2023ರ ಏಕದಿನ ವಿಶ್ವಕಪ್ ಬಳಿಕ ಭಾರತ ತಂಡದಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್, ಕಳೆದ ಒಂದೂವರೆ ವರ್ಷದಿಂದ ಗೆಲುವಿನ ನಾಗಾಲೋಟದಲ್ಲಿದ್ದಾರೆ. ಸತತ ಎರಡನೇ ವರ್ಷ ಟಿ20 ಫೈನಲ್‌ನಲ್ಲಿ ರಜತ್ ಪಾಟೀದಾರ್ ನಾಯಕತ್ವದ ತಂಡದ ವಿರುದ್ಧ ಶ್ರೇಯಸ್ ಅಯ್ಯರ್ ನಾಯಕತ್ವದ ತಂಡ ಮುಖಾಮುಖಿಯಾಗಲಿದೆ.
ಅಹಮದಾಬಾದ್: 2023ರ ಏಕದಿನ ವಿಶ್ವಕಪ್ ಬಳಿಕ ಭಾರತ ತಂಡದಿಂದ ಹೊರಬಿದ್ದು, ಬಿಸಿಸಿಐಗುತ್ತಿಗೆ ಪಟ್ಟಿಯಲ್ಲೂ ಸ್ಥಾನ ಗಿಟ್ಟಿಸಲು ವಿಫಲರಾಗಿದ್ದ ಶ್ರೇಯಸ್ ಅಯ್ಯರ್, ಕಳೆದ ಒಂದೂವರೆ ವರ್ಷದಿಂದ ಮುಟ್ಟಿದ್ದೆಲ್ಲವೂ ಚಿನ್ನ.
ಕಳೆದ ವರ್ಷ ಮುಂಬೈ ಪರ ರಣಜಿ ಟ್ರೋಫಿ ಗೆದ್ದಿದ್ದ ಶ್ರೇಯಸ್, ಬಳಿಕ ತಮ್ಮದೇ ನಾಯಕತ್ವದಲ್ಲಿ ಮುಂಬೈಗೆ ಮುಸ್ತಾಕ್ ಅಲಿ ಟಿ20 ಟ್ರೋಫಿಯನ್ನೂ ಗೆಲ್ಲಿಸಿಕೊಟ್ಟಿದ್ದರು. ಐಪಿಎಲ್‌ನಲ್ಲಿ ಕೆಕೆಆರ್‌ನ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಶ್ರೇಯಸ್, ಇರಾನಿ ಕಪ್ ಗೆದ್ದ ಮುಂಬೈ ತಂಡದಲ್ಲಿದ್ದರು. ಇತ್ತೀಚೆಗೆ ಭಾರತ ತಂಡ ಚಾಂಪಿಯನ್ ಟ್ರೋಫಿ ಗೆದ್ದಾಗ ಶ್ರೇಯಸ್ ತಂಡದ ಪ್ರಮುಖ ಭಾಗವಾಗಿದ್ದರು. ಅವರು ಕಳೆದ 15 ತಿಂಗಳುಗಳಲ್ಲಿ 6ನೇ ಟ್ರೋಫಿ ಗೆಲ್ಲುವ ಕಾತರದಲ್ಲಿದ್ದಾರೆ.
ಕಳೆದ ವರ್ಷ ಸಯ್ಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಜತ್ ಪಾಟೀದಾರ್ ತಂಡಗಳು ಮುಖಾಮುಖಿಯಾಗಿದ್ದವು. ಆಗ ಪಾಟೀದಾರ್ ನೇತೃತ್ವದ ಮಧ್ಯಪ್ರದೇಶ ಎದುರು ಅಯ್ಯರ್ ನೇತೃತ್ವದ ಮುಂಬೈ ಚಾಂಪಿಯನ್ ಆಗಿ ಹೊರಹೊಮ್ಮಿತ್ತು, ಹೀಗಾಗಿ ಇಂದು ಶ್ರೇಯಸ್ ಅಯ್ಯರ್ ಮೇಲೆ ಸೇಡು ತೀರಿಸಿಕೊಳ್ಳಲು ಪಾಟೀದಾರ್ ಎದುರು ನೋಡುತ್ತಿದ್ದಾರೆ.
ಮತ್ತೆ ಟಿ20 ಫೈನಲ್‌ನಲ್ಲಿ ರಜತ್-ಶ್ರೇಯಸ್ ತಂಡಗಳ ಮುಖಾಮುಖಿ
ಸತತ ಎರಡನೇ ವರ್ಷ ಟಿ20 ಫೈನಲ್‌ನಲ್ಲಿ ರಜತ್ vs ಶ್ರೇಯಸ್ ನಾಯಕತ್ವದ ತಂಡಗಳು ಮುಖಾಮುಖಿಯಾಗಲಿವೆ. ಕಳೆದ ವರ್ಷ ಮುಸ್ತಾಕ್ ಅಲಿ ಟಿ20 ಫೈನಲ್‌ನಲ್ಲಿ ಶ್ರೇಯಸ್ ಮುಂಬೈಗೆ, ರಜತ್ ಮಧ್ಯಪ್ರದೇಶಕ್ಕೆ ನಾಯಕತ್ವ ವಹಿಸಿದ್ದರು. ಮುಂಬೈ ತಂಡ ಚಾಂಪಿಯನ್ ಆಗಿತ್ತು.
ಮಳೆ ಬಂದರೆ ಪಂದ್ಯ ನಾಳೆಗೆ ಮುಂದೂಡಿಕೆ
ಭಾನುವಾರದ ಕ್ವಾಲಿಫೈಯರ್-2 ಪಂದ್ಯ ಮಳೆಯಿಂದ 2.15 ಗಂಟೆ ತಡವಾಗಿ ಆರಂಭಗೊಂಡಿತ್ತು. ಮಂಗಳವಾರ ಅಹಮದಾಬಾದ್‌ನಲ್ಲೇ ಫೈನಲ್ ನಡೆಯಲಿದ್ದು, ಈ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಫೈನಲ್‌ಗೆ 2 ಗಂಟೆ ಹೆಚ್ಚುವರಿ ಸಮಯ ನಿಗದಿಪಡಿಸಲಾಗಿದ್ದರೂ, ಮಳೆಯಿಂದ ಮಂಗಳವಾರ ಪಂದ್ಯ ನಡೆಯದಿದ್ದರೆ ಮೀಸಲು ದಿನವಾದ ಬುಧವಾರಕ್ಕೆ ಮುಂದೂಡಿಕೆ ಆಗಲಿದೆ. 2023ರ ಐಪಿಎಲ್‌ನಲ್ಲೂ ಮೀಸಲು ದಿನದಂದು ಫೈನಲ್ ಪಂದ್ಯ ನಡೆದಿತ್ತು.
9 ವರ್ಷ ಬಳಿಕ ಫೈನಲ್ ಆಡುತ್ತಿರುವ ಆರ್‌ಸಿಬಿ
ಆರ್‌ಸಿಬಿ ತಂಡ 4ನೇ ಬಾರಿ ಫೈನಲ್‌ನಲ್ಲಿ ಆಡಲಿದೆ. ಈ ಮೊದಲು 2009, 2011 ಹಾಗೂ 2016ರಲ್ಲಿ ಫೈನಲ್ ಗೇರಿದ್ದರೂ ಸೋತಿದ್ದ ತಂಡ, 9 ವರ್ಷಗಳ ಬಳಿಕ ಮತ್ತೊಮ್ಮೆ ಪ್ರಶಸ್ತಿ ಸುತ್ತಿನಲ್ಲಿ ಸೆಣಸಾಡಲಿದೆ. ಮತ್ತೊಂದೆಡೆ ಪಂಜಾಬ್ 2014ರಲ್ಲಿ ಮೊದಲ ಬಾರಿ ಫೈನಲ್‌ಗೇರಿತ್ತು. 2ನೇ ಪ್ರಯತ್ನದಲ್ಲಿ ತಂಡ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.
ಫೈನಲ್‌ನಲ್ಲಿ 5 ಕನ್ನಡಿಗರು
ಈ ಬಾರಿ ಐಪಿಎಲ್ ಫೈನಲ್‌ನಲ್ಲಿ ಐವರು ಕನ್ನಡಿಗರು ಇದ್ದಾರೆ. ಆರ್‌ಸಿಬಿ ತಂಡದಲ್ಲಿ ಮಯಾಂಕ್ ಅಗರ್‌ವಾಲ್, ಮನೋಜ್ ಭಾಂಡಗೆ, ಪಂಜಾಬ್ ತಂಡದಲ್ಲಿ ವೈಶಾಖ್ ವಿಜಯ್‌ಕುಮಾರ್, ಪ್ರವೀಣ್ ದುಬೆ ಪ್ರತಿನಿಧಿಸಲಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ ಕೋಚ್ ಆಗಿರುವ ಸುನಿಲ್ ಜೋಶಿ ಕೂಡಾ ಕನ್ನಡಿಗ
ಪಿಚ್ ರಿಪೋರ್ಟ್:
ಅಹಮದಾಬಾದ್ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಫೈನಲ್ ಪಂದ್ಯದಲ್ಲೂ ದೊಡ್ಡ ಮೊತ್ತ ನಿರೀಕ್ಷಿಸಬಹುದು. ಇಲ್ಲಿ ಈ ಬಾರಿ ನಡೆದ 8 ಪಂದ್ಯಗಳ 11 ಇನ್ನಿಂಗ್ಸ್‌ಗಳಲ್ಲಿ 200+ ರನ್ ದಾಖಲಾಗಿವೆ.
ಸಮಾರೋಪ ಸಮಾರಂಭ ಭಾರತ ಸೇನೆಗೆ ಸಮರ್ಪಣೆ
ಫೈನಲ್‌ಗೂ ಮುನ್ನ ಅದ್ದೂರಿ ಸಮಾರೋಪ ಸಮಾರಂಭ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಆಪರೇಷನ್ ಸಿಂಧೂರಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸಮಾರಂಭ ವನ್ನು ಭಾರತೀಯ ಸೇನೆಗೆ ಸಮರ್ಪಿಸಲಾಗುತ್ತದೆ. ಖ್ಯಾತ ಗಾಯಕ ಶಂಕರ್ ಮಹದೇವನ್ ಸೇರಿದಂತೆ ಪ್ರಮುಖರು ಪ್ರದರ್ಶನ ನೀಡಲಿದ್ದಾರೆ.
