿದೆ.

ರಾಗ ಎಳಿಯೋದು ಬಿಡಿ, ಇಂಗ್ಲೆಂಡ್‌ ಕಿವಿ ಹಿಂಡಿದ ಮಾಜಿ ಸ್ಪಿನ್ನರ್ ಗ್ರೇಮ್‌ ಸ್ವಾನ್‌..!

ಇನ್ನು ಗೆಲುವಿನ ಬಳಿಕ ಮಾತನಾಡಿದ್ದ ಭಾರತದ ನಾಯಕ ವಿರಾಟ್‌ ಕೊಹ್ಲಿ, ‘ಪಿಚ್‌ ಉತ್ತಮ ಗುಣಮಟ್ಟದ್ದಾಗಿತ್ತು, ಬ್ಯಾಟ್ಸ್‌ಮನ್‌ ಸರಿಯಾಗಿ ಆಡಲಿಲ್ಲ’ ಎನ್ನುವ ಹೇಳಿಕೆಗೆ ಇಂಗ್ಲೆಂಡ್‌ ಮಾಜಿ ನಾಯಕ ಅಲಿಸ್ಟರ್‌ ಕುಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಎರಡೂ ತಂಡಗಳಲ್ಲಿ ಸ್ಪಿನ್‌ ಬೌಲಿಂಗ್‌ ಅನ್ನು ಉತ್ತಮವಾಗಿ ಎದುರಿಸುವ ಬ್ಯಾಟ್ಸ್‌ಮನ್‌ಗಳಿದ್ದಾರೆ. ಆದರೂ ಎರಡೂ ತಂಡಗಳು ಪರದಾಡಿದವು. ಕೊಹ್ಲಿ ತಾವೇ ಬಿಸಿಸಿಐ ಎನ್ನುವಂತೆ ಮಾತನಾಡಬಾರದು’ ಎಂದು ಕುಕ್‌ ಹೇಳಿದ್ದಾರೆ.