Asianet Suvarna News Asianet Suvarna News

ಸ್ಮೃತಿ ಮಂಧನಾ ಸತತ ಎರಡನೇ ಶತಕ; ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಜಯ

ಮೊದಲು ಬ್ಯಾಟ್‌ ಮಾಡಿದ ಭಾರತ, 50 ಓವರಲ್ಲಿ 3 ವಿಕೆಟ್‌ ನಷ್ಟಕ್ಕೆ 325 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. 3ನೇ ವಿಕೆಟ್‌ಗೆ ಸ್ಮೃತಿ ಹಾಗೂ ಹರ್ಮನ್‌ಪ್ರೀತ್‌ ನಡುವೆ 171 ರನ್‌ ಜೊತೆಯಾಟ ಮೂಡಿಬಂತು. ಸ್ಮೃತಿ ಸತತ 2ನೇ ಶತಕ ಸಿಡಿಸಿದರು.

Smriti Mandhana Consecutive Century helps India Women beat South Africa Women by 4 runs kvn
Author
First Published Jun 20, 2024, 9:14 AM IST

ಬೆಂಗಳೂರು: ಸ್ಮೃತಿ ಮಂಧನಾ, ಹರ್ಮನ್‌ಪ್ರೀತ್‌ ಕೌರ್‌ರ ಆಕರ್ಷಕ ಶತಕಗಳು, ಪೂಜಾ ವಸ್ತ್ರಾಕರ್‌ರ ಅಮೋಘ ಕೊನೆಯ ಓವರ್‌ನ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದಿರುವ ಭಾರತ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ.

ಮೊದಲು ಬ್ಯಾಟ್‌ ಮಾಡಿದ ಭಾರತ, 50 ಓವರಲ್ಲಿ 3 ವಿಕೆಟ್‌ ನಷ್ಟಕ್ಕೆ 325 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. 3ನೇ ವಿಕೆಟ್‌ಗೆ ಸ್ಮೃತಿ ಹಾಗೂ ಹರ್ಮನ್‌ಪ್ರೀತ್‌ ನಡುವೆ 171 ರನ್‌ ಜೊತೆಯಾಟ ಮೂಡಿಬಂತು. ಸ್ಮೃತಿ ಸತತ 2ನೇ ಶತಕ ಸಿಡಿಸಿದರು. 120 ಎಸೆತದಲ್ಲಿ 18 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 136 ರನ್‌ ಕಲೆಹಾಕಿದರು. ಸ್ಫೋಟಕ ಆಟವಾಡಿದ ಹರ್ಮನ್‌ಪ್ರೀತ್‌ 88 ಎಸೆತದಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 103 ರನ್‌ ಸಿಡಿಸಿ ಔಟಾಗದೆ ಉಳಿದರು. ರಿಚಾ ಘೋಷ್‌ 13 ಎಸೆತದಲ್ಲಿ 25 ರನ್‌ ಚಚ್ಚಿ, ತಂಡದ ಮೊತ್ತ 300 ರನ್‌ ದಾಟಲು ಕಾರಣರಾದರು.

ದೊಡ್ಡ ಗುರಿ ಬೆನ್ನತ್ತಿದ ದ.ಆಫ್ರಿಕಾ, 15ನೇ ಓವರಲ್ಲಿ 67 ರನ್‌ಗೆ 3 ವಿಕೆಟ್‌ ಕಳೆದುಕೊಂಡಿತ್ತು. ಆದರೆ 4ನೇ ವಿಕೆಟ್‌ಗೆ ನಾಯಕಿ ಲಾರಾ ವೂಲ್ವಾರ್ಟ್‌ ಹಾಗೂ ಮಾರಿಯಾನೆ ಕಾಪ್‌ 184 ರನ್‌ ಸೇರಿಸಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು. ಕಾಪ್‌ 94 ಎಸೆತದಲ್ಲಿ 114 ರನ್‌ ಸಿಡಿಸಿ ಔಟಾದ ಬಳಿಕವೂ ವೂಲ್ವಾರ್ಟ್‌ ಹೋರಾಟ ಮುಂದುವರಿಸಿದರು. ಕೊನೆ 4 ಎಸೆತದಲ್ಲಿ ಗೆಲ್ಲಲು 6 ರನ್‌ ಬೇಕಿದ್ದಾಗ, ಪೂಜಾ ಅದ್ಭುತ ದಾಳಿ ನಡೆಸಿ ದಕ್ಷಿಣ ಆಫ್ರಿಕಾವನ್ನು 321 ರನ್‌ಗೆ ನಿಯಂತ್ರಿಸಿದರು.

ಸ್ಕೋರ್‌: 
ಭಾರತ 50 ಓವರಲ್ಲಿ 325/3 (ಸ್ಮೃತಿ 136, ಕೌರ್‌ 103*, ಎಂಲಾಬ 2-51), 
ದ.ಆಫ್ರಿಕಾ 50 ಓವರಲ್ಲಿ 321/6 (ವೂಲ್ವಾರ್ಟ್‌ 135*, ಕಾಪ್‌ 114, ದೀಪ್ತಿ 2-56)

01ನೇ ಬಾರಿ: ಭಾರತ ತಂಡ ತವರಿನಲ್ಲಿ 300ಕ್ಕಿಂತ ಹೆಚ್ಚು ರನ್‌ ಕಲೆಹಾಕಿದ್ದು ಇದೇ ಮೊದಲು.

01ನೇ ಆಟಗಾರ್ತಿ: ಮಹಿಳಾ ಏಕದಿನದಲ್ಲಿ ಸತತ 2 ಶತಕ ಬಾರಿಸಿದ ಭಾರತದ ಮೊದಲ ಆಟಗಾರ್ತಿ ಸ್ಮೃತಿ.


 

Latest Videos
Follow Us:
Download App:
  • android
  • ios