ದುಬೈ(ಮಾ.04): ಭಾರತದ ಆರಂಭಿಕ ಬ್ಯಾಟ್ಸ್‌ವುಮೆನ್ ಶೆಫಾಲಿ ವರ್ಮಾ ನೂತನವಾಗಿ ಬಿಡುಗಡೆಯಾಗಿರುವ ಐಸಿಸಿ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ಟಿ20 ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಮಿಥಾಲಿ ರಾಜ್ ಬಳಿಕ ನಂ.1 ಶ್ರೇಯಾಂಕಕ್ಕೇರಿದ 2ನೇ ಭಾರತೀಯ ಆಟಗಾರ್ತಿ ಎನ್ನುವ ಗೌರವಕ್ಕೆ ಶೆಫಾಲಿ ಪಾತ್ರರಾಗಿದ್ದಾರೆ. 

ಮಹಿಳಾ ಟಿ20 ವಿಶ್ವಕಪ್: ಮತ್ತೆ ಅಬ್ಬರಿಸಿದ ಶೆಫಾಲಿ; ಲಂಕಾ ಎದುರು ಭಾರತಕ್ಕೆ ಸುಲಭ ಜಯ

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿರುವ 16 ವರ್ಷದ ಶೆಫಾಲಿ, ನ್ಯೂಜಿಲೆಂಡ್ ನಾಯಕಿ ಸ್ಯುಜಿ ಬೈಟ್ಸ್‌ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚುತ್ತಿರುವ ಹರ್ಯಾಣದ ರೋಹ್ಟಕ್ ಮೂಲದ ಶೆಫಾಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಕೇವಲ 6 ತಿಂಗಳೊಳಗಾಗಿ 19 ಸ್ಥಾನ ಮೇಲೇರಿ ನಂ.1 ಸ್ಥಾನಕ್ಕೇರುವ ಮೂಲಕ ಹುಬ್ಬೇರುವಂತೆ ಮಾಡಿದ್ದಾರೆ. 

ಶೆಫಾಲಿ ವರ್ಮಾ 2019ರ ಸೆಪ್ಟೆಂಬರ್‌ನಲ್ಲಿ  ಸೂರತ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದುವರೆಗೂ 18 ಟಿ20 ಪಂದ್ಯಗಳನ್ನಾಡಿರುವ ಶೆಫಾಲಿ ವರ್ಮಾ 28.52ರ ಸರಾಸರಿಯಲ್ಲಿ 2 ಅರ್ಧಶತಕ ಸಹಿತ 485 ರನ್ ಬಾರಿಸಿದ್ದಾರೆ. ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ 4 ಪಂದ್ಯಗಳನ್ನಾಡಿರುವ ಶೆಫಾಲಿ 161 ರನ್ ಬಾರಿಸಿದ್ದು, ಭಾರತ ಪರ ಗರಿಷ್ಠ ಸ್ಕೋರರ್‌ ಎನಿಸಿದ್ದಾರೆ.

ಶೆಫಾಲಿ ಜೊತೆಗಾರ್ತಿ ಸ್ಮೃತಿ ಮಂಧನಾ 2 ಸ್ಥಾನ ಕುಸಿದಿದ್ದು 6ನೇ ಸ್ಥಾನಕ್ಕೆ ಜಾರಿದ್ದಾರೆ. ಇನ್ನು ಜೆಮಿಮಾ ರೋಡ್ರಿಗಜ್ ಸಹಾ 2 ಸ್ಥಾನ ಕುಸಿದು 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲೂ ಭಾರತದ ಮೂವರು ಆಟಗಾರ್ತಿಯರು ಸ್ಥಾನ ಪಡೆದಿದ್ದು, ದೀಪ್ತಿ ಶರ್ಮಾ ಒಂದು ಸ್ಥಾನ ಕುಸಿದು 5ನೇ ಸ್ಥಾನದಲ್ಲಿದ್ದಾರೆ. ಇನ್ನು ರಾಧಾ ಯಾದವ್ ಸಹಾ 3 ಸ್ಥಾನ ಕುಸಿದು 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಪೂನಂ ಯಾದವ್ 4 ಸ್ಥಾನ ಮೇಲೇರಿ 8ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ