Asianet Suvarna News Asianet Suvarna News

ಶೇನ್ ವಾರ್ನ್‌ ಎಂದೆಂದಿಗೂ ನಮ್ಮ ಹೃದಯದಲ್ಲಿರುತ್ತಾರೆ: ಸಚಿನ್ ತೆಂಡುಲ್ಕರ್

* ಕ್ರಿಕೆಟ್ ದಿಗ್ಗಜ ಶೇನ್‌ ವಾರ್ನ್‌ಗೆ ನುಡಿನಮನ ಸಲ್ಲಿಸಿದ ಸಚಿನ್ ತೆಂಡುಲ್ಕರ್

* ಮಾರ್ಚ್‌ 04ರಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದ ವಾರ್ನ್‌

* ನೀವೆಂದಿಗೂ ನಮ್ಮ ಹೃದಯದಲ್ಲಿರುತ್ತೀರಾ ಎಂದು ಬಣ್ಣಿಸಿದ ಮಾಸ್ಟರ್ ಬ್ಲಾಸ್ಟರ್ 

Shane Warne will continue to live in our hearts Says Sachin Tendulkar kvn
Author
Bengaluru, First Published Mar 29, 2022, 6:09 PM IST

ಮುಂಬೈ(ಮಾ.29): ಕೆಲವು ದಿನಗಳ ಹಿಂದಷ್ಟೇ ಹೃದಯಾಘಾತದಿಂದ ಕೊನೆಯುಸಿರೆಳೆದ ಸ್ಪಿನ್ ದಿಗ್ಗಜ ಶೇನ್ ವಾರ್ನ್‌ (Shane Warne) ಅವರಿಗೆ ಮಾಸ್ಟರ್ ಬ್ಲಾಸ್ಟರ್‌ ಸಚಿನ್ ತೆಂಡುಲ್ಕರ್ (Sachin Tendulkar) ಭಾವಪೂರ್ಣ ನುಡಿನಮನ ಸಲ್ಲಿಸಿದ್ದಾರೆ. ಶೇನ್ ವಾರ್ನ್‌ ಅವರೊಬ್ಬ ಕಠಿಣ ಪ್ರತಿಸ್ಪರ್ಧಿಯಾಗಿದ್ದರು. ಕ್ರಿಕೆಟ್‌ ಪಿಚ್‌ನಲ್ಲಿ ಅವರನ್ನು ಎದುರಿಸಲು ತಾವು ಸಾಕಷ್ಟು ಪೂರ್ವತಯಾರಿ ನಡೆಸುತ್ತಿದ್ದೆ ಎಂದು ಕ್ರಿಕೆಟ್ ತೆಂಡುಲ್ಕರ್ ಹೇಳಿದ್ದಾರೆ. ವಿಶ್ವ ಕ್ರಿಕೆಟ್‌ ಕಂಡ ದಿಗ್ಗಜ ಲೆಗ್ ಸ್ಪಿನ್ನರ್ ಶೇನ್ ವಾರ್ನ್‌ ಮಾರ್ಚ್‌ 04ರಂದು ಥಾಯ್ಲೆಂಡ್‌ನಲ್ಲಿ ತಮ್ಮ 52 ವಯಸ್ಸಿನಲ್ಲೇ ಹೃದಯಾಘಾತದಿಂದ (Heart Attack) ಕೊನೆಯುಸಿರೆಳೆದಿದ್ದರು.

ನಾನು ಮೊಟ್ಟ ಮೊದಲ ಬಾರಿಗೆ ಶೇನ್ ವಾರ್ನ್ ಅವರನ್ನು ಎದುರಿಸಿದ್ದು 1998ರಲ್ಲಿ. ಭಾರತದಲ್ಲಿ ಆಯೋಜನೆಗೊಂಡಿದ್ದ ಕ್ರಿಕೆಟ್‌ ಸರಣಿಯನ್ನು ತೆಂಡುಲ್ಕರ್‌ ವರ್ಸಸ್ ಶೇನ್‌ ವಾರ್ನ್ ನಡುವಿನ ಕಾದಾಟ ಎಂದೇ ಬಿಂಬಿಸಲಾಗಿತ್ತು. ಆದರೆ ಅದು ತೆಂಡುಲ್ಕರ್ ವರ್ಸಸ್‌ ವಾರ್ನ್‌ ನಡುವಿನ ಕಾದಾಟವಲ್ಲ, ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಿನ ಸರಣಿಯಷ್ಟೆ. ಆದರೆ ಜನರು ಇದು ನಮ್ಮಿಬ್ಬರ ಕಾದಾಟ ಎನ್ನುವಷ್ಟರ ಮಟ್ಟಿಗೆ ಜನರು ಫಾಲೋ ಮಾಡುತ್ತಿದ್ದರು ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

ಈ ರೀತಿ ಬಿಂಬಿಸುವುದರಿಂದ ಒತ್ತಡ ಬೀಳುತ್ತದೆ. ಶೇನ್ ವಾರ್ನ್ ಅವರಂತಹ ವಿಶ್ವದರ್ಜೆಯ ಆಟಗಾರನನ್ನು ಎದುರಿಸುವಾಗ, ಸುಮ್ಮನೆ ಕ್ರೀಸ್‌ಗಿಳಿದು ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾನು ಶೇನ್ ವಾರ್ನ್ ಅವರನ್ನು ಎದುರಿಸಲು ಸಾಕಷ್ಟು ಅಭ್ಯಾಸ ನಡೆಸಿದ್ದೆ. ಅದು ಕೇವಲ ನೆಟ್ಸ್‌ನಲ್ಲಿ ಮಾತ್ರ ಅಭ್ಯಾಸ ನಡೆಸುತ್ತಿರಲಿಲ್ಲ, ಬದಲಾಗಿ ರೂಮಿನಲ್ಲಿ ಕೂತಾಗಲೂ ಅವರಿಗಿಂತ ಒಂದು ಹೆಜ್ಜೆ ಮುಂದೆ ಯೋಚನೆ ಮಾಡಬೇಕಿತ್ತು. ಯಾಕೆಂದರೆ ಅವರೊಬ್ಬ ಅದ್ಭುತ ಬೌಲರ್ ಆಗಿದ್ದರು ಹಾಗೂ ಮೈಂಡ್ ಗೇಮ್‌ ಮೂಲಕ ಎದುರಾಳಿ ಬ್ಯಾಟರ್‌ಗಳ ಮೇಲೆ ವಾರ್ನ್ ಒತ್ತಡ ಹೇರುತ್ತಿದ್ದರು ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

ಜಗತ್ತಿನಲ್ಲಿ ಹಲವಾರು ಉತ್ತಮ ಸ್ಪಿನ್ನರ್‌ಗಳಿದ್ದಾರೆ. ಆದರೆ ಶೇನ್ ವಾರ್ನ್ ಎಲ್ಲರಿಗಿಂತ ವಿಭಿನ್ನ ಬೌಲರ್. ಕೆಲವೇ ಕೆಲವು ಬೌಲರ್‌ಗಳ ಎದುರು ನೀವು ಚೆಂಡನ್ನು ಮೇಲಕ್ಕೆ ಹೊಡೆಯಲು ಸಾಧ್ಯವಿಲ್ಲ. ಶೇನ್ ವಾರ್ನ್ ಬಾಲ್‌ ಪಿಚ್‌ ಮಾಡಿದರೆ, ಡ್ರೈವ್ ಮಾಡುವುದು ಸುಲಭದ ಮಾತಾಗಿರಲಿಲ್ಲ. ಪಂದ್ಯದ ಕೊನೆಯ ಕ್ಷಣದವರೆಗೂ ಎದುರಾಳಿ ಬ್ಯಾಟರ್‌ನನ್ನು ಹೇಗೆ ಔಟ್ ಮಾಡಬೇಕು ಎನ್ನುವಷ್ಟರ ಮಟ್ಟಿಗೆ ವಾರ್ನ್‌ ಆಲೋಚಿಸುತ್ತಿದ್ದರು ಎಂದು ತೆಂಡುಲ್ಕರ್ ಹೇಳಿದ್ದಾರೆ.

ಇನ್ನು 2021ರಲ್ಲಿ ಶೇನ್‌ ವಾರ್ನ್‌ ಅವರನ್ನು ಕಡೆಯ ಬಾರಿಗೆ ಭೇಟಿಯಾದ ಕ್ಷಣವನ್ನು ತೆಂಡುಲ್ಕರ್ ಮೆಲುಕು ಹಾಕಿದ್ದಾರೆ. 2021ರ ಐಪಿಎಲ್ (IPL 2021) ಟೂರ್ನಿ ಮುಕ್ತಾಯದ ಬಳಿಕ ನಾನು ಕೆಲಕಾಲ ಲಂಡನ್‌ನಲ್ಲಿ ಸಮಯವನ್ನು ಕಳೆದೆ, ಈ ವೇಳೆ ಶೇನ್ ವಾರ್ನ್ ಸಂಪರ್ಕದಲ್ಲಿದ್ದರು. ಯಾವತ್ತೂ ಅವರ ಭೇಟಿ ಸಪ್ಪೆಯೆನಿಸಲಿಲ್ಲ. ಯಾಕೆಂದರೆ ಅವರು ಯಾವಾಗಲೂ ಜೋಕ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದರು. ಅವರು ಕೇವಲ ಸ್ಪಿನ್ನರ್ ಮಾತ್ರವೇ ಆಗಿರಲಿಲ್ಲ. ಬದಲಾಗಿ ಒಳ್ಳೆಯ ಗಾಲ್ಫರ್‌ ಕೂಡಾ ಆಗಿದ್ದರು. ಅವರು ಇನ್ನಿಲ್ಲ ಎಂದು ಹೇಳಲು ನಾನು ಬಯಸುವುದಿಲ್ಲ. ಯಾಕೆಂದರೆ, ಅವರು ಎಂದೆಂದಿಗೂ ನಮ್ಮ ಹೃದಯದಲ್ಲಿದ್ದಾರೆ ಎಂದು ತೆಂಡುಲ್ಕರ್ ಹೇಳಿದ್ದಾರೆ.

ಶೇನ್ ವಾರ್ನ್‌ ಬದುಕಿನುದ್ದಕ್ಕೂ ಒಳ್ಳೆಯ ಮನೋಭಾವ ಹೊಂದಿದ್ದರು. ಅವರು ಯಾವಾಗಲೂ ಸಕಾರಾತ್ಮಕ ಗುಣ ಹೊಂದಿದ್ದರು. ತಮ್ಮ ಪಾಲಿಗೆ ಬಂದಿದೆಲ್ಲವನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸುತ್ತಿದ್ದರು. ಅವರು ಈಗ ಇಲ್ಲ ಎಂದು ಹೇಳಲು ಮನಸ್ಸು ಒಪ್ಪಲು ತಯಾರಿಲ್ಲ ಎಂದು ತೆಂಡುಲ್ಕರ್ ಮಾತು ಮುಗಿಸಿದ್ದಾರೆ.
 

Follow Us:
Download App:
  • android
  • ios