ಇಂಡೋ-ಪಾಕ್ ಪಂದ್ಯ ನಡೆಯಲು ಮೋದಿ ಸಾಹೇಬ್ ಅವಕಾಶ ಮಾಡಿಕೊಡಿ: ಅಫ್ರಿದಿ ಮನವಿ
ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ವಿಚಾರದಲ್ಲಿ ಮಧ್ಯಪ್ರವೇಶಿಸಲು ಮೋದಿಗೆ ಅಫ್ರಿದಿ ಮನವಿ
ಶಾಹಿದ್ ಅಫ್ರಿದಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ
ಏಷ್ಯಾಕಪ್ ಟೂರ್ನಿಯನ್ನಾಡಲು ಪಾಕಿಸ್ತಾನ ಪ್ರವಾಸಕ್ಕೆ ಟೀಂ ಇಂಡಿಯಾ ಹಿಂದೇಟು
ಕತಾರ್(ಮಾ.21): ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆದು ದಶಕಗಳಾಗುತ್ತಲೇ ಬಂದಿದೆ. ಐಸಿಸಿ ಹಾಗೂ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಸೆಣಸಾಡುತ್ತಾ ಬಂದಿವೆ. ಇದೀಗ ಬಹುರಾಷ್ಟ್ರಗಳು ಪಾಲ್ಗೊಳ್ಳುವ ಟೂರ್ನಿಯಲ್ಲಿಯೂ ಉಭಯ ತಂಡಗಳ ಮುಖಾಮುಖಿಗೆ ಸಂಕಷ್ಟ ಎದುರಾಗಿದೆ. ಇದೀಗ ಉಭಯ ತಂಡಗಳ ನಡುವೆ ಕ್ರಿಕೆಟ್ ನಡೆಸಲು ಅವಕಾಶ ಮಾಡಿಕೊಡಿ ಎಂದು ಭಾರತದ ಪ್ರಧಾನಿಗೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮನವಿ ಮಾಡಿಕೊಂಡಿದ್ದಾರೆ.
ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳೆಂದೇ ಬಿಂಬಿತವಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತೇ ತುದಿಗಾಲಿನಲ್ಲಿ ನಿಂತಿರುತ್ತದೆ. ಜಂಟಲ್‌ಮನ್ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್‌ಗೆ ಈ ಎರಡು ತಂಡಗಳ ಮುಖಾಮುಖಿಗೆ ರಾಜತಾಂತ್ರಿಕ ಬಿಕ್ಕಟ್ಟು ಎದುರಾಗಿದೆ. ಇದೆಲ್ಲದರ ನಡುವೆ ಅಫ್ರಿದಿ, ಪ್ರಧಾನಿ ಮೋದಿಗೆ ಎರಡು ದೇಶಗಳ ನಡುವೆ ಕ್ರಿಕೆಟ್ ನಡೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ದೋಹಾದಲ್ಲಿ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿ, ಏಷ್ಯಾ ಲಯನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಬಳಿಕ ಮಾತನಾಡಿರುವ ಶಾಹಿದ್ ಅಫ್ರಿದಿ, "ನಾನು ಪ್ರಧಾನಿ ಮೋದಿ ಸಾಹೇಬರ ಬಳಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಸಲು ಮನವಿ ಮಾಡಿಕೊಳ್ಳುತ್ತಿದ್ದೇನೆ" ಎಂದು ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಕೊನೆಯ ಬಾರಿಗೆ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಕೊನೆಯ ರೋಚಕ ಜಯ ಸಾಧಿಸಿತ್ತು. ಇದೀಗ ಮತ್ತೊಮ್ಮೆ ಮುಂಬರುವ ಸೆಪ್ಟೆಂಬರ್‌ನಲ್ಲಿ ನಡೆಯಬೇಕಿರುವ ಏಷ್ಯಾಕಪ್ ಟೂರ್ನಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಬೇಕಿವೆ. ಆದರೆ 2023ರ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನವು ಆತಿಥ್ಯವನ್ನು ವಹಿಸಿದೆ. ಹೀಗಾಗಿ ಭಾರತ ತಂಡವು ಭದ್ರತೆಯ ನೆಪವೊಡ್ಡಿ ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕುತ್ತಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ನಡೆಯುವುದು ಅನುಮಾನ ಎನಿಸಿದೆ.
IPL ಟೂರ್ನಿಗಿಂತ ಪಾಕಿಸ್ತಾನ ಸೂಪರ್ ಲೀಗ್ ನೋಡಿದವರೆ ಹೆಚ್ಚು: ಪಿಸಿಬಿ ಅಧ್ಯಕ್ಷರ ಅಚ್ಚರಿಯ ಹೇಳಿಕೆ
ನಾವು ಒಬ್ಬರ ಜತೆ ಗೆಳೆತನ ಬೆಳೆಸಬೇಕು ಎಂದು ಬಯಸಿದಾಗ, ಮತ್ತೊಬ್ಬರು ಮಾತನಾಡದೇ ಹೋದಾಗ ನಾವೇನು ಮಾಡಲು ಸಾಧ್ಯ ಹೇಳಿ?. ಬಿಸಿಸಿಐ ಬಲಿಷ್ಠ ಕ್ರಿಕೆಟ್ ಮಂಡಳಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಾವು ಬಲಿಷ್ಠರಾಗಿದ್ದಾಗ ಹೊಣೆಗಾರಿಕೆಯೂ ಹೆಚ್ಚೇ ಇರುತ್ತದೆ. ಹೀಗಾಗಿ ನೀವು ಹೆಚ್ಚು ಶತ್ರುಗಳನ್ನು ಹೊಂದುವುದಕ್ಕಿಂತ ಹೆಚ್ಚು ಸ್ನೇಹಿತರನ್ನು ಹೊಂದುವುದು ಒಳ್ಳೆಯದು. ಯಾವಾಗ ನೀವು ಹೆಚ್ಚು ಹೆಚ್ಚು ಸ್ನೇಹಿತರನ್ನು ಹೊಂದುತ್ತೀರೋ ಆಗ ನೀವು ಮತ್ತಷ್ಟು ಬಲಿಷ್ಠರಾಗುತ್ತೀರ ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಬಿಸಿಸಿಐ ಬಲಿಷ್ಠ ಕ್ರಿಕೆಟ್ ಮಂಡಳಿ ಎಂದ ಮಾತ್ರಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ದುರ್ಬಲವಾಗಿದೆ ಎಂದರ್ಥವಲ್ಲ ಎಂದು ಶಾಹಿದ್ ಅಫ್ರಿದಿ ಸ್ಪಷ್ಟಪಡಿಸಿದ್ದಾರೆ. ಇನ್ನು ಭಾರತ ಕ್ರಿಕೆಟ್ ತಂಡದಲ್ಲಿ ತಮಗೆ ಸಾಕಷ್ಟು ಒಳ್ಳೆಯ ಸ್ನೇಹಿತರಿದ್ದಾರೆ. ನಾವು ಭೇಟಿಯಾದಾಗ ಸಾಕಷ್ಟು ವಿಚಾರಗಳನ್ನು ಚರ್ಚಿಸುತ್ತೇವೆ. ಇತ್ತೀಚೆಗಷ್ಟೇ ನಾನು ಸುರೇಶ್ ರೈನಾ ಬಳಿ ಬ್ಯಾಟ್ ನೀಡುವಂತೆ ಕೇಳಿದೆ. ಆಗ ರೈನಾ ನನಗೆ ಬ್ಯಾಟ್ ನೀಡಿದರು ಎಂದು ಅಫ್ರಿದಿ ಹೇಳಿದ್ದಾರೆ.