ಪಾಕ್ ಪಿಎಸ್‌ಎಲ್ ಬೆಸ್ಟ್, ಐಪಿಎಲ್ ವೇಸ್ಟ್ ಎಂದ ಡೇಲ್ ಸ್ಟೇನ್..!
ಕ್ರಿಕೆಟ್ ವಿಚಾರಕ್ಕೆ ಬಂದರೆ ಐಪಿಎಲ್‌ಗಿಂತ ಪಾಕಿಸ್ತಾನ ಸೂಪರ್ ಲೀಗ್ ಬೆಸ್ಟ್ ಎಂದು ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕರಾಚಿ(ಫೆ.03): ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಅವಕಾಶ ವಂಚಿತರಾಗುತ್ತಿದ್ದಂತೆ, ಐಪಿಎಲ್ ಕುರಿತು ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ತಮ್ಮ ವರಸೆ ಬದಲಿಸಿದ್ದಾರೆ. ಐಪಿಎಲ್‌ನಲ್ಲಿ ಆಡುವುದಕ್ಕಿಂತ ಪಾಕಿಸ್ತಾನ್ ಸೂಪರ್ ಲೀಗ್(ಪಿಎಸ್‌ಎಲ್)ನಲ್ಲಿ ಆಡುವುದೇ ಹೆಚ್ಚು ಲಾಭ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸ್ಟೇನ್ ಈ ಹೇಳಿಕೆ ನೀಡುತ್ತಿದ್ದಂತೆ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದ್ದು, ದಕ್ಷಿಣ ಆಫ್ರಿಕಾ ವೇಗಿ ತನ್ನ ಊಸರವಳ್ಳಿ ಬುದ್ದಿ ತೋರಿಸುತ್ತಿದ್ದಾರೆ. 2 ನಾಲಿಗೆ ಹಾವು, ಹಾವಿಗಿಂತ ಈತ ವಿಷಕಾರಿ ಎಂದು ಕ್ರಿಕೆಟ್ ಪ್ರೇಮಿಗಳು ಸ್ಟೇನ್ ವಿರುದ್ಧ ಗುಡುಗುತ್ತಿದ್ದಾರೆ.
ಕೈ ಬಿಟ್ಟಿದ್ದ ಆರ್‌ಸಿಬಿ: ಸ್ಟೇನ್ ಇದುವರೆಗೂ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಕ್ಕನ್ ಚಾರ್ಜರ್ಸ್ ಹಾಗೂ ಸನ್‌ರೈಸರ್ಸ್ ಹೈದ್ರಾಬಾದ್ ಪರವಾಗಿ ಒಟ್ಟು 95 ಪಂದ್ಯಗಳನ್ನು ಆಡಿದ್ದು, 97 ವಿಕೆಟ್ ಕಬಳಿಸಿದ್ದಾರೆ. ಕಳೆದ ಬಾರಿ 2 ಕೋಟಿ ರು. ಮೂಲಬೆಲೆಯೊಂದಿಗೆ ಆರ್‌ಸಿಬಿ ಪರ ಆಡಿದ್ದ ಡೇಲ್ ಸ್ಟೇನ್ ಅವರನ್ನು, ಈ ಬಾರಿ ಆರ್‌ಸಿಬಿ ಕೈಬಿಟ್ಟಿತ್ತು. ಇದೀಗ ಪಿಎಸ್‌ಎಲ್ ಟೂರ್ನಿಯಲ್ಲಿ ಕ್ವೆಟಾ ಗ್ಲಾಡಿಯೇಟರ್ಸ್ ತಂಡದ ಪರ ಆಡುತ್ತಿದ್ದಾರೆ.
RCB ತಂಡಕ್ಕೆ ಭಾವನಾತ್ಮಕ ವಿದಾಯ ಹೇಳಿದ ಡೇಲ್ ಸ್ಟೇನ್..!
ಐಪಿಎಲ್‌ನಲ್ಲಿ ಹಣವೇ ಎಲ್ಲಾ: ಕರಾಚಿಯಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಡೇಲ್ ಸ್ಟೇನ್, ‘ಐಪಿಎಲ್ ಎಂದಾಕ್ಷಣ ಅಲ್ಲಿ ಮೊದಲು ಚರ್ಚೆಯಾಗುವುದು ಹಣದ ಕುರಿತು. ಯಾವ ಆಟಗಾರನಿಗೆ ಎಷ್ಟು ಸಿಕ್ಕಿದೆ ಎಂಬುದೇ ಅಲ್ಲಿ ಮುಖ್ಯ. ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇರುವ ಕಾರಣ ಅಲ್ಲಿ ಗುಣಮಟ್ಟದ ಕ್ರಿಕೆಟ್ ಮಾಯವಾಗಿದೆ. ಗುಣಮಟ್ಟದ ಕ್ರಿಕೆಟ್ ವಿಚಾರದಲ್ಲಿ ಪಾಕಿಸ್ತಾನ್ ಪ್ರೀಮಿಯರ್ ಲೀಗ್ ಹಾಗೂ ಲಂಕಾ ಪ್ರೀಮಿಯರ್ ಲೀಗ್‌ಗಳು ಐಪಿಎಲ್‌ಗಿಂತಲೂ ಮುಂದಿವೆ. ಹೀಗಾಗಿ ಐಪಿಎಲ್‌ನಿಂದ ದೂರ ಸರಿದು ಈ ಲೀಗ್‌ಗಳಲ್ಲಿ ಆಡಲು ಮುಂದಾಗಿದ್ದೇನೆ’ ಎಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.