WTC Final: ಪಂದ್ಯದ ನಡುವೆಯೇ ಶುಭ್‌ಮನ್ ಗಿಲ್‌ಗೆ ಯುವತಿಯ ಪ್ರಪೋಸ್!
ಲಂಡನ್‌ನ ಓವಲ್ ಮೈದಾನದಲ್ಲಿ ಶುಕ್ರವಾರ ಒಂದು ಸಂಗತಿ ಗಮನಸೆಳೆಯಿತು. ಭಾರತ-ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯ ಇಲ್ಲಿ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಭಾರೀ ಹಿನ್ನಡೆ ಕಂಡಿದೆ.
ಲಂಡನ್ (ಜೂ.9): ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಟ್ರಾವಿಸ್ ಹೆಡ್ ಹಾಗೂ ಸ್ಟೀವನ್ ಸ್ಮಿತ್ ಬಾರಿಸಿದ ಶತಕದಿಂದ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್ ಬಾರಿಸಿದ್ದರೆ, ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 296 ರನ್‌ಗೆ ಆಲೌಟ್ ಆಯಿತು. ಫಾಲೋಆನ್ ಅವಮಾನದಿಂದ ಭಾರತ ಬಚಾವ್ ಆಗಿದ್ದರೂ, ಫೈನಲ್ ಪಂದ್ಯದಲ್ಲಿ ಸೋಲಿನಿಂದ ತಪ್ಪಿಸಿಕೊಳ್ಳಲು ದೊಡ್ಡ ಸಾಹಸವನ್ನೇ ಮಾಡಬೇಕಿದೆ. ಇದರ ನಡುವೆ ಮೂರನೇ ದಿನವಾದ ಶುಕ್ರವಾರದ ಆಟದ ವೇಳೆ ಕೆಲವು ತಮಾಷೆಯ ಪ್ರಸಂಗಗಳು ನಡೆದವು. ಟೀಮ್ ಇಂಡಿಯಾದ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳ ಹೊರತಾಗಿ ಉಳಿದವರೆಲ್ಲರೂ ವೈಫಲ್ಯ ಕಂಡರು. ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ 89 ರನ್ ಬಾರಿಸಿದ್ದರೆ, ಶಾರ್ದೂಲ್ ಠಾಕೂರ್ 51 ರನ್ ಬಾರಿಸಿದರು. ಉಳಿದಂತೆ 2ನೇ ದಿನದಾಟದಲ್ಲಿಯೇ ರವೀಂದ್ರ ಜಡೇಜಾ 48 ರನ್ ಬಾರಿಸಿ ಮಿಂಚಿದ್ದರು. ಎಲ್ಲರೂ ಭಾರತ ತಂಡ ಫಾಲೋಆನ್ ಎದುರಿಸಬಹುದು ಎನ್ನುವ ಹೆದರಿಕೆಯಲ್ಲಿದ್ದಾಗ, ತಮಾಷೆಯ ಪ್ರಸಂಗವೊಂದು ಮೈದಾನದಲ್ಲಿ ಅಭಿಮಾನಿಗಳ ಗಮನಸೆಳೆಯಿತು.
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದಾಗ, ಕ್ಯಾಮೆರಾ ಕಣ್ಣು ಸ್ಟ್ಯಾಂಡ್‌ನಲ್ಲಿದ್ದ ಒಂದು ಹುಡುಗಿಯ ಮೇಲೆ ಬಿದ್ದಿತ್ತು. ಆಕೆಯ ಕೈಯಲ್ಲಿದ್ದ ಬ್ಯಾನರ್‌ನ ಮೇಲೆ ಕ್ಯಾಮೆರಾ ಫೋಕಸ್ ಆದಾಗ, ಯುವತಿ ಕೂಡ ಅದನ್ನು ಹೆಮ್ಮೆಯಿಂದ ಪ್ರದರ್ಶನ ಮಾಡಿದಳು. ಅದರಲ್ಲಿ ಮ್ಯಾರೀ ಮೀ ಶುಭ್‌ಮನ್ ಎಂದು ಆಕೆ ಬರೆದಿದ್ದರು. ಇದನ್ನು ಕ್ಯಾಮೆರಾ ಕ್ಯಾಚ್ ಮಾಡಿದ ಬಳಿಕ, ಶುಭ್‌ಮನ್ ಗಿಲ್‌ನತ್ತ ಕ್ಯಾಮೆರಾ ಫೋಕಸ್ ಮಾಡಲಾಗಿತ್ತು. ಇದು ದೊಡ್ಡ ಸ್ಕ್ರೀನ್‌ನ ಮೇಲೆ ಪ್ರದರ್ಶನವಾದರೂ, ಶುಭ್‌ಮನ್ ಗಿಲ್ ಮಾತ್ರ ಇದಕ್ಕೆ ಹೆಚ್ಚಿನ ಗಮನ ನೀಡಲಿಲ್ಲ.
ಮೊದಲ ಇನ್ನಿಂಗ್ಸ್‌ನಲ್ಲಿ ಗಿಲ್ ಫ್ಲಾಪ್: ಯುವ ಆಟಗಾರ ಶುಭ್‌ಮನ್ ಗಿಲ್ ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದರೂ, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವೈಓಲ್ಯ ಕಂಡಿದ್ದಾರೆ. ಕೇವಲ 15 ಎಸೆತಗಳನ್ನು ಎದುರಿಸಿದ್ದ ಗಿಲ್ ಕೇವಲ 2 ಬೌಂಡರಿಗಳಿದ್ದ 13 ರನ್ ಬಾರಿಸಿದ್ದರು. ಆದರೆ, ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಆಟದಿಂದಾಗಿ 296 ರನ್ ಪೇರಿಸಲು ಸಾಧ್ಯವಾಯಿತು.
WTC FINAL ಹೋರಾಟ ನೀಡಿದರೂ ಭಾರತಕ್ಕೆ 173 ರನ್ ಹಿನ್ನಡೆ, ಆಸಿಸ್ ಬಿಗಿ ಹಿಡಿತದಲ್ಲಿ ಫೈನಲ್!
ರಹಾನೆ ಕೇವಲ 11 ರನ್‌ಗಳಿಂದ ಟೆಸ್ಟ್ ಶತಕ ತಪ್ಪಿಸಿಕೊಂಡರು. 129 ಎಸೆತಗಳನ್ನು ಎದುರಿಸಿದ್ದ ರಹಾನೆ 11 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದರು. ಆಸ್ಟ್ರೇಲಿಯಾ ಪರವಾಗಿ ನಾಯಕ ಪ್ಯಾಟ್ ಕಮ್ಮಿನ್ಸ್ 3 ವಿಕೆಟ್ ಉರುಳಿಸಿದರು. ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲಾಂಡ್ ಹಾಗೂ ಕ್ಯಾಮರೂನ್ ಗ್ರೀನ್ ತಲಾ 2 ವಿಕೆಟ್ ಉರುಳಿಸಿದರು.
ಜಿಯೋಗೆ ಸೆಡ್ಡು, ಡಿಸ್ನಿ-ಹಾಟ್‌ಸ್ಟಾರ್‌ನಲ್ಲಿ ಏಕದಿನ ವಿಶ್ವಕಪ್, ಏಷ್ಯಾಕಪ್ ವೀಕ್ಷಣೆ ಉಚಿತ!