* ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕ್ಷಣಗಣನೆ* ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲಿರುವ ಶಿಖರ್ ಧವನ್* ವಿಂಡೀಸ್ ಎದುರಿನ 3 ಪಂದ್ಯಗಳ ಏಕದಿನ ಸರಣಿ ಇಂದು ಆರಂಭ
ಟ್ರಿನಿಡಾಡ್(ಜು.22): ಇತ್ತೀಚೆಗಷ್ಟೇ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಯಶಸ್ಸು ಕಂಡಿದ್ದ ಭಾರತ ಕ್ರಿಕೆಟ್ ತಂಡ ಮತ್ತೊಂದು ವಿದೇಶಿ ಸರಣಿಗೆ ಸಜ್ಜಾಗಿದ್ದು, ಶುಕ್ರವಾರದಿಂದ ವೆಸ್ಟ್‌ಇಂಡೀಸ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಸರಣಿಯ ಎಲ್ಲಾ ಪಂದ್ಯಗಳಿಗೆ ಪೋರ್ಚ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಇದೇ ವರ್ಷ ಫೆಬ್ರವರಿಯಲ್ಲಿ ವಿಂಡೀಸ್ ತಂಡ ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾಗ ಆತಿಥೇಯರು ತಲಾ 3 ಪಂದ್ಯಗಳ ಏಕದಿನ, ಟಿ20 ಸರಣಿಯಲ್ಲಿ ವೈಟ್‌ವಾಶ್ ಸಾಧನೆ ಮಾಡಿದ್ದರು. ಈಗ ಅವರದೇ ನೆಲದಲ್ಲಿ ಸರಣಿ ಆಡುತ್ತಿದ್ದು, ಗೆಲುವಿನ ಹುಮ್ಮಸ್ಸಿನ ನಡುವೆಯೂ ಹಲವು ಸವಾಲುಗಳು ತಂಡದಲ್ಲಿವೆ. ಖಾಯಂ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ, ರಿಷಭ್ ಪಂತ್, ಮೊಹಮದ್ ಶಮಿ ಸೇರಿದಂತೆ ಪ್ರಮುಖರು ಈ ಸರಣಿಗೆ ಗೈರಾಗಲಿದ್ದು, ಹಿರಿಯ ಬ್ಯಾಟರ್ ಶಿಖರ್ ಧವನ್ ನಾಯಕತ್ವ ವಹಿಸಲಿದ್ದಾರೆ.
2023ರ ಏಕದಿನ ವಿಶ್ವಕಪ್‌ಗೂ ಮುನ್ನ ಬಲಿಷ್ಠ ತಂಡ ಕಟ್ಟಿಕೊಳ್ಳಲು ಎದುರು ನೋಡುತ್ತಿರುವ ಭಾರತ, ಯುವ ತಾರೆಗಳಿಗೆ ಮತ್ತೊಂದು ಅವಕಾಶ ನೀಡಿದೆ. ಶಿಖರ್ ಧವನ್ ಜೊತೆ ಶುಭ್‌ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರೆ, ಇಶಾನ್ ಕಿಶನ್ ಮತ್ತು ಋುತುರಾಜ್ ಗಾಯಕ್ವಾಡ್ ಹೊರಗುಳಿಬಹುದು. ಅತ್ಯುತ್ತಮ ಲಯದಲ್ಲಿರುವ ದೀಪಕ್ ಹೂಡಾ, ಸೂರ್ಯಕುಮಾರ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಮತ್ತೊಂದು ಸ್ಥಾನಕ್ಕಾಗಿ ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಪೈಪೋಟಿ ಇದೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಶಾರ್ದೂಲ್ ಠಾಕೂರ್ ವೇಗಿ ಆಲ್ರೌಂಡರ್ ಸ್ಥಾನವನ್ನು ತುಂಬಲಿದ್ದಾರೆ. ರವೀಂದ್ರ ಜಡೇಜಾ ಜೊತೆ ಯಜುವೇಂದ್ರ ಚಹಲ್ ಸ್ಪಿನ್ ಬೌಲಿಂಗನ್ನು ಮುನ್ನಡೆಲಿದ್ದಾರೆ. ಅಶ್‌ರ್‍ದೀಪ್ ಸಿಂಗ್ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಕನ್ನಡಿಗ ಪ್ರಸಿದ್ಧ್ ಕೃಷ್ಣ ಜೊತೆ ಮೊಹಮದ್ ಸಿರಾಜ್ ವೇಗದ ಬೌಲರ್‌ಗಳ ಸ್ಥಾನ ತುಂಬಲಿದ್ದಾರೆ.
ವಿಂಡೀಸ್‌ಗೆ ಪೂರನ್, ಹೋಲ್ಡರ್ ಬಲ: ಇತ್ತೀಚೆಗಷ್ಟೇ ತವರಿನಲ್ಲೇ ಬಾಂಗ್ಲಾದೇಶ ಎದುರು ಏಕದಿನ ಸರಣಿಯಲ್ಲಿ 0-3 ವೈಟ್‌ವಾಶ್ ಮುಖಭಂಗಕ್ಕೊಳಗಾಗಿದ್ದ ವಿಂಡೀಸ್ ಆ ಆಘಾತದಿಂದ ಹೊರಬರಲು ಕಾತರಿಸುತ್ತಿದೆ. ತಾರಾ ಆಲ್ರೌಂಡರ್ ಜೇಸನ್ ಹೋಲ್ಡರ್ ತಂಡಕ್ಕೆ ಮರಳಿದ್ದು, ಮಹತ್ವದ ಸರಣಿಯಲ್ಲಿ ತಂಡಕ್ಕೆ ಬಲ ಒದಗಿಸಿದೆ. ನಾಯಕ ನಿಕೋಲಸ್ ಪೂರನ್ ಯಶಸ್ಸು ದೊರಕಿಸಿಕೊಡುವ ಜೊತೆಗೆ ವೈಯಕ್ತಿಕವಾಗಿಯೂ ಲಯಕ್ಕೆ ಮರಳಲು ಕಾಯುತ್ತಿದ್ದಾರೆ.
ವೆಸ್ಟ್ ಇಂಡೀಸ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಆಘಾತ, ಕೆಎಲ್ ರಾಹುಲ್‌ಗೆ ಕೊರೋನಾ ದೃಢ!
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಒಟ್ಟು 136 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪೈಕಿ ಟೀಂ ಇಂಡಿಯಾ ಕೊಂಚ ಮೇಲುಗೈ ಸಾಧಿಸಿದೆ. 136 ಪಂದ್ಯಗಳ ಪೈಕಿ ಭಾರತ ಕ್ರಿಕೆಟ್ ತಂಡವು 67 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೇ, ವೆಸ್ಟ್ ಇಂಡೀಸ್ ತಂಡವು 63 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಎರಡು ಪಂದ್ಯ ಟೈ ಆದರೆ, 4 ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದಿರಲಿಲ್ಲ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಶಿಖರ್ ಧವನ್(ನಾಯಕ), ಶುಭ್‌ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್/ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಹಲ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅಶ್‌ರ್‍ದೀಪ್ ಸಿಂಗ್/ಆವೇಶ್ ಖಾನ್.
ವಿಂಡೀಸ್: ಶಾಹಿ ಹೋಪ್, ಬ್ರೂಕ್ಸ್, ಕಾರ್ಟಿ, ಪೂರನ್(ನಾಯಕ), ಕಿಂಗ್, ಪೋವೆಲ್, ಹೋಲ್ಡರ್, ಕೀಮೊ ಪಾಲ್, ಅಕೇಲ್ ಹೊಸೈನ್, ಗುಡಕೇಶ್ ಮೊಟೀ, ಸೀಲ್ಸ್.
ಸ್ಥಳ: ಕ್ವೀನ್ಸ್ ಪಾರ್ಕ್ ಓವಲ್
ಪಂದ್ಯ: ಸಂಜೆ 7ಕ್ಕೆ
ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್
