ಕ್ರೈಸ್ಟ್‌ಚರ್ಚ್(ಫೆ.03): ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಭಾರತ 'ಎ' ಪರ ಅಜೇಯ ದ್ವಿಶತಕ ಸಿಡಿಸುವ ಮೂಲಕ ಟೆಸ್ಟ್ ಟೀಂ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳುವುದು ಬಹುತೇಕ ಖಚಿತ ಎನಿಸಿದೆ. 

ಒಟ್ಟು 279 ಎಸೆತಗಳಲ್ಲಿ 22 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ ದ್ವಿಶತಕ ಸಿಡಿಸಿ ಸಂಭ್ರಮಿಸಿದರು. ಮೊದಲ ಇನಿಂಗ್ಸ್‌ನಲ್ಲೂ 83 ರನ್ ಬಾರಿಸುವ ಮೂಲಕ ಭಾರತ 'ಎ' ಪರ ಗರಿಷ್ಠ ಸ್ಕೋರರ್‌ ಎನಿಸಿದ್ದರು. ಈ ದ್ವಿಶತಕ ಟೆಸ್ಟ್ ಟೀಂ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳಲು ನೆರವಾಗಬಹುದು. 20 ವರ್ಷದ ಗಿಲ್ ಈ ಹಿಂದೆ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಸ್ಥಾನ ಪಡೆದಿದ್ದರಾದರೂ, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಲಭಿಸಿರಲಿಲ್ಲ.  ಇನ್ನು ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್‌ವಾಲ್ 2 ಇನಿಂಗ್ಸ್‌ಗಳಲ್ಲೂ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದರು.  

ಕಿವೀಸ್ ಸರಣಿ ಗೆದ್ದು ಧೋನಿ ಸೇರಿದಂತೆ ದಿಗ್ಗಜ ನಾಯಕರನ್ನೇ ಹಿಂದಿಕ್ಕಿದ ಕೊಹ್ಲಿ!

ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಸದ್ಯದಲ್ಲೇ ಬಿಸಿಸಿಐ ಟೀಂ ಇಂಡಿಯಾವನ್ನು ಪ್ರಕಟಿಸುವ ಸಾಧ್ಯತೆಯಿದೆ. 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 21ರಿಂದ ಆರಂಭವಾಗಲಿದೆ. 

ಅನಧಿಕೃತ ಟೆಸ್ಟ್ ಡ್ರಾದಲ್ಲಿ ಅಂತ್ಯ:

ಶುಭ್‌ಮನ್‌ ಗಿಲ್‌ ಅಜೇಯ ದ್ವಿಶತಕ ಹಾಗೂ ನಾಯಕ ಹನುಮ ವಿಹಾರಿ ಅಜೇಯ ಶತಕದ ನೆರವಿನಿಂದ ಭಾರತ ‘ಎ’, ನ್ಯೂಜಿಲೆಂಡ್‌ ‘ಎ’ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಮುಕ್ತಾಯವಾಗಿದೆ. 

4ನೇ ಹಾಗೂ ಕೊನೆಯ ದಿನವಾದ ಭಾನುವಾರ 2 ವಿಕೆಟ್‌ಗೆ 127 ರನ್‌ಗಳಿಂದ 2ನೇ ಇನ್ನಿಂಗ್ಸ್‌ ಮುಂದುವರಿಸಿದ ಭಾರತ ‘ಎ’ ಪ್ರಿಯಾಂಕ್‌ ಪಾಂಚಲ್‌ (115), ಶುಭ್‌ಮನ್‌ ಗಿಲ್‌ (204*), ಹನುಮ ವಿಹಾರಿ (100*) ಹೋರಾಟದಿಂದ ದಿನದಂತ್ಯಕ್ಕೆ 3 ವಿಕೆಟ್‌ಗೆ 448 ರನ್‌ಗಳಿಸಿದ ಪರಿಣಾಮ ಪಂದ್ಯ ಡ್ರಾಗೊಂಡಿತು.

ಸ್ಕೋರ್‌: ಭಾರತ ‘ಎ’ 216 ಮತ್ತು 448/3

ನ್ಯೂಜಿಲೆಂಡ್‌ ‘ಎ’ 562/7