ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್‌ಗೆ ಲಗ್ಗೆಸೆಮೀಸ್‌ನಲ್ಲಿ ಕಿವೀಸ್‌ ಕಿವಿ ಹಿಂಡಿದ ಶಫಾಲಿ ವರ್ಮಾ ಪಡೆಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದ ಭಾರತ

ಪಾಚೆಫ್‌ಸ್ಟ್ರೋಮ್‌(ಜ.27): ಪರ್ಶಾವಿ ಚೋಪ್ರಾ ಮಿಂಚಿನ ಬೌಲಿಂಗ್ ಹಾಗೂ ಶ್ವೇತಾ ಶೆರಾವತ್ ಬಾರಿಸಿದ ಅಜೇಯ ಅರ್ಧಶತಕದ ನೆರವಿನಿಂದ ಚೊಚ್ಚಲ ಆವೃತ್ತಿಯ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ನ್ಯೂಜಿಲೆಂಡ್ ನೀಡಿದ್ದ 108 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡವು ಕೇವಲ 14.2 ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿದೆ.

ಇಲ್ಲಿನ ಸೆನ್‌ವೆಸ್ ಪಾರ್ಕ್‌ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ಪಡೆ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ಭಾರತ ಕಿರಿಯರ ಮಹಿಳಾ ಕ್ರಿಕೆಟ್ ತಂಡವು ಆರಂಭದಲ್ಲೇ ನಾಯಕಿ ಶಫಾಲಿ ವರ್ಮಾ ವಿಕೆಟ್ ಕಳೆದುಕೊಂಡಿತು. ಶಫಾಲಿ ವರ್ಮಾ 9 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ 10 ರನ್ ಬಾರಿಸಿ ಅನ್ನಾ ಬ್ರೌನಿಂಗ್‌ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಶ್ವೇತಾ ಶೆರಾವತ್ ಹಾಗೂ ಸೌಮ್ಯ ತಿವಾರಿ 67 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸೌಮ್ಯ ತಿವಾರಿ 26 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ ಸಹಿತ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಭರ್ಜರಿ ಫಾರ್ಮ್‌ನಲ್ಲಿರುವ ಶ್ವೇತಾ ಶೆರಾವತ್, ಕಿವೀಸ್‌ ಬೌಲರ್‌ಗಳೆದುರು ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮಿಂಚಿದರು.

ಕಿವೀಸ್ ಎದುರಿನ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ; ಯಾರಿಗೆಲ್ಲಾ ಸಿಗಲಿದೆ ಸ್ಥಾನ?

ಶ್ವೇತಾ ಶೆರಾವತ್ ಕೇವಲ 45 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ ಅಜೇಯ 61 ರನ್ ಬಾರಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಇದಷ್ಟೇ ಅಲ್ಲದೇ ಟೂರ್ನಿಯಲ್ಲಿ ಶ್ವೇತಾ ಮೂರನೇ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದುವರೆಗೂ ಟೂರ್ನಿಯಲ್ಲಿ ಒಟ್ಟು 6 ಪಂದ್ಯಗಳನ್ನಾಡಿರುವ ಶ್ವೇತಾ ಶೆರಾವತ್ 292 ರನ್ ಬಾರಿಸುವ ಮೂಲಕ, ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ಕೊನೆಯಲ್ಲಿ ಗೊಂಗಾಡಿ ತ್ರಿಶಾ ಅಜೇಯ 5 ರನ್ ಬಾರಿಸಿದರು. 

Scroll to load tweet…

ಇನ್ನು ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ನ್ಯೂಜಿಲೆಂಡ್ ತಂಡಕ್ಕೆ ಭಾರತೀಯ ಬೌಲರ್‌ಗಳು ಆಘಾತ ನೀಡಿದರು. ಕಿವೀಸ್ ತಂಡವು 5 ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟರ್‌ಗಳಿಬ್ಬರೂ ಪೆವಿಲಿಯನ್ ಸೇರಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಇಸಾಬೆಲ್ಲಾ ಗಾಜೆ 26 ರನ್‌ ಬಾರಿಸಿದರೆ, ಪ್ಲಿಮ್ಮರ್ 35 ರನ್‌ ಬಾರಿಸಿ ತಂಡಕ್ಕೆ ಕೊಂಚ ಆಸರೆಯಾದರು. ಈ ಜೋಡಿ ಬೇರ್ಪಡುತ್ತಿದ್ದಂತೆಯೇ ಪರ್ಶಾವಿ ಚೋಪ್ರಾ ಮಾರಕ ದಾಳಿಗೆ ತತ್ತರಿಸಿ ನ್ಯೂಜಿಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 107 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತ ಪರ ಶಿಸ್ತು ಬದ್ದ ದಾಳಿ ನಡೆಸಿದ ಪರ್ಶಾವಿ ಚೋಪ್ರಾ ಕೇವಲ 20 ರನ್ ನೀಡಿ 3 ವಿಕೆಟ್ ಪಡೆದರೆ, ಸಂದು, ಮನ್ನತ್ ಕಶ್ಯಪ್, ಶಫಾಲಿ ವರ್ಮಾ ಹಾಗೂ ಅರ್ಚನಾ ದೇವಿ ತಲಾ ಒಂದೊಂದು ವಿಕೆಟ್ ಪಡೆದರು.