ಹಕ್ಕಿ ಜ್ವರದ ಭೀತಿಯಿಂದ ಸೌದಿ ಅರೇಬಿಯಾ, ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮಾಂಸ ಮತ್ತು ಮೊಟ್ಟೆಗಳ ಆಮದನ್ನು ನಿಷೇಧಿಸಿದೆ. ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರದ ಈ ನಿರ್ಧಾರವು ಇತ್ತೀಚೆಗೆ ಗಣನೀಯ ಬೆಳವಣಿಗೆ ಕಂಡಿದ್ದ ಭಾರತದ ಕೋಳಿ ರಫ್ತು ವಲಯಕ್ಕೆ ದೊಡ್ಡ ಹಿನ್ನಡೆ ಉಂಟುಮಾಡುವ ಸಾಧ್ಯತೆಯಿದೆ.
ರಿಯಾದ್ (ಫೆ.26): ಮಧ್ಯಪ್ರಾಚ್ಯದ ಪ್ರಮುಖ ರಾಷ್ಟ್ರವಾದ ಸೌದಿ ಅರೇಬಿಯಾವು ಭಾರತ ಸೇರಿದಂತೆ ಜಗತ್ತಿನ 40 ದೇಶಗಳಿಂದ ಕೋಳಿ ಮಾಂಸ (ಚಿಕನ್) ಮತ್ತು ಮೊಟ್ಟೆಗಳ ಆಮದಿನ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿದೆ. ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಭಾರತದ ರಫ್ತು ವಲಯದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ.
ಸೌದಿ ಫುಡ್ ಅಂಡ್ ಡ್ರಗ್ ಅಥಾರಿಟಿ (SFDA) ಈ ಆದೇಶವನ್ನು ಹೊರಡಿಸಿದೆ. ಮುಖ್ಯವಾಗಿ ಹಕ್ಕಿ ಜ್ವರ (Bird Flu - Avian Influenza) ಮತ್ತು ನ್ಯೂಕ್ಯಾಸಲ್ ಕಾಯಿಲೆ (Newcastle disease virus) ಹರಡುವುದನ್ನು ತಡೆಯಲು ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ದೇಶದ ಮಾರುಕಟ್ಟೆಯಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಬಲಪಡಿಸಲು ಮತ್ತು ಜನರ ಆರೋಗ್ಯ ರಕ್ಷಿಸಲು ಈ ಹೆಜ್ಜೆ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಷೇಧಕ್ಕೊಳಗಾದ 40 ದೇಶಗಳ ಪಟ್ಟಿ
ಭಾರತ ಮಾತ್ರವಲ್ಲದೆ ಅಫ್ಘಾನಿಸ್ತಾನ, ಜರ್ಮನಿ, ಇಂಡೋನೇಷ್ಯಾ, ಇರಾನ್, ಬಾಂಗ್ಲಾದೇಶ, ತೈವಾನ್, ದಕ್ಷಿಣ ಆಫ್ರಿಕಾ, ಚೀನಾ, ಇರಾಕ್, ವಿಯೆಟ್ನಾಂ, ಕಾಂಬೋಡಿಯಾ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ಯುನೈಟೆಡ್ ಕಿಂಗ್ಡಮ್, ಈಜಿಪ್ಟ್, ಮೆಕ್ಸಿಕೋ, ಜಪಾನ್ ಮತ್ತು ಹಾಂಕಾಂಗ್ ಸೇರಿದಂತೆ ಒಟ್ಟು 40 ದೇಶಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಈ ಪಟ್ಟಿಯನ್ನು ಜಾಗತಿಕ ಆರೋಗ್ಯ ಪರಿಸ್ಥಿತಿಗೆ ಅನುಗುಣವಾಗಿ ಕಾಲಕಾಲಕ್ಕೆ ಪರಿಷ್ಕರಿಸಲಾಗುವುದು ಎಂದು SFDA ಹೇಳಿದೆ. ಇದಲ್ಲದೆ, ಅಮೇರಿಕಾ, ಆಸ್ಟ್ರೇಲಿಯಾ, ಇಟಲಿ, ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ 16 ದೇಶಗಳ ಮೇಲೆ ಭಾಗಶಃ (Partial) ನಿರ್ಬಂಧಗಳನ್ನು ಹೇರಲಾಗಿದೆ.
ಭಾರತದ ಮೇಲೆ ಆಗುವ ಪರಿಣಾಮ
ಕಳೆದ ಆರು ತಿಂಗಳಲ್ಲಿ ಭಾರತದ ಕೋಳಿ ರಫ್ತು ಸುಮಾರು $149 ಮಿಲಿಯನ್ಗೆ (ಸುಮಾರು ₹1,288 ಕೋಟಿ) ಏರಿಕೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಎರಡು ಪಟ್ಟು ಹೆಚ್ಚಳವಾಗಿತ್ತು. ವಿಶೇಷವಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಭಾರತದ ಮೊಟ್ಟೆಗಳಿಗೆ ಭಾರೀ ಬೇಡಿಕೆಯಿದೆ. ಓಮನ್ ಮತ್ತು ಯುಎಇ (UAE) ಭಾರತದ ಅತಿದೊಡ್ಡ ಖರೀದಿದಾರ ರಾಷ್ಟ್ರಗಳಾಗಿದ್ದು, ಈಗ ಸೌದಿಯ ಈ ನಿಷೇಧವು ಭಾರತೀಯ ರಫ್ತುದಾರರಿಗೆ ಹಿನ್ನಡೆಯುಂಟು ಮಾಡಲಿದೆ.
ನಿಯಮದಲ್ಲಿ ಏನಾದರೂ ವಿನಾಯಿತಿ ಇದೆಯೇ?
ಸರ್ಕಾರದ ಆದೇಶದ ಪ್ರಕಾರ, ಕೋಳಿ ಮಾಂಸ ಅಥವಾ ಸಂಬಂಧಿತ ಉತ್ಪನ್ನಗಳನ್ನು ವೈರಸ್ ಮುಕ್ತಗೊಳಿಸಲು ಸರಿಯಾದ ತಾಪಮಾನದಲ್ಲಿ ಸಂಸ್ಕರಿಸಿದ್ದರೆ (Heat processed) ಅಂತಹ ಉತ್ಪನ್ನಗಳಿಗೆ ನಿಷೇಧದಿಂದ ವಿನಾಯಿತಿ ನೀಡಬಹುದು. ಆದರೆ, ಈ ಉತ್ಪನ್ನಗಳು ಅಧಿಕೃತ ಆರೋಗ್ಯ ಸಂಸ್ಥೆಯಿಂದ ಪ್ರಮಾಣೀಕೃತವಾಗಿರಬೇಕು ಮತ್ತು ಅನುಮೋದಿತ ಕಾರ್ಖಾನೆಗಳಿಂದ ಬಂದಿರಬೇಕು ಎಂಬ ಷರತ್ತು ವಿಧಿಸಲಾಗಿದೆ.


