ರಾಗ ಬದಲಿಸಿದ ಸ್ಟೇನ್, ತಪ್ಪಾಯ್ತು ಕ್ಷಮಿಸಿ ಎಂದ ಆರ್‌ಸಿಬಿ ಮಾಜಿ ವೇಗಿ..!
ಐಪಿಎಲ್‌ನಲ್ಲಿ ಹಣಕ್ಕಷ್ಟೇ ಪ್ರಾಮಖ್ಯತೆ ಎನ್ನುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಡೇಲ್ ಸ್ಟೇನ್ ಇದೀಗ ಕ್ಷಮೆಯಾಚಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಮಾ.04): ಐಪಿಎಲ್‌ನಲ್ಲಿ ಹಣಕ್ಕಷ್ಟೇ ಬೆಲೆ, ಕ್ರಿಕೆಟ್‌ಗಿಲ್ಲ. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಶ್ರೇಷ್ಠ ಟೂರ್ನಿ ಎಂದು ಟೀಕೆಗೆ ಗುರಿಯಾಗಿದ್ದ ದ.ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಬುಧವಾರ ಕ್ಷಮೆ ಕೋರಿದ್ದಾರೆ.
‘ಐಪಿಎಲ್ ಬಗ್ಗೆ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನನ್ನ ಹಾಗೂ ಅನೇಕರ ವೃತ್ತಿಬದುಕಿನಲ್ಲಿ ಐಪಿಎಲ್‌ನ ಪಾತ್ರ ಬಹಳ ದೊಡ್ಡದು. ನನ್ನ ಮಾತುಗಳು ಯಾವುದೇ ಲೀಗ್‌ಗಳನ್ನು ಕೀಳಾಗಿ ಕಾಣುವ ಇಲ್ಲವೇ ಅವಮಾನಿಸುವಂಥದ್ದಾಗಿರಲಿಲ್ಲ. ಸಾಮಾಜಿಕ ತಾಣಗಳಲ್ಲಿ ಕೆಲವೊಮ್ಮೆ ಪದಗಳಿಗೆ ವಿಭಿನ್ನ ಅರ್ಥಗಳನ್ನು ಕಲ್ಪಿಸಲಾಗುತ್ತದೆ. ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ’ ಎಂದು ಸ್ಟೇನ್ ಟ್ವೀಟ್ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೇಲ್ ಸ್ಟೇನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಆಡುವುದು ಒಂದು ಅದ್ಭುತ ಅನುಭವ ಎಂದು ಸ್ಟೇನ್ ರಾಗ ಬದಲಿಸಿದ್ದಾರೆ.
ಪಾಕ್ ಪಿಎಸ್‌ಎಲ್ ಬೆಸ್ಟ್, ಐಪಿಎಲ್ ವೇಸ್ಟ್ ಎಂದ ಡೇಲ್ ಸ್ಟೇನ್..!
ನನ್ನನ್ನು ಸೇರಿದಂತೆ ಅನೇಕ ಕ್ರಿಕೆಟಿಗರ ವೃತ್ತಿಬದುಕಿನ ಬೆಳವಣಿಗೆಯಲ್ಲಿ ಐಪಿಎಲ್ ಪಾತ್ರ ಅನನ್ಯ. ನನ್ನ ಉದ್ದೇಶ ಯಾವುದೇ ಕ್ರಿಕೆಟ್ ಲೀಗ್ ಅವಮಾನಿಸುವುದಾಗಿರಲಿಲ್ಲ. ಹೀಗಿದ್ದೂ ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಸ್ಟೇನ್ ಹೇಳಿದ್ದಾರೆ. ಐಪಿಎಲ್‌ನಲ್ಲಿ ಕ್ರಿಕೆಟ್ ಆಟಕ್ಕಿಂತ ಹಣಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ ಎಂಬರ್ಥದ ಹೇಳಿಕೆ ಭಾರತೀಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣಕ್ಕೆ ಕಾರಣವಾಗಿತ್ತು.