ನ್ಯೂಜಿಲೆಂಡ್ ಎದುರಿನ ಮೊದಲ ಟಿ20 ಪಂದ್ಯ ಗೆದ್ದುಬೀಗಿದ ಶ್ರೀಲಂಕಾಸೂಪರ್‌ ಓವರ್‌ನಲ್ಲಿ ರೋಚಕ ಜಯ ಸಾಧಿಸಿದ ಪ್ರವಾಸಿ ಲಂಕಾ ಪಡೆಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಲಂಕಾಗೆ 1-0 ಮುನ್ನಡೆ

ಆಕ್ಲೆಂಡ್‌(ಏ.02): ಲಂಕಾ ಎದುರು ತವರಿನಲ್ಲಿ ಏಕದಿನ ಸರಣಿ ಗೆದ್ದು ಬೀಗಿದ್ದ ಆತಿಥೇಯ ನ್ಯೂಜಿಲೆಂಡ್ ತಂಡಕ್ಕೆ, ಇದೀಗ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಆಘಾತಕಾರಿ ಸೋಲು ಎದುರಾಗಿದೆ. ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಸ್ಕೋರ್ ಸಮಬಲಗೊಂಡು, ಕೊನೆಗೆ ಸೂಪರ್‌ ಓವರ್‌ನಲ್ಲಿ ಪ್ರವಾಸಿ ಶ್ರೀಲಂಕಾ ತಂಡವು ಗೆಲುವಿನ ನಗೆ ಬೀರಿದೆ. ಅದ್ಭುತ ಅರ್ಧಶತಕ ಸಿಡಿಸಿದ ಚರಿತ್ ಅಸಲಂಕಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಇನ್ನು ಸೂಪರ್‌ ಓವರ್‌ನಲ್ಲಿ ಮಿಂಚಿನ ಬೌಲಿಂಗ್ ಪ್ರದರ್ಶನ ತೋರಿದ ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ಮಹೀಶ್ ತೀಕ್ಷಣ, ಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೀಲಂಕಾ ತಂಡವು 1-0 ಮುನ್ನಡೆ ಸಾಧಿಸಿದೆ.

ಇಲ್ಲಿನ ಈಡನ್ ಪಾರ್ಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಂಕಾ ನೀಡಿದ್ದ ಸವಾಲಿನ 198 ರನ್‌ ಗುರಿ ಬೆನ್ನತ್ತಿದ ಆತಿಥೇಯ ನ್ಯೂಜಿಲೆಂಡ್ ತಂಡ ಕೂಡಾ 197 ರನ್ ಕಲೆಹಾಕಿತು. ಹೀಗಾಗಿ ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆಹೋಗಲಾಯಿತು. ಅಂದಹಾಗೆ ಇದು ನ್ಯೂಜಿಲೆಂಡ್ ಕ್ರಿಕೆಟ್‌ ತಂಡಕ್ಕೆ ಟಿ20ಯಲ್ಲಿ 10ನೇ ಟೈ ಎನಿಸಿಕೊಂಡಿತು.

ಇನ್ನು ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 2 ವಿಕೆಟ್ ಕಳೆದುಕೊಂಡು ಕೇವಲ 8 ರನ್ ಗಳನ್ನಷ್ಟೇ ಗಳಿಸಿತು. ಮಿಂಚಿನ ಬೌಲಿಂಗ್ ಮಾಡಿದ ಮಹೀಶ್ ತೀಕ್ಷಣ, ಕಿವೀಸ್‌ ಬ್ಯಾಟರ್‌ಗಳು ಸ್ಪೋಟಕ ಬ್ಯಾಟಿಂಗ್ ನಡೆಸಲು ಅವಕಾಶ ನೀಡಲಿಲ್ಲ. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಅಸಲಂಕಾ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್ ನೆರವಿನಿಂದ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

Scroll to load tweet…

ಇದಕ್ಕೂ ಮೊದಲು ನ್ಯೂಜಿಲೆಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಮಿಲ್ನೆ ಪಥುಮ್ ನಿಸ್ಸಾಕಾ ಅವರನ್ನು ಔಟ್ ಮಾಡಿ ಕಿವೀಸ್‌ಗೆ ಅದ್ಭುತವಾದ ಆರಂಭ ನೀಡಿದರು. ಆದರೆ ಇದಾದ ಬಳಿಕ ಕುಸಲ್ ಪೆರೇರಾ ಮತ್ತು ಅಸಲಂಕಾ ಅವರ ಅರ್ಧಶತಕಗಳ ನೆರವಿನಿಂದ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 196 ರನ್ ಕಾಲೆ ಹಾಕಿತು. ನ್ಯೂಜಿಲೆಂಡ್ ಪರ ಜೇಮ್ಸ್‌ ನೀಶಮ್ 2 ವಿಕೆಟ್ ಪಡೆದರು.

ಈ ಸಲ ಕಪ್ ನಹಿ, ಪಂದ್ಯಕ್ಕೂ ಮೊದಲೇ ಡುಪ್ಲಿಸಿಸ್ ಹೇಳಿಕೆಗೆ ಅಭಿಮಾನಿಗಳು ಶಾಕ್, ನಕ್ಕು ನೀರಾದ ಕೊಹ್ಲಿ!

ಗುರಿ ಬೆನ್ನಟ್ಟಿದ ಕಿವೀಸ್ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ತಂಡ ಮೊದಲ 7 ಎಸೆತಗಳಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡಿತು. ಇದಾದ ಬಳಿಕ ಡೇರಲ್ ಮಿಚೆಲ್ ಅವರ 66 ರನ್ ತಂಡವನ್ನು ಗುರಿಯ ಸಮೀಪಕ್ಕೆ ತಂದಿತು. ಅಂತಿಮವಾಗಿ ರಚಿನ್ ರವೀಂದ್ರ 13 ಎಸೆತಗಳಲ್ಲಿ 26 ರನ್ ಹಾಗೂ ಇಶ್ ಸೋಧಿ 4 ಎಸೆತಗಳಲ್ಲಿ 10 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿದರು.

ಶ್ರೀಲಂಕಾ ತಂಡದ ಪರ ನಾಯಕ ದಶುನ್ ಶನಕಾ, ವನಿಂದು ಹಸರಂಗ ಹಾಗೂ ಪ್ರಮೋದ್ ಮಧುಶನ ತಲಾ ಎರಡು ವಿಕೆಟ್ ಪಡೆದರೆ, ಮಹೀಶ್ ತೀಕ್ಷಣ ಹಾಗೂ ದಿಲ್ಷ್ಯಾನ್‌ ಮಧುಶನಕ ತಲಾ ಒಂದೊಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್:

ಶ್ರೀಲಂಕಾ: 196/5
ಚರಿತ್ ಅಸಲಂಕಾ: 67
ಕುಸಾಲ್ ಪರೇರಾ: 53

ಜೇಮ್ಸ್‌ ನೀಶಮ್: 30/2

ನ್ಯೂಜಿಲೆಂಡ್: 198/8

ಡೇರಲ್ ಮಿಚೆಲ್‌: 66
ಮಾರ್ಕ್‌ ಚಾಪ್ಮನ್‌: 33

ದಶುನ್ ಶನಕಾ: 20/2