ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆದ್ದರೂ, ನಾಯಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಬಗ್ಗೆ ಮಾಜಿ ಆಟಗಾರ ಆಕಾಶ್ ಚೋಪ್ರಾ ಪ್ರಶ್ನೆ ಎತ್ತಿದ್ದಾರೆ. ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರನ್ನು ಸರಿಯಾಗಿ ಬಳಸಿಕೊಳ್ಳದ ಬಗ್ಗೆ ಟೀಕೆ ವ್ಯಕ್ತವಾಗಿದ್ದು, ಇದೇ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ ಅಯ್ಯರ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ.

ಮುಂಬೈ: ಐಪಿಎಲ್ 2026ರ ಆವೃತ್ತಿಯಲ್ಲಿ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆದ್ದು ಬೀಗಿದೆ. ಆದರೆ, ಈ ಗೆಲುವಿನ ನಡುವೆಯೂ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರ ಕ್ಯಾಪ್ಟನ್ಸಿ ಬಗ್ಗೆ ಮಾಜಿ ಆಟಗಾರ ಆಕಾಶ್ ಚೋಪ್ರಾ ಪ್ರಶ್ನೆ ಎತ್ತಿದ್ದಾರೆ. ತಂಡದ ಪ್ರಮುಖ ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಅನ್ನೋದು ಚೋಪ್ರಾ ಅವರ ಪ್ರಮುಖ ಆರೋಪ.

Add Asianetnews Kannada as a Preferred SourcegooglePreferred

ಈ ಪಂದ್ಯದಲ್ಲಿ ಚಹಲ್ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಅವರು 3 ಓವರ್‌ಗಳಲ್ಲಿ ಕೇವಲ 21 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಆದರೂ, ಶ್ರೇಯಸ್ ಅಯ್ಯರ್ ಅವರಿಗೆ ನಾಲ್ಕನೇ ಓವರ್ ನೀಡಲಿಲ್ಲ. ಬದಲಿಗೆ, 18ನೇ ಓವರ್‌ನಲ್ಲಿ ಚಹಲ್ ಅವರನ್ನು ವಾಪಸ್ ಕರೆದು, ಇಂಪ್ಯಾಕ್ಟ್ ಪ್ಲೇಯರ್ ಆಗಿ ಪ್ರಿಯಾಂಶು ಆರ್ಯ ಅವರನ್ನು ಕಣಕ್ಕಿಳಿಸಿದರು.

ದೈತ್ಯ ಹೊಡೆತಗಳಿಗೆ ಹೆಸರಾದ ಶಿವಂ ದುಬೆ ಕ್ರೀಸ್‌ನಲ್ಲಿದ್ದ ಕಾರಣ, ಶ್ರೇಯಸ್ ಈ ನಿರ್ಧಾರ ತೆಗೆದುಕೊಂಡಿರಬಹುದು. ಆದರೆ, ಆಕಾಶ್ ಚೋಪ್ರಾ 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಈ ತಂತ್ರವನ್ನು ಪ್ರಶ್ನಿಸಿದ್ದಾರೆ. "ಒಂದು ಬೌಂಡರಿ ಕೂಡ ಬಿಟ್ಟುಕೊಡದ ಏಕೈಕ ಬೌಲರ್‌ಗೆ ತನ್ನ ಓವರ್‌ಗಳ ಕೋಟಾ ಪೂರ್ಣಗೊಳಿಸಲು ಹೇಗೆ ಸಾಧ್ಯವಾಗುವುದಿಲ್ಲ? ಅದೂ ತಂಡದ ಏಕೈಕ ಸ್ಪಿನ್ನರ್‌ಗೆ? ಹೌದು, ಶಿವಂ ದುಬೆ ಅಲ್ಲಿದ್ದರು. ಆದರೆ ಗುವಾಹಟಿಯಲ್ಲಿ ರವೀಂದ್ರ ಜಡೇಜಾ ಅವರೇ ದುಬೆಯನ್ನು ಔಟ್ ಮಾಡಿರಲಿಲ್ಲವೇ? ಹಾಗಾಗಿ ಚಹಲ್‌ಗೆ ಕೊನೆಯ ಓವರ್ ಕೊಡಬಹುದಿತ್ತು" ಎಂದು ಚೋಪ್ರಾ ಬರೆದುಕೊಂಡಿದ್ದಾರೆ.

ಗೆಲುವಿನ ನಾಗಾಲೋಟದಲ್ಲಿ ಪಂಜಾಬ್ ಕಿಂಗ್ಸ್

ಈ ಟೀಕೆಗಳ ನಡುವೆಯೂ, ಪಂಜಾಬ್ ಕಿಂಗ್ಸ್ ತಂಡ ಸಿಎಸ್‌ಕೆ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. 200ಕ್ಕೂ ಹೆಚ್ಚು ರನ್‌ಗಳ ಬೃಹತ್ ಮೊತ್ತವನ್ನು 9ನೇ ಬಾರಿಗೆ ಯಶಸ್ವಿಯಾಗಿ ಬೆನ್ನಟ್ಟಿ, ಐಪಿಎಲ್‌ನ 'ರನ್ ಚೇಸ್ ಮಾಸ್ಟರ್ಸ್' ತಾವೇ ಎಂದು ಪಂಜಾಬ್ ಮತ್ತೊಮ್ಮೆ ಸಾಬೀತುಪಡಿಸಿದೆ. ಓಪನರ್ ಪ್ರಿಯಾಂಶು ಆರ್ಯ ಕೇವಲ 9 ಎಸೆತಗಳಲ್ಲಿ 33 ರನ್ ಸಿಡಿಸಿ ಸ್ಫೋಟಕ ಆರಂಭ ನೀಡಿದರೆ, ನಾಯಕ ಶ್ರೇಯಸ್ ಅಯ್ಯರ್ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಶ್ರೇಯಸ್ ಅಯ್ಯರ್ ಹೇಳಿದ್ದೇನು?

ಪಂದ್ಯದ ನಂತರ ಮಾತನಾಡಿದ ಶ್ರೇಯಸ್, ತಮ್ಮ ತಂಡದ ಪ್ರದರ್ಶನವನ್ನು ಹಾಡಿ ಹೊಗಳಿದರು. "ಪಂದ್ಯಕ್ಕೂ ಮುನ್ನ ಸ್ವಲ್ಪ ಆತಂಕವಿತ್ತು. ಆದರೆ ಪ್ರಿಯಾಂಶು ಮತ್ತು ಪ್ರಭ್‌ಸಿಮ್ರಾನ್ ನೀಡಿದ ಆರಂಭ ಅದ್ಭುತವಾಗಿತ್ತು. ಹೊರಗಿನವರನ್ನು ಮೆಚ್ಚಿಸುವುದಕ್ಕಿಂತ, ತಂಡದೊಳಗೆ ನಾವು ಪರಸ್ಪರ ನಂಬಿಕೆ ಇಡಲು ನಿರ್ಧರಿಸಿದೆವು. ಒತ್ತಡದ ಸನ್ನಿವೇಶಗಳಲ್ಲಿ ಹೇಗೆ ಆಡಬೇಕು ಎಂಬ ಬಗ್ಗೆ ಪ್ರತಿಯೊಬ್ಬ ಆಟಗಾರನಿಗೂ ಸ್ಪಷ್ಟ ಕಲ್ಪನೆ ಇದೆ" ಎಂದು ಶ್ರೇಯಸ್ ಹೇಳಿದರು.

ನಿಧಾನಗತಿಯ ಬೌಲಿಂಗ್ ಶ್ರೇಯಸ್‌ ಅಯ್ಯರ್‌ಗೆ 24 ಲಕ್ಷ ರುಪಾಯಿ ದಂಡ!

ಚೆನ್ನೈ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ತಂಡದ ಇತರ ಸದಸ್ಯರಿಗೆ ಬಿಸಿಸಿಐ ಭಾರಿ ದಂಡ ವಿಧಿಸಿದೆ. ಈ ಸೀಸನ್‌ನಲ್ಲಿ ಶ್ರೇಯಸ್ ಅಯ್ಯರ್ ಎರಡನೇ ಬಾರಿಗೆ ನಿಧಾನಗತಿಯ ಓವರ್ ರೇಟ್‌ಗಾಗಿ ದಂಡನೆಗೆ ಒಳಗಾಗಿದ್ದಾರೆ. ಹೀಗಾಗಿ, ಅವರಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇನ್ನು, ತಂಡದ ಇತರ ಆಟಗಾರರಿಗೆ (ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ) 6 ಲಕ್ಷ ರೂಪಾಯಿ ಅಥವಾ ಪಂದ್ಯದ ಶುಲ್ಕದ ಶೇ. 25ರಷ್ಟು (ಯಾವುದು ಕಡಿಮೆಯೋ ಅದು) ದಂಡ ಕಟ್ಟುವಂತೆ ಶಿಸ್ತು ಸಮಿತಿ ಆದೇಶಿಸಿದೆ.