ಲಕ್ನೋ[ನ.12]: ಆರಂಭಿಕ ಬ್ಯಾಟ್ಸ್‌ಮನ್ ಶಾಯ್ ಹೋಪ್ ಅವರ ಭರ್ಜರಿ ಶತಕದ ನೆರವಿನಿಂದ ವೆಸ್ಟ್ ಇಂಡೀಸ್, ಆಫ್ಘಾನಿಸ್ತಾನ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ವಿಂಡೀಸ್ 3-0 ಯೊಂದಿಗೆ ಕ್ಲೀನ್ ಸ್ವೀಪ್ ಮಾಡಿದೆ. 

ಸೋಮವಾರ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಫ್ಘನ್ ನೀಡಿದ 250 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ವಿಂಡೀಸ್‌ಗೆ ಶಾಯ್ ಹೋಪ್ (109), ರೋಸ್ಟನ್ ಚೇಸ್ (42) ನೆರವಾದರು. ತಂಡ 48.4 ಓವರಲ್ಲಿ 5 ವಿಕೆಟ್‌ಗೆ 253 ರನ್‌ಗಳಿಸಿ ಜಯದ ನಗೆ ಬೀರಿತು. ಈ ಮೂಲಕ ಬರೋಬ್ಬರಿ 5 ವರ್ಷಗಳ ಬಳಿಕ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿತು. ಈ ಹಿಂದೆ 2014ರಲ್ಲಿ ಬಾಂಗ್ಲಾದೇಶ ವಿರುದ್ಧ ಕಡೆಯ ಬಾರಿಗೆ ಏಕದಿನ ಸರಣಿಯಲ್ಲಿ ಕೆರಿಬಿಯನ್ ಪಡೆ ಕ್ಲೀನ್ ಮಾಡಿತ್ತು.

ಏಕದಿನ: ಆಫ್ಘನ್ ವಿರುದ್ಧ ವಿಂಡೀಸ್‌ಗೆ ಸುಲಭ ಜಯ

ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ಹಜರುತ್ ಉಲ್ಲಾ ಜಝೈ[50], ಅಸ್ಗರ್ ಆಫ್ಘನ್ (86) ಹಾಗೂ ಮೊಹಮ್ಮದ್ ನಬೀ[50] ಹೋರಾಟದಿಂದ 7 ವಿಕೆಟ್‌ಗೆ 249 ರನ್ ಗಳಿಸಿತ್ತು. ವಿಂಡೀಸ್ ಪರ ಕೀಮೊ ಪೌಲ್ 3, ಅಲ್ಜೇರಿ ಜೋಸೆಫ್ 2 ಹಾಗೂ ಶೆಫಾರ್ಡ್, ರೋಸ್ಟನ್ ಚೇಸ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. 

ಇನ್ನು ಇದೇ ಮೈದಾನದಲ್ಲಿ ನವೆಂಬರ್ 14ರಿಂದ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದಾದ ಬಳಿಕ ನವೆಂಬರ್ 27ರಂದು ಏಕೈಕ ಟೆಸ್ಟ್ ಪಂದ್ಯ ಜರುಗಲಿದೆ. 

ಸ್ಕೋರ್:
ಆಫ್ಘಾನಿಸ್ತಾನ 249/7
ವಿಂಡೀಸ್ 253/5